ಭಾನುವಾರ, ನವೆಂಬರ್ 29, 2020
24 °C
ಸರ್ಕಾರಿ ಶಾಲೆಯೂ ವರ್ಣಮಯ

ಮೇಕೇರಿ: ಅಂಗನವಾಡಿ ಅಂಗಳದಲ್ಲಿ ಅಂದದ ಉದ್ಯಾನ

ಸಿ.ಎಸ್‌. ಸುರೇಶ್‌ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ಇಂದು ಮಕ್ಕಳ ದಿನಾಚರಣೆ. ಮಡಿಕೇರಿ ತಾಲ್ಲೂಕಿನ ಮೇಕೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ಆಕರ್ಷಿಸುವಂತ ಉದ್ಯಾನವನ್ನು ರೂಪಿಸಲಾಗಿದೆ. ಅಂಗನವಾಡಿ ಕಟ್ಟಡವೂ ಸೇರಿದಂತೆ ಸುತ್ತಲಿನ ಪರಿಸರ ವರ್ಣ ರಂಜಿತವಾಗಿದೆ.

ಆವರಣದಲ್ಲಿ ಎಲ್ಲರ ಸೆಳೆಯುವ ಬಣ್ಣಬಣ್ಣದ ಹೂಗಳು, ಚಿಗುರೊಡೆದ ಹಣ್ಣಿನ ಗಿಡಗಳು ಕಾಣುತ್ತವೆ. ಮಕ್ಕಳಿಗೆ ಆಟವಾಡಲು ಜೋಕಾಲಿ, ಜಾರುಬಂಡೆಗಳಿವೆ. ಆರು ತಿಂಗಳ ಹಿಂದೆ ಅಂದ ಕಳೆದುಕೊಂಡಿದ್ದ ಅಂಗನವಾಡಿ ಕೇಂದ್ರದಲ್ಲಿ ‘ಸುಭಾಷ್‌ ಚಂದ್ರಬೋಸ್‌ ಉದ್ಯಾನ’  ಇದೀಗ ಕಂಗೊಳಿಸುತ್ತಿದೆ. 

ಜೊತೆಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣವನ್ನು ಅಭಿವೃದ್ಧಿಗೊಳಿಸಲಾಗಿದೆ. ಮಕ್ಕಳ ದಿನಾಚರಣೆ  ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಆಡಲು, ನಲಿಯಲು ಸುಂದರ ‘ಮಹಾತ್ಮ ಗಾಂಧಿ ಉದ್ಯಾನ’ ರೂಪುಗೊಂಡಿದೆ.

ಇಲ್ಲಿನ ಸುಭಾಷ್ ನಗರದ ಅಂಗನವಾಡಿಯ 13 ಮಕ್ಕಳು ಹಾಗೂ ಮೇಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ 39 ಮಕ್ಕಳು ಕೊರೊನಾ ಕಾರಣ ಮನೆಯಲ್ಲೇ ಉಳಿದಿರುವುದರಿಂದ ಉದ್ಘಾಟನೆಗೆ ಸಿದ್ಧವಾಗಿರುವ ಉದ್ಯಾನದಲ್ಲಿ ಮಕ್ಕಳ ಕಲರವ ಇಲ್ಲ ಎಂಬ ಕೊರತೆಯನ್ನು ಬಿಟ್ಟರೆ ಉದ್ಯಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಾತ್ರವಲ್ಲ, ಆವರಣದಲ್ಲಿ ಉದ್ಯಾನವಿರುವ ರಾಜ್ಯದ ಮೊದಲ ಅಂಗನವಾಡಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಸಮುದಾಯದ ಪರಿಸರಕ್ಕೆ ಸಂಬಂಧಿಸಿದಂತೆ ಮೇಕೇರಿ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು 3 ಲಕ್ಷ ರೂ.ವಚ್ಚದಲ್ಲಿ ಉದ್ಯಾನ ಅಭಿವೃದ್ಧಿಗೊಳಿಸಲಾಗಿದೆ.  ಅಂಗನವಾಡಿಗೆ ಬರುವ ಪುಟ್ಟ ಮಕ್ಕಳ ಮನಸ್ಸಿನಲ್ಲಿ ಪರಿಸರ ಪ್ರೇಮ ಹುಟ್ಟುಹಾಕುವಂತ ವಾತಾವರಣ ಸೃಷ್ಟಿಸಲಾಗಿದೆ.

ಮೇಕೇರಿ ಗ್ರಾಮ ಪಂಚಾಯಿತಿ ಪಿಡಿಒ ಪ್ರಕಾಶ್ ಮಾತನಾಡಿ, ಗ್ರಾಮದ ಸುಭಾಷ್ ನಗರದ ಸ್ವಾಗತ ಯುವಕ ಸಂಘವೂ ಪಂಚಾಯಿತಿಯೊಂದಿಗೆ ಕೈಜೋಡಿಸಿದೆ. ಪಂಚಾಯಿತಿ ವತಿಯಿಂದ ಅಂಗನವಾಡಿ ಅಂಗಳ, ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣವಲ್ಲದೇ, ಬಿಳಿಗೇರಿ ಗ್ರಾಮದ ವ್ಯಾಪ್ತಿಗೆ ಒಳಪಡುವ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಆವರಣಗಳಲ್ಲಿ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ. ಸರ್ಕಾರಿ ಶಾಲೆಗಳ ಪರಿಸರ ಮನಸೆಳೆಯುತ್ತಿದೆ ಎಂದು  ಹೇಳಿದರು.

ಇದೀಗ ಕಡಗದಾಳು,ಮೂರ್ನಾಡು ಮತ್ತಿತರ ಶಾಲೆಗಳ ಶಿಕ್ಷಕರೂ ಉದ್ಯಾನ ವೀಕ್ಷಿಸಿ ಸ್ಪೂರ್ತಿಗೊಂಡಿದ್ದಾರೆ ಎಂದರು.

ಗ್ರಾಮದ ಸುಭಾಷ್ ನಗರ ವ್ಯಾಪ್ತಿಯಲ್ಲಿ ಹಲವು ಕುಟುಂಬಗಳು ವಾಸವಾಗಿದ್ದು, ಇಲ್ಲಿನ ಪುಟ್ಟಮಕ್ಕಳ ಆಟ ಪಾಠಕ್ಕೆ ಉತ್ತಮ ಪರಿಸರ  ರೂಪಿಸಿದಂತಾಗಿದೆ ಎಂದು ಅಂಗನವಾಡಿ ಶಿಕ್ಷಕಿ ಸರಸ್ವತಿ ಸಂತಸ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ವತಿಯಿಂದ ಉದ್ಯಾನ ರೂಪಿಸಲು ಕ್ರಿಯಾಯೋಜನೆ ತಯಾರಿಸಲಾಯಿತು. ಯುವಕಸಂಘದ ಸದಸ್ಯರೂ ಆಸಕ್ತಿಯಿಂದ ಉದ್ಯಾನ ರೂಪಿಸಲು ಕೈಜೋಡಿಸಿದ್ದಾರೆ ಎನ್ನುತ್ತಾರೆ ಸ್ವಾಗತ ಯುವಕ ಸಂಘದ ಅಧ್ಯಕ್ಷ ವಿಜು ಹರೀಶ್.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.