ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಉತ್ಸವ: ರಾಜಾಸೀಟ್‌ನಲ್ಲಿ ಫಲಪುಷ್ಪ ವೈಭವ

ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ
Last Updated 11 ಜನವರಿ 2019, 14:43 IST
ಅಕ್ಷರ ಗಾತ್ರ

ಮಡಿಕೇರಿ: ಅಲ್ಲಿ ಬಗೆಬಗೆಯ ಹೂವಿಗಳ ರಾಶಿ, ಅದರ ನಡುವೆ ಕಂಗೊಳಿಸುವ ಉದ್ಯಾನ, ಬಣ್ಣ ಬಣ್ಣ ನೀರಿನ ನಡುವೆ ಚಿಮ್ಮುವ ಕಾರಂಜಿ ವೈಯ್ಯಾರ, ಜೊತೆಗೆ ಹಣ್ಣು– ತರಕಾರಿಗಳ ಕಲಾಕೃತಿಗಳು.

– ಎಲ್ಲವನ್ನೂ ನೀವು ಕಣ್ತುಂಬಿಕೊಳ್ಳಬೇಕೇ ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್‌ಗೇ ಬರಬೇಕು. ‘ಕೊಡಗು ಪ್ರವಾಸಿ ಉತ್ಸವ’ದ ಅಂಗವಾಗಿ ತೋಟಗಾರಿಕೆ ಇಲಾಖೆ ರಾಜಾಸೀಟ್ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಿದೆ.

ಮೊದಲ ದಿನವೇ ನೋಡುಗರ ಗಮನ ಸೆಳೆಯುತ್ತಿದೆ ಪ್ರದರ್ಶನ. ತರಕಾರಿ ಹಾಗೂ ಹಣ್ಣುಗಳಲ್ಲಿನ ಕೆತ್ತನೆ ನೋಡುಗರಲ್ಲಿ ಅಚ್ಚರಿ ಮೂಡಿಸಿತು.

ಕೊಡಗಿನ ಕುಲದೇವತೆ ಕಾವೇರಿ, ತೀರ್ಥೋದ್ಭವದ ಬ್ರಹ್ಮಕುಂಡಿಕೆ, ಜಲಕೃಷಿ ಮಾದರಿಯಲ್ಲಿ ಹಣ್ಣು ತರಕಾರಿ ಬೆಳೆಯುವ ಪ್ರಾತ್ಯಕ್ಷಿಕೆ, ಟೊಮೆಟೊ, ಬದನೆಕಾಯಿ, ದಪ್ಪ ಮೆಣಸಿನಕಾಯಿಯಿಂದ ಆನೆ, ನವಿಲು, ಗಿಟಾರ್‌, ತಬಲ ಮಾದರಿಯ ಕಲಾಕೃತಿ ಮೈದಳೆದು ನಿಂತಿವೆ.

ರಾಷ್ಟ್ರಕವಿ ಕುವೆಂಪು ಅವರ ಕವಿಶೈಲದಲ್ಲಿ ಕವನ ಬರೆಯುವ ಮಾದರಿ ಸಾಹಿತ್ಯ ಲೋಕವನ್ನು ಬಿಂಬಿಸುತ್ತಿದೆ. ಆನೆ, ಜಿಂಕೆ, ಹುಲಿ, ಮೊಲ, ಅಕ್ಟೋಪಸ್‌ ಕಲಾಕೃತಿಗಳನ್ನು ಹೂವು ಹಾಗೂ ಅಲಂಕಾರಿಕ ಎಲೆಗಳಿಂದ ಮಾಡಲಾಗಿದೆ. ನವಿಲು ಗರಿಬಿಚ್ಚಿ ನರ್ತಿಸಿದಂತೆ ಭಾಸವಾಗುತ್ತಿದೆ. ಮಿಕ್ಕಿಮೌಸ್‌, ಸ್ಪೈಡರ್‌ಮನ್‌, ರೇಸ್‌ ಕಾರು ಮಾದರಿಯೂ ಪುಟ್ಟ ಮಕ್ಕಳ ಗಮನ ಸೆಳೆಯುತ್ತಿವೆ.

ಗುಲಾಬಿ, ಸಾಲ್ವಿಯ, ಸೇವಂತಿಗೆ, ಮಲ್ಲಿಗೆ, ಚಂಡುಹೂವು, ಜೀನಿಯಾ, ರೋಸಿಯಾ ಹೂವುಗಳನ್ನು ಪಾತಿಯಲ್ಲಿ ನಾಟಿ ಮಾಡಲಾಗಿದೆ. ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳನ್ನು ಬೆಳೆಸಲಾಗಿದೆ. ಪ್ರವಾಸಿಗರು ಹಾಗೂ ಸ್ಥಳೀಯರ ಮನ ಸೆಳೆಯುತ್ತಿವೆ. ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಸಾರ್ವಜನಿಕರಿಗೆ ₹ 10 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಮಕ್ಕಳಿಗೆ ಉಚಿತ ಪ್ರವೇಶವಿದೆ.

ಪ್ರವಾಸಿಗರ ನಿರೀಕ್ಷೆ: ಮೊದಲ ದಿನಾವದ ಶುಕ್ರವಾರವೇ ರಾಜಾಸೀಟ್‌ ಹಾಗೂ ಗಾಂಧಿ ಮೈದಾನದತ್ತ ಪ್ರವಾಸಿಗರ ದಂಡುಕಂಡು ಬಂತು. ಪ್ರವಾಸಿರಿಗೋಸ್ಕರವೇ ಈ ಉತ್ಸವ ಆಯೋಜಿಸಲಾಗಿದೆ. ಹೋಟೆಲ್‌ ಹಾಗೂ ರೆಸಾರ್ಟ್‌ ಉದ್ದಿಮೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಪ್ರದರ್ಶನ ಮಳಿಗೆ: ಇನ್ನೂ ಗಾಂಧಿ ಮೈದಾನದಲ್ಲಿ ಕೃಷಿ ತೋಟಗಾರಿಕೆ, ಪಾಶುಪಾಲನೆ, ಮೀನುಗಾರಿಕೆ... ಹೀಗೆ ನಾನಾ ಇಲಾಖೆಗಳ ವಸ್ತು ಪ್ರದರ್ಶನಗಳ ಮಳಿಗೆಗಳು ಗಮನ ಸೆಳೆಯುತ್ತಿವೆ. ಇನ್ನು ಮಳಿಗೆಗಳಲ್ಲಿ ಕೊಡವ ಖಾದ್ಯ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT