ದಸರಾಕ್ಕೆ ₹ 1 ಕೋಟಿ ಅನುದಾನ

7
ಹೊಸ ಆಶಾಭಾವನೆ ಮೂಡಿಸಿದ ಉಸ್ತುವಾರಿ ಸಚಿವರ ಭರವಸೆ

ದಸರಾಕ್ಕೆ ₹ 1 ಕೋಟಿ ಅನುದಾನ

Published:
Updated:

ಮಡಿಕೇರಿ: ಇತಿಹಾಸ ಪ್ರಸಿದ್ಧ ಮಡಿಕೇರಿ, ಗೋಣಿಕೊಪ್ಪಲು ದಸರಾಕ್ಕೆ ₹ 1 ಕೋಟಿ ಅನುದಾನ ನೀಡುವಂತೆ ದಸರಾ ಸಮಿತಿ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರಿಗೆ ಮನವಿ ಸಲ್ಲಿಸಿದ್ದು, ಸಚಿವರಿಂದಲೂ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.

ಕಳೆದ ಎರಡು ವರ್ಷಗಳಿಂದ ಘೋಷಣೆ ಮಾಡಿದಷ್ಟು ಅನುದಾನವೂ ಸಮಿತಿಗೆ ಬಿಡುಗಡೆಯಾಗದೆ ಸಮಸ್ಯೆ ತಲೆದೋರಿತ್ತು. ಈ ಬಾರಿ ಮೊದಲೇ ಎಚ್ಚೆತ್ತುಕೊಂಡಿರುವ ಸಮಿತಿ ಸದಸ್ಯರು ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದಾರೆ. ಸರ್ಕಾರದಿಂದ ₹ 1 ಕೋಟಿ ಅನುದಾನ ಕೊಡಿಸುವ ಭರವಸೆಯನ್ನು ಸಚಿವರು ನೀಡಿರುವುದು ಸದಸ್ಯರಲ್ಲಿ ಆಶಾಭಾವನೆ ಮೂಡಿಸಿದೆ.

ನಂತರ ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಚಿವ ಮಹೇಶ್ ಮಾತನಾಡಿ, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಹಳೆಯ ಮನೆಗಳನ್ನು ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಬಗ್ಗೆ ದೂರುಗಳು ಬರುತ್ತಿವೆ. ಈ ಸಂಬಂಧ ಸರ್ಕಾರದ ನಿರ್ದೇಶನದಂತೆ 50 ವರ್ಷಕ್ಕೂ ಹಳೆಯದಾದ ಮನೆಗಳನ್ನು (1976ಕ್ಕೂ ಮೊದಲಿನ) ಹೊಸದಾಗಿ ನಿರ್ಮಿಸಲು ಅನುಮತಿ ನೀಡುವಂತೆ ನಗರ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ‘ಹಿತ್ತಲು, ಮನೆ ದಳ ಎಂದರೆ ಅಧಿಕಾರಿಗಳಿಗೆ ಅರಿವಿಲ್ಲ. ಹೀಗಾಗಿ ಸಮಸ್ಯೆ ಉಂಟಾಗಿದೆ’ ಎಂದು ದೂರಿದರು.

ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಣಕ್ಕೆ ಅನುಮತಿ ನೀಡದಿದ್ದಲ್ಲಿ ಭೂಪರಿವರ್ತನೆ ಹೇಗೆ ಮಾಡಿದಿರಿ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರಶ್ನಿಸಿದರು. ‘ಸಮಸ್ಯೆಯನ್ನು ಇತ್ಯರ್ಥಪಡಿಸುವುದು ಇಲಾಖೆಯ ಜವಾಬ್ದಾರಿ. ಆ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು’ ಎಂದು ತಿಳಿಸಿದರು.

ಆಶ್ರಯ ಯೋಜನೆ ಅಡಿ ಮನೆ ನಿರ್ಮಾಣಕ್ಕೆ ಆದಾಯ ಮಿತಿ ಹೆಚ್ಚಳ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

ಅರಣ್ಯ ಹಕ್ಕು ಕಾಯ್ದೆ ಅಡಿ ನಿಯಮದಂತೆ ಎಲ್ಲರಿಗೂ ಸೌಲಭ್ಯ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಂದು ಸೂಚನೆ ನೀಡಿದರು.

‘ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿಗಳು ತಿರಸ್ಕೃತಗೊಳ್ಳಲು ಕಾರಣವೇನು? ತಿರಸ್ಕೃತಗೊಳ್ಳಲು ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. 13 ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಿದರೂ ಸಾಕು ಎಂದು ಹಿಂದಿನ ಕಂದಾಯ ಸಚಿವರೇ ಆದೇಶ ಹೊರಡಿಸಿದ್ದರು. ಹಾಗಿದ್ದರೂ, ಶೇ 60ರಷ್ಟು ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ’ ಎಂದು ಬೋಪಯ್ಯ ಪ್ರಶ್ನಿಸಿದರು.

ಐಟಿಡಿಪಿ ಇಲಾಖೆ ಅಧಿಕಾರಿ ಶಿವಕುಮಾರ್ ಅವರು, ‘ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ 3,621 ಅರ್ಜಿಗಳು ಸಲ್ಲಿಕೆಯಾಗಿದ್ದು, 1,722 ಅರ್ಜಿಗಳು ಅಂಗೀಕಾರವಾಗಿವೆ. 1,894 ಅರ್ಜಿಗಳು ತಿರಸ್ಕೃತಗೊಂಡಿವೆ. 2 ಅರ್ಜಿಗಳು ಬಾಕಿಯಿವೆ’ ಎಂದು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !