ತಾಲ್ಲೂಕು ಕೇಂದ್ರ, ಪ್ಯಾಕೇಜ್‌ ನಿರೀಕ್ಷೆ

7
8ರಂದು ರಾಜ್ಯ ಬಜೆಟ್‌, ಕೊಡಗಿಗೆ ಸಿಗುವುದೇ ಹೊಸ ಯೋಜನೆ?

ತಾಲ್ಲೂಕು ಕೇಂದ್ರ, ಪ್ಯಾಕೇಜ್‌ ನಿರೀಕ್ಷೆ

Published:
Updated:
Prajavani

ಮಡಿಕೇರಿ: ‘ಮೈತ್ರಿ’ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಫೆ. 8ರಂದು ರಾಜ್ಯ ಬಜೆಟ್‌ ಮಂಡಿಸಲಿದ್ದು ಹಲವು ನಿರೀಕ್ಷೆಗಳು ಗರಿಗೆದರಿವೆ.

ಕಳೆದ ವರ್ಷ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯು ಸಂಕಷ್ಟದಲ್ಲಿದೆ. ‘ವಿಶೇಷ ಪ್ಯಾಕೇಜ್‌’ ಸೇರಿದಂತೆ ಸಾಕಷ್ಟು ಯೋಜನೆಗಳ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.

ಕೊಡಗಿನ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಕುಮಾರಸ್ವಾಮಿ ಅವರು ಕೆಲವು ಬೇಡಿಕೆಗಳನ್ನಾದರೂ ಈಡೇರಿಸಲಿದ್ದಾರೆ ಎಂಬುದು ಜೆಡಿಎಸ್‌ ಜಿಲ್ಲಾ ಮುಖಂಡರ ವಿಶ್ವಾಸ.

ಆಗಸ್ಟ್‌ನಲ್ಲಿ ಮಹಾಮಳೆ ಸುರಿದು ನೂರಾರು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿತ್ತು. ಅದರಲ್ಲಿ 840 ಕುಟುಂಬಗಳಿಗೆ ಮನೆ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ. ಅದೂ ಕುಂಟುತ್ತ ಸಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಬೆಳೆ ಪರಿಹಾರವು ಕೆಲವರಿಗೆ ಮಾತ್ರ ಸಿಕ್ಕಿದೆ. ಹೀಗಾಗಿ, ಬಜೆಟ್‌ನಲ್ಲಿ ಸಂತ್ರಸ್ತರಿಗೆ ಹೊಸ ಯೋಜನೆ ಸಿಗುವುದೇ ಎಂಬ ಮಾತುಗಳೂ ಕೇಳಿಬರುತ್ತಿವೆ.

ಜಿಲ್ಲಾ ಪಂಚಾಯಿತಿಗೆ ಪ್ಯಾಕೇಜ್‌?:

ಮಳೆಯಿಂದ ನೂರಾರು ಕಿ.ಮೀ ರಸ್ತೆಗಳು ಹಾಳಾಗಿದ್ದವು. ತಡೆಗೋಡೆ ಕಾಮಗಾರಿ ಮಾತ್ರ ಪ್ರಗತಿಯಲ್ಲಿದೆ. ಅದನ್ನು ಹೊರತು ಪಡಿಸಿದರೆ ಡಾಂಬರೀಕರಣಕ್ಕೆ ಅನುದಾನ ಸಿಕ್ಕಿಲ್ಲ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ರಸ್ತೆಗಳಿಗೆ ಅನುದಾನವೂ ಲಭಿಸಿಲ್ಲ. ಗ್ರಾಮೀಣ ರಸ್ತೆಗಳಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಹೀಗಾಗಿ, ಜಿಲ್ಲಾ ಪಂಚಾಯಿತಿಯಿಂದ ‘ವಿಶೇಷ ಪ್ಯಾಕೇಜ್‌’ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ದೊಡ್ಡ ಮೊತ್ತದ ಪ್ಯಾಕೇಜ್‌ ನಿರೀಕ್ಷೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಿದ್ದಾರೆ. ಕನಿಷ್ಠ ₹ 100 ಕೋಟಿ ಅನುದಾನ ಅಗತ್ಯವಿದೆ ಎಂದು ಸದಸ್ಯರೊಬ್ಬರು ಹೇಳುತ್ತಾರೆ. ಬಿಜೆಪಿ ಸರ್ಕಾರವಿದ್ದಾಗ 3 ವರ್ಷ ವಿಶೇಷ ಪ್ಯಾಕೇಜ್‌ ಜಿಲ್ಲೆಗೆ ಸಿಕ್ಕಿತ್ತು. ಅದಾದ ನಂತರ ಪ್ಯಾಕೇಜ್‌ ಮರೀಚಿಕೆಯಾಗಿದೆ.

ತಾಲ್ಲೂಕು ಘೋಷಣೆ: ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕುಶಾಲನಗರ ಹಾಗೂ ಪೊನ್ನಂಪೇಟೆಯನ್ನು ತಾಲ್ಲೂಕು ಕೇಂದ್ರ ಮಾಡಬೇಕೆಂಬ ಹೋರಾಟಗಳು 2 ವರ್ಷಗಳಿಂದಲೂ ನಡೆಯುತ್ತಿವೆ. ಆದರೆ, ಹೋರಾಟಕ್ಕೆ ಪ್ರತಿಫಲ ಮಾತ್ರ ಇನ್ನೂ ಸಿಕ್ಕಿಲ್ಲ. ಜಿಲ್ಲೆಗೆ ಕುಮಾರಸ್ವಾಮಿ ಅವರು ಭೇಟಿ ನೀಡಿದಾಗಲೂ ಮನವಿ ಸಲ್ಲಿಸಲಾಗಿತ್ತು. ತಾಲ್ಲೂಕು ಕೇಂದ್ರ ಘೋಷಣೆಯಾಗುವ ನಿರೀಕ್ಷೆಯಲ್ಲಿ ಹೋರಾಟಗಾರರು ಇದ್ದಾರೆ.  

‘ಕಾವೇರಿ’ಗೆ ಅನುದಾನ: ಕಾವೇರಿ ನದಿ ಮೂಲದಲ್ಲೇ ಕಲುಷಿತಗೊಳ್ಳುತ್ತಿದೆ. ಮಳೆಗಾಲದಲ್ಲಿ 3 ತಿಂಗಳು ಬಿಟ್ಟರೆ ಉಳಿದ 9 ತಿಂಗಳು ಕಲುಷಿತಗೊಂಡೇ ಹರಿಯುತ್ತಾಳೆ. ಬೇಸಿಗೆಯಲ್ಲಿ ನೇರವಾಗಿ ನದಿ ನೀರು ಕುಡಿಯಲು ಯೋಗ್ಯವಿಲ್ಲ ಎಂಬ ವರದಿಗಳೂ ಬಂದಿದೆ. ಕಾವೇರಿ ನದಿ ನೀರು ಸಂರಕ್ಷಣೆಗೆ ವಿಶೇಷ ಯೋಜನೆ ಅಥವಾ ಪ್ರಾಧಿಕಾರ ರಚಿಸಬೇಕು ಎಂಬ ಆಗ್ರಹಗಳು ಇವೆ. ಈ ಬಜೆಟ್‌ನಲ್ಲಿ ಕುಮಾರಸ್ವಾಮಿ ಅವರು ಪ್ರಕಟಿಸಲಿದ್ದಾರೆಯೇ ಎಂದು ನೋಡಬೇಕು.

ಕೊಡಗು ಕ್ರೀಡಾ ಜಿಲ್ಲೆಯಾದರೂ ಹಾಕಿ ಸೇರಿದಂತೆ ಹಲವು ಕ್ರೀಡೆಗಳಿಗೆ ಸೂಕ್ತ ಮೈದಾನವೇ ಇಲ್ಲ. ಸುಸಜ್ಜಿತ ಹಾಕಿ ಮೈದಾನ ನಿರ್ಮಿಸಬೇಕೆಂಬ ಬೇಡಿಕೆಯಿದ್ದರೂ ಸ್ಪಂದನೆ ಸಿಕ್ಕಿಲ್ಲ. ಮಡಿಕೇರಿ, ಸೋಮವಾರಪೇಟೆಯಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಸಹ ಮರೀಚಿಕೆಯಾಗಿದೆ. ಹೊಸ ಯೋಜನೆ ನೀಡಿ ಮುಖ್ಯಮಂತ್ರಿ ಕ್ರೀಡಾಪ್ರೇಮ ತೋರುವರೇ ನೋಡಬೇಕು.

ಪ್ರವಾಸೋದ್ಯಮ ಕ್ಷೇತ್ರ: ಪ್ರಕೃತಿ ವಿಕೋಪದ ಬಳಿಕ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿದೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರೇ ಕೊಡಗಿನ ಉಸ್ತುವಾರಿ ಸಚಿವರು. ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೊಡುಗೆಯ ನಿರೀಕ್ಷೆಯಲ್ಲಿ ಅವಲಂಬಿತರು ಇದ್ದಾರೆ.

ಜಿಲ್ಲೆಯಲ್ಲಿ ಆನೆ–ಮಾನವ ಸಂಘರ್ಷ ನಿರಂತರವಾಗಿದೆ. ಅದನ್ನು ಶಾಶ್ವತವಾಗಿ ಪರಿಹರಿಸಬೇಕು ಎಂದು ರೈತರು ಆಗ್ರಹಿಸುತ್ತಲೇ ಇದ್ದಾರೆ. ವನ್ಯಪ್ರಾಣಿಗಳ ಹಾವಳಿಯಿಂದ ಬೆಳೆದ ಬೆಳೆಗಳು ಕೈಗೆ ಸಿಗುತ್ತಿಲ್ಲ. ವನ್ಯಪ್ರಾಣಿಗಳ ದಾಳಿ ತಡೆಗೆ ಶಾಶ್ವತ ಯೋಜನೆ ನಿರೀಕ್ಷೆಯಲ್ಲಿ ಕಾಫಿ ಬೆಳೆಗಾರರು ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !