ಟರ್ಫ್‌ ಮೈದಾನ: ಅಂತಿಮ ಹಂತದ ಕಾಮಗಾರಿ

ಶುಕ್ರವಾರ, ಮಾರ್ಚ್ 22, 2019
24 °C
ಕೂಡಿಗೆ ಕ್ರೀಡಾಶಾಲೆ

ಟರ್ಫ್‌ ಮೈದಾನ: ಅಂತಿಮ ಹಂತದ ಕಾಮಗಾರಿ

Published:
Updated:
Prajavani

ಕುಶಾಲನಗರ: ಸಮೀಪದ ಕೂಡಿಗೆ ಕೃಷಿ ಫಾರಂ ಆವರಣದಲ್ಲಿರುವ ರಾಜ್ಯದ ಪ್ರಥಮ ಕ್ರೀಡಾ ವಸತಿ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೂರು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಸಿಂಥೆಟಿಕ್‌ ಹಾಕಿ ಟರ್ಫ್‌ ಮೈದಾನದ ಕಾಮಗಾರಿ ಇದೀಗ ಅಂತಿಮ ಹಂತಕ್ಕೆ ತಲುಪಿದೆ.

ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್‌ ಅವರ ವಿಶೇಷ ಪ್ರಯತ್ನದಿಂದ 1982-83ನೇ ಸಾಲಿನಲ್ಲಿ ಆರಂಭವಾದ ಈ ಕ್ರೀಡಾಶಾಲೆಯು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ರಾಜ್ಯದಲ್ಲಿ 22 ಕ್ರೀಡಾಶಾಲೆಗಳಿದ್ದು, ಈ ಪೈಕಿ ಕೂಡಿಗೆ ಕ್ರೀಡಾ ಶಾಲೆಯು ಪ್ರತಿಷ್ಠಿತ ಸಂಸ್ಥೆಯಾಗಿ ರೂಪುಗೊಂಡಿದೆ.

ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಬಹುತೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಬಹುಮಾನ ಗಳಿಸಿದ್ದಾರೆ.

ವಿದ್ಯಾರ್ಥಿನಿ ಪ್ರಮೀಳಾ ಅಯ್ಯಪ್ಪ ಒಲಿಂಪಿಕ್ಸ್‌ನಲ್ಲಿ (ಅಥ್ಲೆಟಿಕ್ಸ್‌) ಪಾಲ್ಗೊಂಡಿದ್ದಾರೆ. ರವಿ ನಾಯಕ್ ಮತ್ತು ಶೋಭಾ ಹಾಕಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೇ, ಈ ಶಾಲೆಯ 14 ವಿದ್ಯಾರ್ಥಿಗಳು ಏಕಲವ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಕ್ರೀಡಾ ತರಬೇತುದಾರ ಅಂಥೋಣಿ ಡಿಸೋಜ ತಿಳಿಸಿದ್ದಾರೆ.

ಇಂತಹ ಪ್ರತಿಷ್ಠಿತ ಕ್ರೀಡಾಶಾಲೆಯಲ್ಲಿ ಸುಸಜ್ಜಿತ ಮೈದಾನದ ಕೊರತೆಯಿಂದ ಕ್ರೀಡಾಶಾಲೆಯ ಹಾಕಿ ಕ್ರೀಡಾಪಟುಗಳು ಮಣ್ಣಿನ ಮೈದಾನದಲ್ಲಿ ನಿತ್ಯ ಅಭ್ಯಾಸ ನಡೆಸುವಂತ ಪರಿಸ್ಥಿತಿ ಇತ್ತು. ಈಚಿನ ದಿನಗಳಲ್ಲಿ ಹಾಕಿ ಕ್ರೀಡಾ ಸ್ಪರ್ಧೆಗಳು ಟರ್ಫ್ ಮೈದಾನದಲ್ಲಿ ನಡೆಯುತ್ತಿದ್ದು, ಇಲ್ಲಿನ ಕ್ರೀಡಾಪಟುಗಳು ಮಣ್ಣಿನ ಮೈದಾನದಲ್ಲಿ ಅಭ್ಯಾಸಿ ಟರ್ಫ್ ಮೈದಾನದಲ್ಲಿ ಆಡುವುದು ಕಷ್ಟವಾಗುತ್ತಿತ್ತು.

ಆದ್ದರಿಂದ, ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮೂರು ವರ್ಷಗಳ ಹಿಂದೆ ₹ 3.42 ಕೋಟಿ ವೆಚ್ಚದಲ್ಲಿ ಹಾಕಿ ಟರ್ಫ್ ಮೈದಾನ ನಿರ್ಮಾಣದ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಆದರೆ, ಸಮಯಕ್ಕೆ ಸರಿಯಾಗಿ ಅನುದಾನ ಬಿಡುಗಡೆಯಾಗದೆ ಹಾಕಿ ಟರ್ಫ್ ಯೋಜನೆ ಅರ್ಧಕ್ಕೆ ನಿಂತು ಹೋಗಿತ್ತು. ಕಳೆದ ಜನವರಿಯಲ್ಲಿ ಎರಡನೇ ಹಂತದ ಅನುದಾನವನ್ನು ಬಿಡುಗಡೆಗೊಳಿಸುವ ಮೂಲಕ ಟರ್ಫ್ ಮೈದಾನದ ಕಾಯಕಲ್ಪಕ್ಕೆ ಕ್ರೀಡಾ ಇಲಾಖೆ ಮುಂದಾಯಿತು. ಇದೀಗ ಮೈದಾನಕ್ಕೆ ಡಾಂಬರೀಕರಣ ಮಾಡಿ ಅದರ ಮೇಲೆ ಹಸಿರು ಟರ್ಫ್ ಮ್ಯಾಟ್ ಅಳವಡಿಸಲಾಗುತ್ತಿದೆ.

ಟರ್ಫ್ ಮೈದಾನ ನಿರ್ಮಿಸಲು ನವದೆಹಲಿಯ ಸಿಮ್ ಕಾರ್ಟ್ಸ್ ಎಂಬ ಕಂಪನಿಗೆ ಟೆಂಡರ್ ನೀಡಲಾಗಿದ್ದು, ಮೊದಲ ಹಂತದಲ್ಲಿ ₹ 1.42 ಕೋಟಿ ಅನುದಾನವನ್ನು ಇಲಾಖೆ ಬಿಡುಗಡೆ ಮಾಡಿತ್ತು. ಮೊದಲ ಹಂತದಲ್ಲಿ ಬಿಡುಗಡೆಯಾದ ಅನುದಾನದಲ್ಲಿ 91.4/55 ಮೀಟರ್ ಮೈದಾನ ಮಟ್ಟ ಮಾಡಿ ಜಲ್ಲಿಕಲ್ಲು ಹಾಕಿ ಸಮತಟ್ಟುಗೊಳಿಸಲಾಗಿತ್ತು. ಜತೆಗೆ, ಚರಂಡಿ ವ್ಯವಸ್ಥೆ ಹಾಗೂ ಬೇಲಿ ಕೂಡ ನಿರ್ಮಾಣ ಕೆಲಸ ಪೂರ್ಣಗೊಂಡಿತ್ತು. ಮಲೇಷ್ಯಾದಿಂದ ಟರ್ಫ್ ಸಾಮಗ್ರಿಗಳನ್ನು ತರಲಾಗಿತ್ತು. ಆದರೆ, ಉಳಿದ ಅನುದಾನವನ್ನು ಎರಡು ವರ್ಷ ಕಳೆದರೂ ಬಿಡುಗಡೆಯಾಗಿರಲಿಲ್ಲ. ಇದರಿಂದ ಈ ಯೋಜನೆ ಅರ್ಧಕ್ಕೆ ಸ್ಥಗಿತಗೊಂಡು ಕ್ರೀಡಾಪಟುಗಳಿಗೆ ನಿರಾಸೆ ಮೂಡಿಸಿತ್ತು.

ಕಳೆದ ವರ್ಷ ಉಳಿದ ಕಾಮಗಾರಿಗೆ ಬಾಕಿಯಿದ್ದ ₹ 2 ಕೋಟಿ ಅನುದಾನ ಬಿಡುಗಡೆಯಾದ ಕೂಡಲೇ ಮೈದಾನದ ಕಾಮಗಾರಿ ಚುರುಕುಗೊಂಡಿತು. ಜಲ್ಲಿಕಲ್ಲು ಹಾಕಿ ಸಮತಟ್ಟುಗೊಳಿಸಿರುವ ಮೈದಾನಕ್ಕೆ ಡಾಂಬರೀಕರಣ ಅಳವಡಿಸಲಾಯಿತು. ಇದರ ಮೇಲೆ ಹಸಿರು ಮ್ಯಾಟ್ ಅಳವಡಿಸಲಾಗಿದೆ. ಆದರೆ, ಅಂತಿಮ ಸ್ವರೂಪ ನೀಡಬೇಕಾಗಿದ್ದು, ಹಾಕಿ ಟರ್ಫ್ ಮೈದಾನದ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದೆ. ಮುಂದಿನ ಮಳೆಗಾಲದ ಒಳಗೆ ಅದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಕ್ರೀಡಾಪಟುಗಳ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳ ಆಶಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !