ಶಾಲಾ ಕಟ್ಟಡಕ್ಕೆ ಹೈಟೆಕ್ ಸ್ಪರ್ಶ: ಭರವಸೆ

7
ಮಕ್ಕಂದೂರಿನಲ್ಲಿ ಶಾಲಾ ಕಟ್ಟಡ ನಿರ್ಮಾಣ, ಸ್ಥಳ ಪರಿಶೀಲಿಸಿದ ಅಕ್ಕ ಸಂಸ್ಥೆ ಪದಾಧಿಕಾರಿಗಳು

ಶಾಲಾ ಕಟ್ಟಡಕ್ಕೆ ಹೈಟೆಕ್ ಸ್ಪರ್ಶ: ಭರವಸೆ

Published:
Updated:
Prajavani

ಮಡಿಕೇರಿ: ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಸಂಸ್ಥೆ ವತಿಯಿಂದ ತಾಲ್ಲೂಕಿನ ಮಕ್ಕಂದೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಾಲಾ ಕೊಠಡಿ ನಿರ್ಮಾಣದ ಸ್ಥಳವನ್ನು ಅಕ್ಕ ಸಂಸ್ಥೆಯ ಗೌರವಾಧ್ಯಕ್ಷ ಅಮರನಾಥ ಗೌಡ, ಅಧ್ಯಕ್ಷ ಶಿವಮೂರ್ತಿ ಕಿಲಾರ, ಮಾಜಿ ಅಧ್ಯಕ್ಷ ವಿಶ್ವಾಮಿತ್ರ ನೇತೃತ್ವದ ತಂಡವು ಶನಿವಾರ ಪರಿಶೀಲಿಸಿತು.      

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಿವಮೂರ್ತಿ ಕಿಲಾರ ಮಾತನಾಡಿ, ‘₹50 ಲಕ್ಷ ವೆಚ್ಚದಲ್ಲಿ ಮೂರು ಕೊಠಡಿ, ಸಭಾಂಗಣ ಹಾಗೂ ಶೌಚಾಲಯವನ್ನು ನಿರ್ಮಿಸಲಾಗುತ್ತದೆ. ಶಾಲಾ ಕಟ್ಟಡವನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂಬುದು ನಮ್ಮ ಉದ್ದೇಶ. ಇದರಿಂದ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರುವಂತಾಗಬೇಕು’ ಎಂದರು.   

ಅಕ್ಕ ಸಂಸ್ಥೆ ಸ್ಥಾಪಕ ಅಧ್ಯಕ್ಷ ಅಮರನಾಥಗೌಡ ಮಾತನಾಡಿ, ‘ಅಮೆರಿಕದಲ್ಲಿ ಕನ್ನಡಿಗರನ್ನು ಒಟ್ಟುಗೂಡಿಸಿ ಕನ್ನಡ ನಾಡು, ನುಡಿ ಹಾಗೂ ಪರಂಪರೆಯನ್ನು ಪಸರಿಸುವ ಕೆಲಸವನ್ನು ಮಾಡಲಾಗುತ್ತಿದೆ. ಸಂಸ್ಥೆಯು ಶಾಲೆ, ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ’ ಎಂದು ತಿಳಿಸಿದರು. 

ಕಲಬುರ್ಗಿ ವಿಭಾಗದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಮಾತನಾಡಿ, ‘ಅಮೆರಿಕದಲ್ಲಿ ಕನ್ನಡ ವಾತಾವರಣ ಸೃಷ್ಟಿಸಲು ಅಕ್ಕ ಸಂಸ್ಥೆಯು ಶ್ರಮಿಸುತ್ತಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ನೀಡಿದೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಸತೀಶ್, ರಮೇಶ್ ಹಾಗೂ ಶಾಲಾ ಮುಖ್ಯಶಿಕ್ಷಕಿ ಭವಾನಿ ಮಾತನಾಡಿದರು.

ಎಸ್‍ಡಿಎಂಸಿ ಅಧ್ಯಕ್ಷ ಹರೀಶ್, ಮಧು, ಪಿಡಿಒ ಇದ್ದರು. ಶಿಕ್ಷಕ ರಂಜಿತ್ ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !