ಮಡಿಕೇರಿ: ‘ಪ್ರವಾಸಿ ಉತ್ಸವ’ಕ್ಕೆ ಸಿದ್ಧತೆ ಜೋರು

7
ಜ.11ರಿಂದ ಮೂರು ದಿನ ಸಾಂಸ್ಕೃತಿಕ ಕಲರವ; ಪ್ರವಾಸೋದ್ಯಮ ಚೇತರಿಕೆಗೆ ಕ್ರಮ

ಮಡಿಕೇರಿ: ‘ಪ್ರವಾಸಿ ಉತ್ಸವ’ಕ್ಕೆ ಸಿದ್ಧತೆ ಜೋರು

Published:
Updated:
Prajavani

ಮಡಿಕೇರಿ: ‘ಮಂಜಿನ ನಗರಿ’ಯಲ್ಲಿ ಈಗ ಚಳಿಯದ್ದೇ ದರ್ಬಾರ್‌. ಚಳಿ ಹಾಗೂ ಇಬ್ಬನಿಯ ಸವಿ ಅನುಭವಿಸಲು ಪ್ರವಾಸಿಗರೂ ಕೊಡಗಿನತ್ತ ನಿಧಾನವಾಗಿ ಲಗ್ಗೆ ಇಡುತ್ತಿದ್ದಾರೆ. ಈ ನಡುವೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತ ‘ಪ್ರವಾಸಿ ಉತ್ಸವ’ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಜ. 11ರಿಂದ 13ರವರೆಗೆ ಪ್ರವಾಸಿ ಉತ್ಸವ ಅದ್ಧೂರಿಯಾಗಿ ನಡೆಯಲಿದೆ.

ಉತ್ಸವದ ಅಂಗವಾಗಿ ಮಂಜಿನ ನಗರಿಯಲ್ಲಿ ಸಾಂಸ್ಕೃತಿಕ ರಸಸಂಜೆ, ಶ್ವಾನ ಪ್ರದರ್ಶನ, ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌, ಯೋಗ, ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಇವು ಪ್ರವಾಸಿಗರು ಹಾಗೂ ಜಿಲ್ಲೆಯ ಜನರನ್ನೂ ಮನಸೂರೆಗೊಳಿಸಲಿವೆ.

ನವೋಲ್ಲಾಸದಲ್ಲಿ ಪ್ರವಾಸಿಗರನ್ನು ತೇಲಿಸುವ ಮೂಲಕ ಕುಸಿದ ಪ್ರವಾಸೋದ್ಯಮ ಚೇತರಿಸಿಕೊಳ್ಳುವಂತೆ ಮಾಡಲು ಜಿಲ್ಲಾಡಳಿತ ಹಾಗೂ ಹೋಟೆಲ್‌, ರೆಸಾರ್ಟ್‌ ಮಾಲೀಕರ ಸಂಘವು ಯೋಜನೆ ರೂಪಿಸಿದೆ. 

ಪುಷ್ಪ ವೈಭವ: ರಾಜಾಸೀಟ್‌ ಉದ್ಯಾನವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ರಾಜರ ಆಳ್ವಿಕೆಯ ಪ್ರತೀಕ. ಪ್ರಾಕೃತಿಕ ವಿಕೋಪದ ಬಳಿಕ ರಾಜಾಸೀಟ್‌ ಕಳೆಗುಂದಿತ್ತು. ಪ್ರವಾಸಿಗ ರಿಲ್ಲದೇ ಸೊರಗಿತ್ತು. ಉತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆಯು ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದೆ.

ರಾಜಾಸೀಟ್‌ನಲ್ಲಿ ಬಣ್ಣ ಬಳಿಯುವ ಕಾರ್ಯ ಭರದಿಂದ ಸಾಗುತ್ತಿದೆ. ವಿವಿಧ ನರ್ಸರಿಗಳಿಂದ ಹೂವಿನ ಗಿಡಗಳು ಬಂದಿಳಿದಿವೆ. ಬಗೆಬಗೆಯ ಪುಷ್ಪಗಳು ಪ್ರವಾಸಿಗರನ್ನು ಬಣ್ಣದೋಕುಳಿಯಲ್ಲಿ ಮಿಂದೇಳುವಂತೆ ಮಾಡಲಿವೆ ಎಂದು ಹೇಳುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. 

ಕಾವೇರಿ ಮಾತೆಯ ಪ್ರತಿರೂಪ, ಹೂವಿನ ಮಂಟಪ, ಪ್ರಾಣಿ, ಪಕ್ಷಿ, ದೇವಸ್ಥಾನ, ಅರಮನೆ... ಹೀಗೆ ನಾನಾ ಕಲಾಕೃತಿಗಳನ್ನು ಹೂವಿನಿಂದ ರೂಪಿಸಲು ಸಿದ್ಧತೆ ನಡೆಯುತ್ತಿದೆ. ಈ ದೃಶ್ಯಾವಳಿ ಕಣ್ತುಂಬಿಕೊಳ್ಳಲು ಪ್ರವಾಸಿಗರೂ ಕಾತರರಾಗಿದ್ದಾರೆ. ತೋಟಗಾರಿಕಾ ಇಲಾಖೆ 7 ಸಾವಿರಕ್ಕೂ ಅಧಿಕ ಹೂವು ಹಾಗೂ ಅಲಂಕಾರಿಕ ಗಿಡಗಳು ಮನತಣಿಸಲಿವೆ. ಮೂರು ದಿನವೂ ಫಲಪುಷ್ಪ ಪ್ರದರ್ಶನದೊಂದಿಗೆ ರಾಜಾಸೀಟ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೂ ಇರಲಿದೆ.

ಸಾಂಸ್ಕೃತಿಕ ರಸದೌತಣ: ಮೂರು ದಿನವೂ ಸಾಂಸ್ಕೃತಿಕ ರಸಸಂಜೆ ನಡೆಯಲಿದೆ. 11ರಂದು ಹೆಸರಾಂತ ಗಾಯಕಿ ಎಂ.ಟಿ. ‍ಪಲ್ಲವಿ ತಂಡದಿಂದ ‘ಭಾವಸಂಗಮ’, 12ರಂದು ಹರ್ಷ ತಂಡದಿಂದ ಸಂಗೀತ ರಸಸಂಜೆ ನಡೆಯಲಿದೆ. ಜತೆಗೆ, ಸ್ಥಳೀಯ ಕಲಾವಿದರೂ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೊಡವ ಹಾಗೂ ಅರೆಭಾಷೆ ಸಮುದಾಯದ ನೃತ್ಯಗಳೂ ಕಣ್ಮನ ತಣಿಸಲಿವೆ ಎನ್ನುತ್ತಾರೆ ಆಯೋಜಕರು.

ಜ.13ರಂದು ಬೆಳಿಗ್ಗೆ 8ಕ್ಕೆ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌, ಯೋಗಾಭ್ಯಾಸ ನಡೆಯಲಿದೆ. ಗಾಂಧಿ ಮೈದಾನದಲ್ಲಿ ಹೋಟೆಲ್‌ ಹಾಗೂ ರೆಸಾರ್ಟ್‌ ಮಾಲೀಕರ ಸಂಘ, ಹೋಂಸ್ಟೇ ಅಸೋಸಿಯೇಷನ್ ಆಶ್ರಯದಲ್ಲಿ ತಿಂಡಿ ತಿನಿಸು ಮಳಿಗೆಗಳು ಗ್ರಾಹಕರ ಜಿಹ್ವಾ ಚಾಪಲ್ಯವನ್ನು ತಣಿಸಲಿವೆ. ವಿಶೇಷವಾಗಿ ಕೊಡಗಿನ ಖಾದ್ಯಗಳಿಗೆ ಅದ್ಯತೆ ನೀಡಲಾಗುವುದು. ಉತ್ಸವಕ್ಕೆ ಬಂದವರು ಕೊಡಗಿನ ಖಾದ್ಯ ಸವಿಯ ಬಹುದು ಎಂದು ಹೇಳುತ್ತಾರೆ ಹೋಟೆಲ್‌ ಸಂಘದವರು.

‘ಐದು ವರ್ಷಗಳಿಂದ ಹೋಂಸ್ಟೇ ನಡೆಸುತ್ತಿದ್ದೇನೆ. ಅದೇ ಜೀವನಕ್ಕೆ ಆಧಾರ. ಆದರೆ, ನಾಲ್ಕು ತಿಂಗಳಿಂದ ನಾಲ್ಕು ದಿನವೂ ಹೋಂಸ್ಟೇ ಭರ್ತಿಯಾಗಿಲ್ಲ. ಆಗಸ್ಟ್‌ಗೂ ಮೊದಲು ಬರುತ್ತಿದ್ದ ಪ್ರವಾಸಿಗರಿಗೆ ರೂಂ ಸಿಗುವುದೇ ಕಷ್ಟವಾಗಿತ್ತು. ಕ್ರಿಸ್‌ಮಸ್‌ ಬಳಿಕ ಚೇತರಿಕೆ ಹಾದಿ ಹಿಡಿದಿದೆ. ಈ ವರ್ಷವೂ ಜೋರು ಮಳೆ ಸುರಿದರೆ ಬದುಕು ಸಂಪೂರ್ಣ ಕೊಚ್ಚಿ ಹೋಗಲಿದೆ’ ಎಂದು ನಗರದಲ್ಲಿ ಹೋಂಸ್ಟೇ ನಡೆಸುತ್ತಿರುವ ಸಂತೋಷ್‌ ಅಳಲು ತೋಡಿಕೊಂಡರು.  

ಕಳೆಗುಂದಿದ್ದ ಮಡಿಕೇರಿ ದಸರಾ
ಕಳೆದ ಆಗಸ್ಟ್‌ನಲ್ಲಿ ಉಂಟಾಗಿದ್ದ ಪ್ರಾಕೃತಿಕ ವಿಕೋಪದಿಂದ ಪ್ರಸಿದ್ಧ ಮಡಿಕೇರಿ ದಸರಾ ಕಳೆಗುಂದಿತ್ತು. ಏಳು ದಿನಗಳವರೆಗೆ ನಡೆಯಬೇಕಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದೇ ದಿನಕ್ಕೆ ಸೀಮಿತ ಆಗಿದ್ದವು.

ಪ್ರವಾಸಿಗರೂ ನಿರೀಕ್ಷಿತ ಮಟ್ಟದಲ್ಲಿ ಜಿಲ್ಲೆಯತ್ತ ಬಂದಿರಲಿಲ್ಲ. ಉದ್ದಿಮೆದಾರರು, ಹೋಟೆಲ್‌ ಮಾಲೀಕರು ಕಂಗಾಲಾಗಿದ್ದರು. ಹಲವು ಹೋಂಸ್ಟೇಗಳು ಬಾಗಿಲು ಮುಚ್ಚಿದ್ದವು. ಈಗ ನಿಧಾನಕ್ಕೆ ಚೇತರಿಕೆ ಹಾದಿ ಹಿಡಿದಿದ್ದು, ಭರವಸೆ ಮೂಡಿಸಿದೆ. ಪ್ರವಾಸಿಗರನ್ನು ಸೆಳೆಯಲು ಈ ಉತ್ಸವ ಯಶಸ್ವಿ ಆಗಲಿದೆ ಎಂಬ ನಿರೀಕ್ಷೆ ಉದ್ದಿಮೆದಾರರದ್ದು.

12ರಂದು ಶ್ವಾನ ಪ್ರದರ್ಶನ
ಪ್ರವಾಸಿ ಉತ್ಸವದಲ್ಲಿ ಶ್ವಾನ ಪ್ರದರ್ಶನವೂ ಆಕರ್ಷಣೆಯಲ್ಲಿ ಒಂದು. ಗಾಂಧಿ ಮೈದಾನದಲ್ಲಿ ಜ.12ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಶ್ವಾನ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಶ್ವಾನಗಳು ಬರಲಿವೆ. ಮೊದಲ ಐದು ಸ್ಥಾನ ಪಡೆದ ಶ್ವಾನಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ತಮ್ಮಯ್ಯ ಪ್ರಕಟಿಸಿದ್ದಾರೆ.


ವಿವಿಧ ಜಾತಿಯ ಹೂವುಗಳ ಆಕರ್ಷಣೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !