ನೆರೆ ಸಂತ್ರಸ್ತರಿಗೆ ಪೊಲೀಸರ ನೆರವು

7
ಚಿಕ್ಕಮಗಳೂರಿನಿಂದ ಬಂದಿದ್ದ ‘ಸ್ನೇಹಕೂಟ ಕ್ಷೇಮಾಭಿವೃದ್ಧಿ ಸೊಸೈಟಿ’ ಸದಸ್ಯರು 

ನೆರೆ ಸಂತ್ರಸ್ತರಿಗೆ ಪೊಲೀಸರ ನೆರವು

Published:
Updated:
Prajavani

ಮಡಿಕೇರಿ: ಅವರೆಲ್ಲ ನಿತ್ಯ ಲಾಠಿ ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡುವರು. ಅವರೂ ಸಹ ಕೊಡಗು ನೆರೆ ಸಂತ್ರಸ್ತರಿಗೆ ಮಿಡಿಯುವ ಮೂಲಕ ಸಮಾಜ ಸೇವೆಗೂ ಸೈ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕೊಡಗು ನೆರೆ ಸಂತ್ರಸ್ತರಿಗೆ ನೆರವು ನೀಡಿದವರು ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು. ವೃತ್ತಿನಿರತ ಪೊಲೀಸರೇ ಸೇರಿಕೊಂಡು 2002ರಲ್ಲಿ ರಚಿಸಿಕೊಂಡಿದ್ದ ‘ಸ್ನೇಹಕೂಟ ಕ್ಷೇಮಾಭಿವೃದ್ಧಿ ಸಂಘ’ದ ಮೂಲಕ ನೆರವು ನೀಡಿದ್ದಾರೆ.

ಸ್ನೇಹಕೂಟದ ಅಧ್ಯಕ್ಷ ಎಂ.ಕೆ. ಮಧು ಅವರು ಕೊಡಗು ಸಂತ್ರಸ್ತರಿಗೆ ನೆರವಾಗುವಂತೆ ಸದಸ್ಯರಲ್ಲಿ ಕೋರಿದ್ದರು. ಅದರಂತೆ ನೆರವು ಹರಿದು ಬಂದಿತ್ತು. ಡಿ. 28 ಹಾಗೂ 29ರಂದು ಕೊಡಗಿಗೆ ಬಂದಿದ್ದ ಆಡಳಿತ ಮಂಡಳಿ ಸದಸ್ಯರು, ತಾವು ಸಂಗ್ರಹಿಸಿದ್ದ ₹ 3.55 ಲಕ್ಷವನ್ನು ನೈಜ ಸಂತ್ರಸ್ತರಿಗೆ ವಿತರಿಸಿದ್ದಾರೆ.

ನೈಜ ಸಂತ್ರಸ್ತರನ್ನು ಹುಡುಕಿದರು: ಸ್ನೇಹಕೂಟದ ಎಂ.ಕೆ. ಮಧು, ಉಪಾಧ್ಯಕ್ಷ ಮಹದೇವಸ್ವಾಮಿ, ಕೆ.ಎಂ. ಯೋಗೇಶ್‌, ಖಜಾಂಚಿ ಎ.ಡಿ. ಸುರೇಶ್‌, ನಿರ್ದೇಶಕರಾದ ಜಯಣ್ಣ, ಶಶಿಧರ್‌ ಅವರು ಕೊಡಗಿಗೆ ಖುದ್ದು ಭೇಟಿ ನೀಡಿ ಸಂಕಷ್ಟಕ್ಕೆ ಒಳಗಾದ ಗ್ರಾಮಗಳಲ್ಲಿ ಸುತ್ತಾಡಿ, ನೈಜ ಸಂತ್ರಸ್ತರನ್ನು ಹುಡುಕಿ ಪರಿಹಾರ ವಿತರಿಸಿದ್ದಾರೆ.

ಉದಯಗಿರಿ, 2ನೇ ಮೊಣ್ಣಂಗೇರಿ, ಜೋಡುಪಾಲ, ಹೆಮ್ಮೆತ್ತಾಳ, ಮದೆನಾಡು, ಕಾಲೂರು ಗ್ರಾಮಗಳಿಗೆ ಭೇಟಿ ಅವರ ಕೌಟುಂಬಿಕ ಹಿನ್ನೆಲೆಯ ಮಾಹಿತಿ ಕಲೆ ಹಾಕಿದ್ದಾರೆ. ನಷ್ಟದ ಪ್ರಮಾಣ, ಆಸ್ತಿ ವಿವರ, ಹೆಣ್ಣು ಮಕ್ಕಳ ವಿವರ, ಆದಾಯದ ಮೂಲ ಎಲ್ಲವನ್ನೂ ಪರಿಶೀಲಿಸಿ ಸಂಗ್ರಹಿಸಿದ್ದ ನೆರವನ್ನು 15 ಕುಟುಂಬಗಳಿಗೆ ವಿತರಿಸಿದ್ದಾರೆ.

ಕಾರ್ಯಕ್ರಮ: ತಾಲ್ಲೂಕಿನ ಕುಂಬಳದಾಳು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸಂತ್ರಸ್ತರಿಗೆ ನೆರವು ವಿತರಿಸಿದ್ದಾರೆ. ಕೌಟುಂಬಿಕ ಪರಿಸ್ಥಿತಿಗೆ ಅನುಗುಣವಾಗಿ ₹ 25 ಸಾವಿರದಿಂದ ₹ 40 ಸಾವಿರದ ತನಕ ನೆರವು ನೀಡಲಾಯಿತು. ಕೊಡಗಿನ ಸಂತ್ರಸ್ತರು ಇಂದೂ ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವು ನೀಡಿ, ಆತ್ಮಸ್ಥೈರ್ಯ ತುಂಬಿದ ನೆಮ್ಮದಿ ಸದಸ್ಯರದ್ದು ಎಂದು ಸ್ನೇಹಕೂಟದ ಅಧ್ಯಕ್ಷರು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !