ಸೋಮವಾರ, ಡಿಸೆಂಬರ್ 5, 2022
21 °C
ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಉದ್ಘಾಟಿಸಿದ

ಜ್ಞಾನಾರ್ಜನೆಗೆ ತಂತ್ರಜ್ಞಾನ ಬಳಕೆಯಾಗಲಿ: ಶಾಸಕ ಎಂ.ಪಿ.ಅಪ್ಪಚ್ಚುರಂಜನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ವಿದ್ಯಾರ್ಥಿಗಳು ಲಭ್ಯವಿರುವ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡು ಹೆಚ್ಚಿನ ಜ್ಞಾನ ಪಡೆಯಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಶುಕ್ರವಾರ ನಡೆದ 2022-23ನೇ ಸಾಲಿನ ಪಠ್ಯೇತರ ಮತ್ತು ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕಾಲಘಟಕ್ಕೆ ತಕ್ಕಂತೆ ಅಪ್‍ಡೇಟ್ ಮಾಹಿತಿ ಪಡೆಯಬೇಕು. ಇದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಹಕಾರಿಯಾಗುವಂತಿರಬೇಕು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗ್ರಾಮೀಣ ಪ್ರದೇಶಕ್ಕೂ ಅಂತರ್ಜಾಲ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾರೆ. ಇದರ ಸದುಪಯೋಗ ಪಡೆಯಬೇಕು. ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಗಮನಹರಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯದ ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ, ಆರ್ಥಿಕತೆ ಹೀಗೆ ಪ್ರತಿಯೊಂದು ಕ್ಷೇತ್ರದ ಬಗ್ಗೆಯು ಸಾಮಾನ್ಯ ಜ್ಞಾನವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ತಜ್ಞ ಹಾಗೂ ಮಾಜಿ ಸೇನಾಧಿಕಾರಿ ಮೇಜರ್ ಡಾ.ಕುಶ್ವಂತ್ ಕೋಳಿಬೈಲು  ಮಾತನಾಡಿ, ‘ಮಕ್ಕಳಲ್ಲಿರುವ ಪ್ರತಿಭೆ ಸಮಾಜದಲ್ಲಿ ಒಬ್ಬ ಮುಖ್ಯ ವ್ಯಕ್ತಿಯನ್ನಾಗಿ ರೂಪಿಸುವ ಕೆಲಸ ಮಾಡುತ್ತದೆ. ಹಾಗಾಗಿ, ತಮ್ಮೊಳಗಿನ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಳ್ಳಬೇಕು’ ಎಂದು ಹೇಳಿದರು.

ಉನ್ನತ ಅಧಿಕಾರಿಯನ್ನಾಗಿ ರೂಪಿಸಲು ವಿದ್ಯಾರ್ಥಿಯಲ್ಲಿರುವ ನಾಯಕತ್ವದ ಗುಣ ಸಹಕಾರಿ. ಹಾಗಾಗಿ, ವಿದ್ಯಾರ್ಥಿಗಳು ಈಗಿನಿಂದಲೇ ನಾಯಕತ್ವದ ಜವಾಬ್ದಾರಿ ಹೊರಲು ಸಿದ್ಧರಾಗಿರಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಡಿ.ನಿರ್ಮಲಾ ಮಾತನಾಡಿ, ‘ಶಿಕ್ಷಣ ಕ್ಷೇತ್ರ ಸಮಗ್ರ ಚಟುವಟಿಕೆಗಳಿಂದ ಕೂಡಿರಬೇಕು. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಎಲ್ಲಾ ರೀತಿಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಅವುಗಳನ್ನು ವಿದ್ಯಾರ್ಥಿಗಳು ಗರಿಷ್ಠ ಮಟ್ಟದಲ್ಲಿ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕರಾದ ಡಾ.ಅನುಪಮಾ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎವರೆಸ್ಟ್ ರೊಡ್ರಿಗಸ್, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಡಾ.ಕಾವೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು