ಯುವಕರೇ ಮೋದಿ ಜಪ ಬಿಡಿ: ಹ್ಯಾರಿಸ್‌

ಬುಧವಾರ, ಏಪ್ರಿಲ್ 24, 2019
29 °C
ಸಿ.ಎಚ್‌. ವಿಜಯಶಂಕರ್ ಪರ ಮೈತ್ರಿ ಪಕ್ಷದ ಮುಖಂಡರ ಪ್ರಚಾರ

ಯುವಕರೇ ಮೋದಿ ಜಪ ಬಿಡಿ: ಹ್ಯಾರಿಸ್‌

Published:
Updated:
Prajavani

ಮಡಿಕೇರಿ: ‘ಯುವಕರು ಮೋದಿ... ಮೋದಿ... ಎನ್ನುವ ಜಪ ಬಿಡಬೇಕು. ಇಲ್ಲದಿದ್ದರೆ ಮತ್ತೊಮ್ಮೆ ನಿರುದ್ಯೋಗ ಸಮಸ್ಯೆ ದೇಶಕ್ಕೆ ಮಾರಕವಾಗಲಿದೆ’ ಎಂದು ಬೆಂಗಳೂರು ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್‌ ಎಚ್ಚರಿಸಿದರು.

ನಗರದ ‘ಮೈತ್ರಿ’ (ಕಾಂಗ್ರೆಸ್‌– ಜೆಡಿಎಸ್‌) ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಯುವಕರ ಭವಿಷ್ಯ ಹಾಳು ಮಾಡಿದ್ದೇ ಈ ಮೋದಿ. ಪ್ರಯೋಜನಕ್ಕೆ ಬಾರದ ಭರವಸೆಗಳನ್ನು ನೀಡಿದ್ದಾರೆ. 22 ಲಕ್ಷ ಉದ್ಯೋಗ ಖಾಲಿ ಉಳಿದಿದ್ದರೂ ಉದ್ಯೋಗ ನೀಡಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಮೋದಿ ಭರವಸೆಯೂ ಹುಸಿಯಾಗಿದೆ’ ಎಂದು ಕಿಡಿಕಾರಿದರು.

ಜಿಲ್ಲೆಯಲ್ಲಿ ಮತ ಕೇಳುವ ಸಂದರ್ಭದಲ್ಲಿ ಮೋದಿ ಮುಖ ನೋಡಿ ಮತ ನೀಡಿ ಎನ್ನುವ ಪರಿಸ್ಥಿತಿ ಪ್ರತಾಪ ಸಿಂಹ ಅವರಿಗೆ ಬಂದಿದೆ. ಕೇಂದ್ರ ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಜಿಲ್ಲೆಯ ಜನರಿಗೆ ತಲುಪಿಲ್ಲ ಎಂದು ಆರೋಪಿಸಿದರು.

ಕೊಡಗಿನ ಜನರು ಬಿಜೆಪಿ ಆಡಳಿತಕ್ಕೆ ಬೇಸತ್ತು ಹೋಗಿದ್ದಾರೆ. ಮೈತ್ರಿ ಪರ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈ ಭಾರಿ ಲೋಕಸಭೆ ಚುನಾವಣೆಯಲ್ಲಿ 56 ಇಂಚಿನ ಮೋದಿ ಎದೆಗೆ ಉತ್ತರ ನೀಡಲು ಜನರು ಮುಂದಾಗಿದ್ದಾರೆ ಎಂದು ಹೇಳಿದರು.

ಬಿಜೆಪಿ ತನ್ನ ಪ್ರಣಾಳಿಕೆಯನ್ನು ಕಾಂಗ್ರೆಸ್ ಸರ್ಕಾರದ ಯೋಜನೆಗಳಿಗೆ ಹೆಸರು ಬದಲಾವಣೆ ಮಾಡಿ ಹೊರತಂದಿದೆ. ನಿರ್ಮಲ ಭಾರತ್‌ ಯೋಜನೆಯು ಸ್ವಚ್ಛ ಭಾರತ್‌ ಯೋಜನೆಯಾಗಿ ಬದಲಾಗಿದೆ ಎಂದು ಹೇಳಿದರು. 

ಜಿಲ್ಲೆಯ ಕಾಫಿ, ಕರಿಮೆಣಸು ಬೆಳೆಗಾರರಿಗೆ ಪ್ರತಾಪ ಸಿಂಹ ಘೋರ ಅನ್ಯಾಯ ಎಸಗಿದ್ದಾರೆ. ಕನಿಷ್ಠ ಬೆಲೆಗೆ ಕಾಫಿ, ಕರಿಮೆಣಸು ಇಳಿದಿದೆ. ಜತೆಗೆ, ಆಮದು– ರಫ್ತು ನೀತಿಯಲ್ಲಿ ಜಿಲ್ಲೆಯ ರೈತರಿಗೆ ಮೋಸ ಮಾಡಿದ್ದಾರೆ. ರೈತರು ಪ್ರತಾಪಸಿಂಹ ಅವರಿಗೆ ತಕ್ಕಪಾಠ ಕಲಿಸಬೇಕು ಎಂದು ಕೋರಿದರು.

ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಕೆ. ಮಂಜುನಾಥ್‌, ಕೆಪಿಸಿಸಿ ಉಪಾಧ್ಯಕ್ಷ ಹ್ಯಾರಿಸ್‌, ಕಾಂಗ್ರೆಸ್‌ ಕೊಡಗು ಉಸ್ತುವಾರಿ ಟಿ.ಎಂ.ಶಾಹೀದ್‌, ಯಾಕೂಬ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಹನೀಫ್ ಸಂಪಾಜೆ ಹಾಜರಿದ್ದರು.

‘ರಾಹುಲ್‌ಗೆ ಸೂಕ್ತ ಭದ್ರತೆ ನೀಡಿ’
ಉತ್ತರ ಪ್ರದೇಶದಲ್ಲಿ ರಾಹುಲ್‌ ಗಾಂಧಿ ತಲೆಗೆ ಸ್ನೈಪರ್‌ ಮಾದರಿಯ ಲೇಸರ್‌ ಭೀಮ್‌ ಬಿಡಲಾಗಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಶಾಸಕ ಹ್ಯಾರಿಸ್‌ ಆಗ್ರಹಿಸಿದರು.

ರಾಹುಲ್‌ ಅವರ ಭದ್ರತಾ ಲೋಪಕ್ಕೆ ಪರೋಕ್ಷವಾಗಿ ಮೋದಿ ಕಾರಣ. ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭೀತಿ ಕಾಡುತ್ತಿದೆ. ಈ ವಿಚಾರದಲ್ಲಿ ಬಿಜೆಪಿ ನಾಯಕರನ್ನು ನಂಬಲು ಸಾಧ್ಯವಿಲ್ಲ. ರಾಹುಲ್‌ ಅವರಿಗೆ ಎಸ್‌ಪಿಜಿ ಭದ್ರತೆ ಕಡಿಮೆ ಮಾಡಿದ್ದಾರೆ. ಸೂಕ್ತ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು. 

‘ಪ್ರಕಾಶ್‌ ರೈಗೆ ಕಾಂಗ್ರೆಸ್ ಬೆಂಬಲ ಇಲ್ಲ’
ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟ ಪ್ರಕಾಶ್ ರೈ ಅವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿಲ್ಲ. ಅವರು ವೈಯಕ್ತಿಕವಾಗಿ ನನಗೆ ಗೆಳೆಯ. ಈ ಬಾರಿ ಅವರು ಸ್ಪರ್ಧೆ ಮಾಡುವುದು ಬೇಕಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಹ್ಯಾರಿಸ್ ಉತ್ತರಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !