ಮತ್ತೆ ಬಿರುಸುಗೊಂಡ ಮುಂಗಾರು ಮಳೆ

7

ಮತ್ತೆ ಬಿರುಸುಗೊಂಡ ಮುಂಗಾರು ಮಳೆ

Published:
Updated:
ಸೋಮವಾರಪೇಟೆ ತಾಲ್ಲೂಕಿನ ಇಗ್ಗೊಡ್ಲು ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಬರೆ ಕುಸಿದು ಮನೆಯೊಂದು ಹಾನಿಗೀಡಾಗುವ ಸ್ಥಿತಿಯಲ್ಲಿದೆ (ಎಡಚಿತ್ರ) ಶನಿವಾರಸಂತೆಯಲ್ಲಿ ಮಳೆ ಹಿನ್ನೆಲೆ ರಜೆ ಘೋಷಣೆಯಿಂದ ಶಾಲಾ ಕಾಲೇಜಿಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಖುಷಿಯಿಂದ ಮನೆಯತ್ತ ಹೆಜ್ಜೆ ಹಾಕಿದರು

ಸೋಮವಾರಪೇಟೆ: ಕಳೆದ ಎರಡು ದಿನಗಳಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಬಿರುಸಾಗಿ ಸುರಿಯುತ್ತಿದ್ದು, ಗುರುವಾರ ಸ್ವಲ್ಪ ಬಿಡುವು ನೀಡಿತು.

ಎರಡು ಮೂರು ದಿನಗಳಿಂದ ಮಳೆ ಬಿಡುವು ನೀಡಿ ನಂತರದ ದಿನಗಳಲ್ಲಿ ಬಿರುಸುಗೊಂಡಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡರೂ ಪೂರ್ಣ ಪ್ರಮಾಣದ ಕೆಲಸ ಮಾಡಲು ಸಾಧ್ಯವಾಗಿಲ್ಲ.

ಕಾಫಿ ತೋಟಗಳಲ್ಲಿ ಬಿಳಿಕಾಂಡ ಕೊರಕದ ಹಾವಳಿಗೆ ಸಿಲುಕಿರುವ ಕಾಫಿ ಗಿಡಗಳನ್ನು ಕಿತ್ತು, ಹೊಸ ಗಿಡಗಳನ್ನು ನೆಡುವ ಕಾರ್ಯ ನಡೆಯುತ್ತಿದೆ. ಭತ್ತದ ಗದ್ದೆಯಲ್ಲಿ ಗದ್ದೆ ಉಳುಮೆ, ಬೀಜ ಬಿತ್ತುವ ಕಾರ್ಯ ಬಿರುಸುಗೊಂಡಿದೆ. ಕೆಲವಡೆ ಮಳೆಗೆ ಚಿಕ್ಕಪುಟ್ಟ ಬರೆಗಳು ಕುಸಿದ ವರದಿಯಾಗಿದೆ.

ನಿನ್ನೆ ಸುರಿದ ಭಾರಿ ಮಳೆಗೆ ಗ್ರಾಮೀಣ ಭಾಗದಲ್ಲಿ ತೊರೆ, ಹೊಳೆಗಳು ತುಂಬಿ ಹರಿಯುತ್ತಿದ್ದು, ಕೆಲವೆಡೆ ಭತ್ತದ ಗದ್ದೆಗೆ ನೀರು ನುಗ್ಗಿದೆ. ಮಳೆ ಸುರಿಯುತ್ತಿರುವುದರಿಂದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8.30ರ ನಂತರ ರಜೆ ಘೋಷಣೆಯಾಯಿತು. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಯಿತು. ಕೆಲವು ಖಾಸಗಿ ಶಾಲೆಗಳಲ್ಲಿ ತರಗತಿ ಎಂದಿನಂತೆ ಮುಂದುವರೆಯಿತು.

‘ಹಿಂದಿನ ದಿನವೇ ರಜೆ ಘೋಷಣೆ ಮಾಡಿದರೆ, ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಬೆಳಿಗ್ಗೆ ರಜೆ ಎಂದು ತಿಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಪೋಷಕರು ದೂರಿದರು.

ಕಳೆದ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಶಾಂತಳ್ಳಿ ಹೋಬಳಿಗೆ 80.2 ಮಿ.ಮೀ., ಸೋಮವಾರಪೇಟೆ ಕಸಬಾ 53.4, ಶನಿವಾರಸಂತೆ 39, ಕೊಡ್ಲಿಪೇಟೆ 44.4, ಸುಂಟಿಕೊಪ್ಪ 38.4 ಹಾಗೂ ಕುಶಾಲನಗರಕ್ಕೆ 26 ಮಿ.ಮೀ. ಮಳೆಯಾದ ವರದಿಯಾಗಿದೆ.

ಬಿಡುವು ಕೊಟ್ಟು ಮುಂದುವರೆದ ಮಳೆ

ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಉತ್ತಮ ಮಳೆಯಾಗಿದೆ.

ಬುಧವಾರ ರಾತ್ರಿಯಿಡೀ ಸುರಿದ ಮಳೆಯು ಗುರುವಾರ ಬೆಳಿಗ್ಗೆಯೂ ಮುಂದುವರೆಯಿತು. ಮಧ್ಯಾಹ್ನದ ಬಳಿಕ ಕೊಂಚ ಬಿಡುವು ನೀಡಿ ಸಂಜೆ ವೇಳೆಗೆ ಮತ್ತೆ ಉತ್ತಮವಾಗಿ ಸುರಿಯಲಾರಂಭಿಸಿತು.

ಸಮೀಪದ ಪೆರುಂಬಾಡಿ, ಆರ್ಜಿ, ಮಾಕುಟ್ಟ, ಬೇಟೋಳಿ, ಹೆಗ್ಗಳ, ಕಾಕೋಟುಪರಂಬು, ಕದನೂರು, ಅಮ್ಮತ್ತಿ, ಬಿಳುಗುಂದ, ಬಿಟ್ಟಂಗಾಲ ದೇವಣಗೇರಿ ಮತ್ತಿತರ ಗ್ರಾಮಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !