ಮೈಸೂರು– ಊಟಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್‌

7
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ, ಮತ್ತೆ ಮೈದುಂಬಿದ ಕಾವೇರಿ ನದಿ

ಮೈಸೂರು– ಊಟಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್‌

Published:
Updated:
Deccan Herald

ಬೆಂಗಳೂರು : ಮಳೆಯ ಪ್ರಮಾಣ ತಗ್ಗಿದ್ದರೂ, ನದಿಗಳ ನೀರಿನ ಮಟ್ಟ ಇಳಿಕೆಯಾಗಿಲ್ಲ. ನಂಜನಗೂಡು ಸಮೀಪದ ಕಪಿಲಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಮೈಸೂರು– ಊಟಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲೆ ಕಪಿಲಾ ನದಿಯ ನೀರು ಹರಿಯುತ್ತಿರುವುದರಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ. ಬದಲಿ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿವೆ.

ಹೆದ್ದಾರಿಯಲ್ಲಿರುವ ಮಲ್ಲನಮೂಲೆ ಮಠಕ್ಕೆ ನೀರು ನುಗ್ಗಿದೆ. ಈ ಹಿಂದೆ 1962ರಲ್ಲಿ ನೀರು ನುಗ್ಗಿತ್ತು. ಕುಳ್ಳಂಕನಹುಂಡಿ ಮಾರಮ್ಮನ ದೇಗುಲ, ನಂಜನಗೂಡು ಅಯ್ಯಪ್ಪಸ್ವಾಮಿ, ಪರಶುರಾಮ ದೇಗುಲಗಳು, ಹಳ್ಳದಕೇರಿ, ತೋಪಿನಬೀದಿ ಮನೆಗಳು ಜಲಾವೃತಗೊಂಡಿವೆ. ನಿರಾಶ್ರಿತರಿಗೆ ಗಂಜಿ ಕೇಂದ್ರ ತೆರೆಯಲಾಗಿದೆ. ನಾಲ್ಕು ಸ್ಮಶಾನಗಳು ನೀರಿನಿಂದ ಮುಳುಗಿವೆ. ತಗ್ಗು ಪ್ರದೇಶಗಳಲ್ಲಿರುವ 2 ಶಾಲೆಗಳಿಗೆ ರಜೆ ನೀಡಲಾಗಿದೆ.

ಮೈಸೂರು– ಸುತ್ತೂರು ಸಂಪರ್ಕಿಸುವ ಸೇತುವೆ ಸಂಪೂರ್ಣ ಮುಳುಗಿದೆ. ಹೊಮ್ಮರಗಳ್ಳಿ ಮತ್ತು ನಂಜನಗೂಡು ಸಂಪರ್ಕಿಸುವ ಪ್ರಮುಖ ಸೇತುವೆ ಜಲಾವೃತಗೊಂಡಿದೆ. ಮೈಸೂರು– ಸರಗೂರು ಸಂಪರ್ಕಿಸುವ ತುಂಬಸೋಗೆ ಸೇತುವೆ ಮುಳುಗುವ ಹಂತದಲ್ಲಿದೆ.

ಕೇರಳದಿಂದ ಹರಿದು ಬರುವ ಕಪಿಲಾ ನದಿಯ ಉಪನದಿಗಳಾದ ಬಾಣಸಾಗರ, ಇರಟಿ, ತಿರುನಲ್ಲಿ, ಪನ್ನಾರ್‌ಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ಈ ವ್ಯಾಪ್ತಿಯಲ್ಲಿನ ಡಿ.ಬಿ.ಗುಪ್ಪೆ, ಮಚ್ಚೂರು, ಆನೆಮಾಳ ಗ್ರಾಮಗಳ 76 ಮನೆಗಳು ಜಲಾವೃತಗೊಂಡಿವೆ.

ಕಬಿನಿ ಜಲಾಶಯದಿಂದ 80 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಇನ್ನೂ ಒಂದು ದಿನ ಇಷ್ಟೇ ಪ್ರಮಾಣದ ನೀರು ಹೊರ ಹೋಗುವ ನಿರೀಕ್ಷೆ ಇದೆ ಎಂದು ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಶುಕ್ರವಾರವೂ ಉತ್ತಮ ಮಳೆ ಸುರಿಯಿತು. ಭಾಗಮಂಡಲ, ನಾಪೋಕ್ಲು, ತಲಕಾವೇರಿ ವ್ಯಾಪ್ತಿಯಲ್ಲಿ ಗಾಳಿ ಸಹಿತ ಮಳೆಯಾಗುತ್ತಿದೆ. ಹಾರಂಗಿ ಒಳಹರಿವು ಏರಿಕೆಯಾಗಿದೆ. ನದಿಗೆ 22,183 ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗುತ್ತಿದೆ.

ಕುಶಾಲನಗರ ಸಮೀಪದ ಯಡವನಾಡು ಗ್ರಾಮದ ಸೇತುವೆ ಮತ್ತೆ ಮುಳುಗಡೆಯಾಗಿದ್ದು ರಸ್ತೆ ಸಂಚಾರ ಬಂದ್‌ ಆಗಿದೆ. ಜಿಲ್ಲೆಯಲ್ಲಿ ಕಾವೇರಿ ನದಿಯು ಮೈದುಂಬಿಕೊಂಡು ಹರಿಯುತ್ತಿದೆ.

ತಗ್ಗಿದ ಮಳೆಯ ರಭಸ: ಘಟ್ಟ ಪ್ರದೇಶದಲ್ಲಿ ಸುರಿಯುತ್ತಿದ್ದ ಮಳೆಯ ರಭಸ ಶುಕ್ರವಾರ ತಗ್ಗಿದ್ದರಿಂದ, ಘಟ್ಟದ ಕೆಳಭಾಗದಲ್ಲಿ ಹರಿಯುವ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಹೊಳೆ, ನೇತ್ರಾವತಿ, ಕುಮಾರಧಾರ ನದಿಗಳಲ್ಲಿನ ನೀರಿನ ಮಟ್ಟವೂ ತಗ್ಗಿತ್ತು. ಸತತ ಮೂರು ದಿನಗಳಿಂದ ಮುಳುಗಡೆಯಾಗಿದ್ದ ಹೊಸಮಠ ಸೇತುವೆ ಶುಕ್ರವಾರ ಬೆಳಿಗ್ಗೆ 10 ಗಂಟೆ ವೇಳೆಗೆ ಸಂಚಾರಕ್ಕೆ ಮುಕ್ತವಾಗಿದೆ.

ರೈಲು ಸಂಚಾರ ಆರಂಭ: ಎಡಕುಮೇರಿಯಲ್ಲಿ ಭೂಕುಸಿತದಿಂದ ಎರಡು ದಿನ ಸ್ಥಗಿತಗೊಂಡಿದ್ದ ಮಂಗಳೂರು–ಬೆಂಗಳೂರು ರೈಲು ಸಂಚಾರ ಶುಕ್ರವಾರ ಆರಂಭಗೊಂಡಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ರೈಲು ಆರು ಗಂಟೆ ತಡವಾಗಿ ಸಂಚರಿಸಿತು.

ಭಾರಿ ಮಳೆ: ಮಂಗಳೂರು ನಗರ ಮತ್ತು ಸುತ್ತಮುತ್ತ ಶುಕ್ರವಾರ ಮಧ್ಯಾಹ್ನದಿಂದ ಭಾರಿ ಮಳೆ ಸುರಿದಿದೆ. ಕೊಟ್ಟಾರ ಚೌಕಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೃತಕ ನೆರೆ ಪರಿಸ್ಥಿತಿ ತಲೆದೋರಿತು. ಇಲ್ಲಿ ರಾಜಕಾಲುವೆಗಳ ನೀರು ರಸ್ತೆಯ ಮೇಲೆ ಹರಿಯಿತು.

ಶಾಲಾ– ಕಾಲೇಜುಗಳಿಗೆ ರಜೆ: ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಶನಿವಾರ (ಆ. 11) ರಜೆ ಘೋಷಿಸಲಾಗಿದೆ.

ಅಪಾಯದ ಮಟ್ಟ ಮೀರಿದ ಭದ್ರೆ: ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ಹಲವೆಡೆ ಶುಕ್ರವಾರ ಉತ್ತಮ ಮಳೆಯಾಗಿದೆ. ಭದ್ರಾ ಜಲಾಶಯಕ್ಕೆ 41,438 ಕ್ಯುಸೆಕ್‌ ನೀರು ಹರಿದು ಬರುತ್ತಿರುವ ಪರಿಣಾಮ 33,961 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿ ಅಪಾಯದ ಮಟ್ಟ ಮೀರುತ್ತಿದ್ದು ಭದ್ರಾವತಿ ನಗರದ ಹೊಸ ಸೇತುವೆ ಮೇಲೆ ನೀರು ಹರಿಯುತ್ತಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !