ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದಲ್ಲಿ ‘ಓವರ್‌ಹೆಡ್‌ ಟ್ಯಾಂಕ್‌’, ಕಣ್ಮುಚ್ಚಿ ಕುಳಿತ ನಗರಸಭೆ ಆಡಳಿತ

ಅನಾಹುತವಾದರೆ ಯಾರು ಹೊಣೆ: ನಾಗರಿಕರ ಪ್ರಶ್ನೆ
Last Updated 14 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಹಳೇ ಕೋಟೆ ಆವರಣದಲ್ಲಿರುವ ಓವರ್‌ಹೆಡ್ ಟ್ಯಾಂಕ್‌ ಶಿಥಿಲಾವಸ್ಥೆಯಲ್ಲಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ. ಇದೇ ನೀರಿನ ಟ್ಯಾಂಕ್‌ನಿಂದ ನಗರದ ಕೆಲವು ಬಡಾವಣೆಗಳಿಗೆ ನೀರು ಪೂರೈಕೆ ಆಗುತ್ತಿದೆ.

ಆದರೆ, ಈಚೆಗೆ ಟ್ಯಾಂಕ್‌ನ ಕಂಬಗಳು ಹಾಗೂ ಮೇಲ್ಚಾವಣಿ ಶಿಥಿಲವಾಗಿದ್ದು, ಪ್ರತಿನಿತ್ಯ ಸಂಗ್ರಹಿಸುವ ನೀರು ಸೋರುತ್ತಿದೆ. ಅಲ್ಲದೇ ಟ್ಯಾಂಕ್‌ ಬಳಿ ಜನರು ಸಂಚರಿಸಲೂ ಭಯಪಡುವ ಸ್ಥಿತಿಯಿದೆ. ನೀರಿನ ಸಂಗ್ರಹ ಹೆಚ್ಚಾದಂತೆ ಟ್ಯಾಂಕ್‌ನಿಂದ ನೀರು ಸೋರುತ್ತಿರುವುದರಿಂದ ಆತಂಕ ಮನೆ ಮಾಡಿದೆ.

ಟ್ಯಾಂಕ್‌ನ ಕಂಬಗಳು ಸಂಪೂರ್ಣವಾಗಿ ಹಾಳಾಗಿದ್ದು, ಕಂಬಗಳಿಗೆ ಹಾಕಿದ್ದ ಸಿಮೆಂಟ್ ಉದುರಿ ಬಿದ್ದಿದೆ. ಕಬ್ಬಿಣದ ಸಲಾಕೆಗಳು ಕಾಣಿಸಿಕೊಂಡಿದ್ದು, ಟ್ಯಾಂಕ್ ಯಾವ ಸಮಯದಲ್ಲಾದರೂ ಬೀಳುವ ಸ್ಥಿತಿಯಿದೆ. ನಗರಸಭೆ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ.

7.50 ಲಕ್ಷ ಲೀಟರ್ ಸಾಮರ್ಥ್ಯವುಳ್ಳ ಟ್ಯಾಂಕ್‌ನಿಂದ ಮೈಸೂರು ರಸ್ತೆ, ಮೂರ್ನಾಡು ರಸ್ತೆ, ಮಂಗಳೂರು ರಸ್ತೆ, ಗೌಳಿಬೀದಿ, ಸರ್ಕಾರಿ ಬಸ್ ನಿಲ್ದಾಣ, ಹೊಸ ಬಡಾವಣೆ, ಬ್ರಾಹ್ಮಣರ ಬೀದಿ, ಪೆನ್ಷನ್ ಲೈನ್ ನಿವಾಸಿಗಳಿಗೆ ನೀರು ಪೂರೈಕೆ ಆಗುತ್ತದೆ. ಆದರೆ, ಟ್ಯಾಂಕ್‌ ಏಕಾಏಕಿ ಕುಸಿದರೆ ಈ ಬಡಾವಣೆಯ ನಿವಾಸಿಗಳು ಕುಡಿಯುವ ನೀರಿಗೂ ತೊಂದರೆ. ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡರೆ ಸಮಸ್ಯೆ ಬಗೆಹರಿಯಲಿದೆ.

ನೂತನ ಟ್ಯಾಂಕ್‌ ನಿರ್ಮಾಣ: ಸ್ಟೀವರ್ಟ್ ಹಿಲ್‌ನಲ್ಲಿ ನೂತನವಾಗಿ 25 ಲಕ್ಷ ಲೀಟರ್‌ನ ನೀರಿನ ಟ್ಯಾಂಕ್ ನಿರ್ಮಿಸುವಲ್ಲಿ ನಗರಸಭೆಯಲ್ಲಿ ಈ ಹಿಂದೆ ಚರ್ಚೆ ನಡೆದಿತ್ತು. ಆದರೆ, ಜಾಗದ ಸಮಸ್ಯೆಯಿಂದ ಯೋಜನೆಗೆ ಇನ್ನೂ ಹಸಿರು ನಿಶಾನೆ ಸಿಕ್ಕಿಲ್ಲ.

ಟ್ಯಾಂಕ್‌ ದುರಸ್ತಿಗೆ ಇಲಾಖೆ ತಡೆ: ‘ಶಿಥಿಲಗೊಂಡಿರುವ ಟ್ಯಾಂಕ್‌ ದುರಸ್ತಿಗೆ ವರ್ಷದ ಹಿಂದೆಯೇ ನಗರಸಭೆ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ತಡೆಯೊಡ್ಡಿರುವ ಪರಿಣಾಮ ಅಭಿವೃದ್ಧಿ ಕಾರ್ಯ ಸಾಧ್ಯವಾಗಿಲ್ಲ’ ಎಂದು ನಗರಸಭೆ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಹೇಳಿದರು.

ಸ್ಥಳೀಯ ಸಂಘಟನೆಯಿಂದ ಸ್ವಚ್ಛತಾ ಕಾರ್ಯ: ನಗರದ ಕೋಟೆ ಆವರಣದಲ್ಲಿ 10 ದಿನಗಳ ಹಿಂದೆ ಕೆಲವು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆದಿತ್ತು. ಪಾರಂಪರಿಕ ಕಟ್ಟಡದ ಸುತ್ತಮುತ್ತ ಪರಿಸರವನ್ನು ಸ್ವಚ್ಛಗೊಳಿಸಲಾಗಿತ್ತು. ಆದರೆ, ಕೋಟೆ ಸ್ವಚ್ಛತೆಯ ಜತೆಗೆ ಇಲ್ಲಿನ ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್‌ ತೆರವುಗೊಳಿಸುವ ಕ್ರಮ ಆಗಿಲ್ಲ. ಜಿಲ್ಲಾಡಳಿತ ಹಾಗೂ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ ಎಂದು ಮಹದೇವ ಪೇಟೆ ನಿವಾಸಿ ರೋಷನ್ ದೂರುತ್ತಾರೆ.

ಕೋಟೆ ವೀಕ್ಷಿಸಲು ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ. ಅಲ್ಲದೇ ಜಿಲ್ಲಾ ಪಂಚಾಯಿತಿ ಕಚೇರಿ, ನ್ಯಾಯಾಲಯ ಸಂಕೀರ್ಣ ಸಹ ಇದೇ ಆವರಣದಲ್ಲಿದೆ. ಪ್ರತಿನಿತ್ಯ ನೂರಾರು ಮಂದಿ ಈ ಆವರಣದಲ್ಲಿ ಸಂಚರಿಸುತ್ತಲೇ ಇರುತ್ತಾರೆ. ಟ್ಯಾಂಕ್‌ ಬಳಿ ಸಂಚರಿಸದಂತೆ ಎಚ್ಚರಿಕೆ ನಾಮಫಲಕವನ್ನಾದರೂ ಅಳವಡಿಸಬೇಕು. ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಆಟೊ ಚಾಲಕ ನವೀನ್‌ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT