ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ರೋಗಿಗಳಿಗೆ ಧೈರ್ಯ ತುಂಬಿದ ರಂಜನ್‌

ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಪಿ.ಪಿ.ಇ ಕಿಟ್‌ ಧರಿಸಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಭೇಟಿ, ಪರಿಶೀಲನೆ
Last Updated 12 ಮೇ 2021, 14:07 IST
ಅಕ್ಷರ ಗಾತ್ರ

ಮಡಿಕೇರಿ: ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಬುಧವಾರ ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ, ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿದರು. ಬಳಿಕ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಬಿಸಿಯೂಟ ನೀಡುತ್ತಿಲ್ಲ. ಬಿಸಿ ನೀರು ನೀಡುತ್ತಿಲ್ಲ ಎಂಬ ದೂರು ಕೇಳಿ ಬಂದಿತ್ತು. ತಕ್ಷಣವೇ ದಿಢೀರ್ ಭೇಟಿ ನೀಡಿ ಸೋಂಕಿತರಿಂದ ಊಟೋಪಚಾರ ಹಾಗೂ ಆರೋಗ್ಯ ಬಗ್ಗೆ ಮಾಹಿತಿ ಪಡೆದರು.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲರ ಯೋಗಕ್ಷೇಮ ವಿಚಾರಿಸಿದ ಶಾಸಕರು ಸ್ವತಃ ತಾವೇ ಊಟ ಬಡಿಸಿ, ಸೋಂಕಿತರಿಗೆ ಧೈರ್ಯ ತುಂಬಿದರು. ಕೋವಿಡ್ ಸೋಂಕಿತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು, ಧೈರ್ಯವಾಗಿರಬೇಕು ಎಂದು ಅಪ್ಪಚ್ಚು ರಂಜನ್ ಅವರು ಸಲಹೆ ಮಾಡಿದರು.

ನಂತರ, ವೈದ್ಯಧಿಕಾರಿಗಳ ಜೊತೆ ಸಭೆ ನಡೆಸಿದ ಶಾಸಕರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ಅಧೀಕ್ಷಕ ಡಾ.ಲೋಕೇಶ್, ಸ್ಥಾನಿಕ ವೈದ್ಯಾಧಿಕಾರಿ ಡಾ.ರೂಪೇಶ್ ಗೋಪಾಲ್ ಅವರೊಂದಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿನ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ಪಡೆದರು.

ಐದು ಕಡೆ ಆರೈಕೆ ಕೇಂದ್ರ

ಜಿಲ್ಲೆಯಲ್ಲಿ ಕೋವಿಡ್ ಪ್ರಸರಣ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಶ್ರಮಿಸುತ್ತಿದೆ. ಆ ದಿಸೆಯಲ್ಲಿ ಹಲವು ಪ್ರಯತ್ನಗಳು ಜಿಲ್ಲಾಡಳಿತದಿಂದ ನಡೆದಿವೆ. ಕೋವಿಡ್ 19 ಪಾಸಿಟಿವ್ ಬಂದವರನ್ನು ಆರೈಕೆ ಮಾಡುವ ನಿಟ್ಟಿನಲ್ಲಿ ಆಯಾಯ ತಾಲ್ಲೂಕು ವ್ಯಾಪ್ತಿಯಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಸೋಂಕಿತರಿಗೆ ಅಗತ್ಯ ಔಷಧೋಪಚಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 5 ಕಡೆ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಸದ್ಯ ಮೂರು ತಾಲ್ಲೂಕುಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಲ್ಲಿ ಸೋಂಕಿತರನ್ನು ದಾಖಲು ಮಾಡಲಾಗುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಡಿಕೇರಿ ತಾಲ್ಲೂಕಿನ ನವೋದಯ ಶಾಲೆಯಲ್ಲಿ 250 ಹಾಸಿಗೆ, ಕುಶಾಲನಗರ ತಾಲ್ಲೂಕಿನ ಕೂಡಿಗೆಯ ಕೋವಿಡ್ ಆರೈಕೆ ಕೇಂದ್ರದಲ್ಲಿ 80ರಿಂದ 100 ಹಾಸಿಗೆ, ಹಾಗೆಯೇ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 80 ಹಾಸಿಗೆಯಿದೆ. ಉಳಿದಂತೆ ಪೊನ್ನಂಪೇಟೆ ತಾಲ್ಲೂಕಿನ ಏಕಲವ್ಯ ವಸತಿ ಶಾಲೆ, ಕುಶಾಲನಗರದ ಬಸವನಹಳ್ಳಿ ಶಾಲೆಯನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಮಾಡಲು ಕಾಯ್ದಿರಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT