ಸುಂಟಿಕೊಪ್ಪ: ‘ಶೋಷಿತ ವರ್ಗಗಳು ಉನ್ನತವಾದ ಮಾರ್ಗದಲ್ಲಿ ಮುನ್ನಡೆಯಲು ನಾರಾಯಣ ಗುರುಗಳು ಕಾರಣಕರ್ತರಾಗಿದ್ದಾರೆ’ ಎಂದು ಕುಶಾಲನಗರ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸತೀಶ್ ತಿಳಿಸಿದರು.
ಇಲ್ಲಿನ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ವತಿಯಿಂದ ಮಂಗಳವಾರ ರಾತ್ರಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನಾರಾಯಣ ಗುರುಗಳ 170ನೇ ಜಯಂತಿ ಹಾಗೂ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒಂದೇ ಕುಲ, ಮನುಜರೆಲ್ಲ ಒಂದೇ ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳ ಜೀವನವನ್ನು ನಾವೆಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜಾತೀಯತೆ ಪ್ರಬಲವಾಗಿದ್ದ ಕಾಲಘಟ್ಟದಲ್ಲಿ ದೇವಾಲಯಗಳನ್ನು ನಿರ್ಮಿಸಿ ಶೋಷಿತ ವರ್ಗಕ್ಕೆ ದೇವಾಲಯಗಳ ಪ್ರವೇಶಕ್ಕೆ ನಾರಾಯಣ ಗುರುಗಳು ಅವಕಾಶ ಮಾಡಿಕೊಟ್ಟಿದ್ದು ಒಂದು ಸಾಧನೆಯ ಪ್ರತೀಕ ಎಂದು ಬಣ್ಣಿಸಿದದರಲ್ಲದೆ, ನಾರಾಯಣ ಗುರು ಸಮುದಾಯದ ಏಳಿಗೆಗೆ ನೀಡಿರುವ ಕೊಡುಗೆ ಮತ್ತು ಆದರ್ಶ ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕಾಗಿದೆ’ ಎಂದರು.
ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಸದಸ್ಯರಾದ ವೀಣಾ ಮಾತನಾಡಿ, ‘ಸಹೋದರಿಯ ರಕ್ಷಣೆಯನ್ನು ಪ್ರತಿಯೊಬ್ಬ ಸಹೋದರನು ಮಾಡಿದ್ದಲ್ಲಿ ರಾಮ ರಾಜ್ಯದ ಕಲ್ಪನೆ ನನಸಾಗಲಿದೆ ಎಂದರಲ್ಲದೇ, ಪ್ರತಿಯೊಂದು ವಿಚಾರದಲ್ಲೂ ಹಾಗೂ ಮಹಿಳೆಯರಿಗೆ ಸಮಸ್ಯೆಗಳು ಉಂಟಾದಲ್ಲಿ ಎಲ್ಲರೂ ತಮ್ಮ ಮನೆಯ ಸಮಸ್ಯೆ ಎಂದು ಭಾವಿಸಿ, ಬಗೆಹರಿಸಲು ಸಿದ್ಧರಿರಬೇಕು. ಹಾಗಾದಾಗ ಮಾತ್ರ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿ ಮಹಿಳೆಯ ಬೆಂಬಲಕ್ಕೆ ಪುರುಷ ಸಮಾಜ ಇದೆ ಎನ್ನುವ ನಿಟ್ಟಿನಲ್ಲಿ ರಕ್ಷಾಬಂಧನ ಒಂದು ಅಡಿಪಾಯವಾಗಿದೆ’ ಎಂದು ಬಣ್ಣಿಸಿದರು.
ಕಾರ್ಯಕ್ರಮಕ್ಕೂ ಮೊದಲು ನಾರಾಯಣ ಗುರುಗಳ ಭಾವಚಿತ್ರಕ್ಕೆ ನಾರಾಯಣಗುರು ಬಿಲ್ಲವ ಸೇವಾ ಸಂಘದ ಸಲಹಾ ಸಮಿತಿಯ ಸದಸ್ಯರಾದ ಬಿ.ಬಿ ಮೋನಪ್ಪ ಪೂಜಾರಿ ಅವರು ಪೂಜೆ ಸಲ್ಲಿಸಿದರು.
ನಂತರ ನೆರೆದಿದ್ದ ಬಿಲ್ಲವ ಸಮಾಜದ ಸದಸ್ಯರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಾರಾಯಣ ಗುರುಗಳ ಜಯಂತಿ ಆಚರಿಸಿದರು.
ಹಾಗೆಯೇ, ಸಮಿತಿಯ ಸದಸ್ಯರು ಒಬ್ಬರಿಗೊಬ್ಬರು ರಾಖಿ ಕಟ್ಟುವ ಮೂಲಕ ರಕ್ಷಾಬಂಧನವನ್ನು ಆಚರಿಸಿ ಸಂತೋಷಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎಂ ಮಣಿ ಮುಖೇಶ್, ಗೌರವ ಉಪಸ್ಥಿತಿಯಾಗಿ ದೇಯಿ ಬೈದೇತಿ ಮಹಿಳಾ ಸಂಘದ ಅಧ್ಯಕ್ಷರಾದ ಮಧು ನಾಗಪ್ಪ ವಹಿಸಿದ್ದರು.
ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೋಟ್ಯಾನ್ ಸಲಹಾ ಸಮಿತಿ, ಖಜಾಂಚಿ ಬಿ.ಎಂ.ಚಂದ್ರ, ಸದಸ್ಯರಾದ ಡಾ. ಯಶೋಧರ ಪೂಜಾರಿ, ಕೆ.ಪಿ. ಜಗನ್ನಾಥ್, ಬಿ.ಬಿ ಜಿನ್ನಪ್ಪ ಪೂಜಾರಿ, ಬಾಬು ಪೂಜಾರಿ, ರಮೇಶ್ ಪೂಜಾರಿ, ರಮೇಶ್ ಕೊಡಗರಹಳ್ಳಿ, ಅಂಜಲಿ ಯಶೋಧರ ಪೂಜಾರಿ, ಮಹಿಮಾ ಸತ್ಯ, ಪೂರ್ಣಿಮಾ ರವಿ, ಬೇಬಿ, ಮೀನಾಕ್ಷಿ, ಅಶೋಕ್, ಮಿಲನ್, ಹರೀಶ್ ಸೋಮವಾರಪೇಟೆ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.