ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಅರಣ್ಯ ಪ್ರದೇಶದಲ್ಲಿ ಆನೆಗಳಿಗೆ ಆಹಾರ ಅಲಭ್ಯ

ಅರಣ್ಯದಲ್ಲಿ ಬೆಳೆಸಿ ಹಲಸು, ಬಿದಿರು
Last Updated 17 ಮೇ 2019, 20:00 IST
ಅಕ್ಷರ ಗಾತ್ರ

ಸಿದ್ದಾಪುರ: ಕಾಡಾನೆಯ ಉಪಟಳದಿಂದ ಗ್ರಾಮಸ್ಥರು ಹಾಗೂ ಬೆಳೆಗಾರರು ತತ್ತರಿಸಿದ್ದು, ಭಯದಿಂದಲೇ ದಿನ ದೂಡಬೇಕಾದ ಸ್ಥಿತಿ ಎದುರಾಗಿದೆ.

ಜಿಲ್ಲೆಯ ಹಲವು ಭಾಗದಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗುತ್ತಿದೆ. ಮತ್ತೊಂದೆಡೆ ಕಾಡಾನೆ ಹಾವಳಿಯಿಂದ ಪ್ರಾಣಹಾನಿಯೂ ಕೂಡ ಸಂಭವಿಸುತ್ತಿದೆ.

ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ ಬೆಳೆಗಾರರು ಹಾಗೂ ಕಾರ್ಮಿಕರ ಜೀವನ ದುಸ್ತರವಾಗಿದೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಸಾಕಷ್ಟು ಬಾರಿ ಅರಣ್ಯದೊಳಗೆ ಅಟ್ಟಿಸಿದರೂ ಕೂಡ ಕಾಡಾನೆಗಳು ಮರಳಿ ಕಾಫಿ ತೋಟದೊಳಗೆ ಬರುತ್ತಿವೆ.

ಅರಣ್ಯದಲ್ಲಿ ಕಾಡಾನೆಗಳಿಗೆ ಬೇಕಾದ ಕುಡಿಯುವ ನೀರು, ಆಹಾರಗಳು ಸಿಗದ ಹಿನ್ನೆಲೆಯಲ್ಲಿ ಆಹಾರ ಅರಿಸಿಕೊಂಡು ಕಾಫಿ ತೋಟಗಳಲ್ಲಿ ಬಂದು ಅಲ್ಲಿಯೇ ಬೀಡುಬಿಟ್ಟಿವೆ. ಅಲ್ಲದೇ ತೋಟಗಳಲ್ಲೇ ಕಾಡಾನೆಗಳ ಸಂತಾನೋತ್ಪತ್ತಿ ಆಗುತ್ತಿದ್ದು, ಇತ್ತೀಚೆಗೆ ಕಾಡಾನೆಗಳ ಸಂಖ್ಯೆಯೂ ಕೂಡಾ ಹೆಚ್ಚಾಗಿದೆ.

ಸಿದ್ದಾಪುರ ಭಾಗದ ಕಾಫಿ ತೋಟಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಾನೆಗಳ ಸಂಖ್ಯೆ ಹೆಚ್ಚಾಗಿದ್ದು ಬಿಬಿಟಿಸಿ, ಟಾಟಾ ಸೇರಿದಂತೆ ಖಾಸಗಿ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಡುತ್ತಿವೆ ಎಂದು ಈ ಭಾಗದಲ್ಲಿ ಕಾರ್ಮಿಕರು ಹಾಗೂ ಬೆಳೆಗಾರರು ನೋವು ತೋಡಿಕೊಳ್ಳುತ್ತಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಆರ್.ಆರ್.ಟಿ. ತಂಡವು ಕಾಡಾನೆಗಳಿರುವ ತೋಟಗಳ ಮಾಲೀಕರ ವ್ಯಾಟ್ಸ್‌ಆ್ಯಪ್‌ ಗ್ರೂಪ್ ಮೂಲಕ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿಸುತ್ತಿದ್ದು, ಪಟಾಕಿ ಶಬ್ದಗಳಿಗೆ ಬೇದರಿ ಕಾಡಾನೆಗಳು ಅರಣ್ಯದತ್ತ ತೆರಳುತ್ತವೆ. ಆದರೆ, ಅರಣ್ಯ ವ್ಯಾಪ್ತಿಯಿಂದ ರಾತ್ರಿ ಸಮಯದಲ್ಲಿ ಮತ್ತೆ ಕಾಫಿ ತೋಟದೊಳಗೆ ಕಾಡಾನೆಗಳು ನುಸುಲಿ ದಾಂಧಲೆ ನಡೆಸುತ್ತಿರುವುದು ಸಾಮಾನ್ಯವಾಗಿದೆ.

ಕಾಡಾನೆಗಳು ಕಾಡಿನಿಂದ ನಾಡಿಗೆ ಬರದಂತೆ ತಡೆಯಲು ಮುಖ್ಯವಾಗಿ ಅರಣ್ಯದಲ್ಲಿ ಕಾಡಾನೆಗಳಿಗೆ ಸೂಕ್ತ ಆಹಾರ ಹಾಗೂ ನೀರು ನೀಡಬೇಕಾಗಿದೆ. ಇದನ್ನು ಕಲ್ಪಿಸಿದ ಬಳಿಕ ಅರಣ್ಯದ ಸುತ್ತಲೂ ರೈಲ್ವೆ ಹಳಿಗಳ ಗೇಟ್ ನಿರ್ಮಿಸಬೇಕಾಗಿದೆ. ಆದರೆ, ರೈಲ್ವೆ ಹಳಿಗಳ ಗೇಟ್ ದುಬಾರಿಯಾಗಿದ್ದು, ಪ್ರತಿ ಕಿ.ಮೀ ರೈಲು ಹಳಿ ಬೇಲಿ ಗೇಟ್‍ಗೆ ₹ 1.20 ಕೋಟಿ ವೆಚ್ಚ ತಗುಲಲಿದೆ. ಜಿಲ್ಲೆಯಲ್ಲಿ ಅಂದಾಜು 274 ಕಿ.ಮೀ ಅರಣ್ಯದ ಗಡಿಯಿದ್ದು, ಸಂಪೂರ್ಣ ರೈಲು ಹಳಿ ಹಾಕಲು ಅಂದಾಜು ₹ 300 ಕೋಟಿ ಅನುದಾನ ಅಗತ್ಯವಿದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.

ಪ್ರತಿ ವರ್ಷವೂ ಕೇವಲ ₹ 15 ಕೋಟಿ ಮಾತ್ರ ಬಿಡುಗಡೆ ಆಗುತ್ತಿರುವುದರಿಂದ ಕಾಮಗಾರಿ ನಿಧಾನವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ರೇಡಿಯೋ ಕಾಲರ್ ಬಳಕೆ

ಕಾಡಾನೆಗಳ ಚಲನವಲನ ಗಮನಿಸಲು ಹಾಗೂ ಕೃಷಿಕರು– ಕಾರ್ಮಿಕರಿಗೆ ಮುನ್ನೆಚ್ಚರಿಕೆ ನೀಡುವ ಉದ್ದೇಶದಿಂದ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ. ಅರಣ್ಯ ಇಲಾಖೆಯು ಕಾಡಾನೆ ಹಿಂಡನ್ನು ಗುರುತಿಸಿ, ಆ ಹಿಂಡಿನಲ್ಲಿರುವ ಹೆಣ್ಣಾನೆಯನ್ನು ಸಾಕಾನೆಗಳ ಮೂಲಕ ಸೆರೆ ಹಿಡಿದು ಕಾಡಾನೆಯ ಕತ್ತಿಗೆ ರೇಡಿಯೋ ಕಾಲರ್ ಅಳವಡಿಸುತ್ತಿದ್ದಾರೆ. ಇದಾದ ಬಳಿಕ ಹೆಣ್ಣಾನೆಯನ್ನು ಹಿಂಡಿನ ಜೊತೆಗೆ ಬಿಡಲಾಗುತ್ತಿದ್ದು, ಪ್ರತಿದಿನವೂ ಕೂಡ ಜಿ.ಪಿ.ಎಸ್ ಮೂಲಕ ಕಾಡಾನೆ ತೆರಳುವ ಜಾಗವನ್ನು ಗುರುತಿಸಿ, ಆ ಭಾಗದ ರೈತರು ಹಾಗೂ ಬೆಳೆಗಾರರಿಗೆ ಮಾಹಿತಿ ನೀಡಲಾಗುತ್ತಿದೆ.

ಆರ್.ಆರ್.ಟಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಕೂಡ ಕಾಡಾನೆ ಇರುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತಿದ್ದ ನಾಲ್ಕು ಕಾಡಾನೆಗಳನ್ನು ಸೆರೆ ಹಿಡಿಯಲಾಗಿತ್ತು. ಅದಕ್ಕೂ ಮೊದಲ ವರ್ಷದಲ್ಲಿ ಎರಡು ಕಾಡಾನೆಗಳನ್ನು ಸೆರೆ ಹಿಡಿಯಲಾಗಿತ್ತು. ಕಳೆದ ಪರ್ಷದಲ್ಲಿ ಉಪಟಳ ನೀಡುತ್ತಿರುವ 2 ಪುಂಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿದ್ದರೂ ಈವರೆಗೂ ಕಾಡಾನೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿಲ್ಲ ಎಂದು ಆರೋಪಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT