ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾರಾಯಣ ಗುರು ಜಾತಿ, ಮೌಢ್ಯದ ವಿರುದ್ಧ ಹೋರಾಡಿದ್ದ ಸುಧಾರಕ’

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ
Last Updated 16 ಸೆಪ್ಟೆಂಬರ್ 2019, 14:09 IST
ಅಕ್ಷರ ಗಾತ್ರ

ಮಡಿಕೇರಿ: ‘ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದ ಶ್ರೀನಾರಾಯಣ ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಅರಿತು ಮುನ್ನಡೆಯಬೇಕು’ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕರೆ ನೀಡಿದರು.

ಜಿಲ್ಲಾಡಳಿತದಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸೋಮವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಬಹಳ ಹಿಂದೆಯೇ ಜಾತಿ, ಮೌಢ್ಯದ ವಿರುದ್ಧ ಹೋರಾಡಿ ಶೋಷಿತರಲ್ಲಿ ಜಾಗೃತಿ ಮೂಡಿಸಿದ್ದರು. ದೇಶ ಸೇವೆಯೇ ಈಶ ಸೇವೆ ಎಂಬುದನ್ನು ಮನಗಂಡಿದ್ದ ನಾರಾಯಣ ಗುರು, ತಿರುವಂತನಪುರಂನಿಂದ ಬೆಳಗಾವಿ ತನಕ ಪಾದಯಾತ್ರೆ ಹಮ್ಮಿಕೊಂಡು ಸಮಾಜದಲ್ಲಿ ಎಲ್ಲರೂ ಸಮಾನರೆಂಬ ಸಂದೇಶ ಸಾರಿದ್ದರು’ ಎಂದು ನುಡಿದರು.

ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ‘ಪ್ರತಿ ಸಮಾಜದಲ್ಲೂ ಮಹಾನ್ ದಾರ್ಶನಿಕರು ಇರುತ್ತಾರೆ. ಸಮಾಜದ ಒಳಿತಿಗಾಗಿ ದುಡಿದಿದ್ದಾರೆ. ಎಲ್ಲರೂ ಅಭಿವೃದ್ಧಿಯತ್ತ ಚಿಂತನೆ ಮಾಡಬೇಕು. ಹಿಂದಿಗಿಂತಲೂ ಇಂದು ಸಾಕಷ್ಟು ಸುಧಾರಣೆ ಕಂಡಿದೆ’ ಎಂದು ಹೇಳಿದರು.

ಸರ್ವೋದಯ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ‘ಮನುಕುಲದ ಏಕತೆಗಾಗಿ ಶ್ರಮಿಸಿದ ನಾರಾಯಣ ಗುರು ಅವರು ಸಮಾಜ ಸುಧಾರಕರಾಗಿ ವಿಶ್ವ ಮಾನವತವಾದಿ ಆಗಿದ್ದಾರೆ’ ಎಂದು ಹೇಳಿದರು.

ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ ಶೋಷಿತ ಸಮಾಜ ಸುಧಾರಣೆಗಾಗಿ ಜೀವನವಿಡೀ ಶ್ರಮಿಸಿದ್ದಾರೆ. ಮೌಢ್ಯಗಳ ವಿರುದ್ಧ ಹೋರಾಟ ಮಾಡಿ ಸಮಾಜ ಸುಧಾರಕರಾಗಿ, ಮಾನವತೆಯ ಏಕತೆಗಾಗಿ ಶ್ರಮಿಸಿದ್ದಾರೆ ಎಂದು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್, ‘ಇಂದಿಗೂ ಸಹ ಜಾತೀಯತೆ ಕಾಣಬಹುದಾಗಿದೆ’ ಎಂದು ವಿಷಾದಿಸಿದರು.

ಶ್ರೀನಾರಾಯಣ ಗುರು ಧರ್ಮ ಪರಿಪಾಲನಾ ಯೂನಿಯನ್ (ಎಸ್‌ಎನ್‌ಡಿಪಿ) ಸಂಚಾಲಕರಾದ ಕೆ.ಎನ್.ವಾಸು ಮಾತನಾಡಿ, ಸಂಘಟನೆಯಿಂದ ಶಕ್ತರಾಗಬೇಕು. ವಿದ್ಯಾರ್ಜನೆಯಿಂದ ಪ್ರಬುದ್ಧರಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ವೈ.ಆನಂದ ರಘು ಮಾತನಾಡಿ, ನಾರಾಯಣ ಗುರು ಅವರ ಸಂದೇಶಗಳು ಎಲ್ಲೆಡೆ ತಲುಪಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಜಿ.ಪಂ ಸದಸ್ಯರಾದ ಕಲಾವತಿ ಪೂವಪ್ಪ, ಸುನಿತಾ, ಬಿಲ್ಲವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಭಾಸ್ಕರ್, ವಾಸು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನಾ, ಮಣಜೂರು ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT