ದಂಪತಿ ಆತ್ಮಹತ್ಯೆ, ಮೂವರು ಕಾರ್ಮಿಕರ ಸಾವು: ಕೊಡಗಿಗೆ ಕರಾಳವಾದ ಸೋಮವಾರ

ಶನಿವಾರ, ಏಪ್ರಿಲ್ 20, 2019
32 °C

ದಂಪತಿ ಆತ್ಮಹತ್ಯೆ, ಮೂವರು ಕಾರ್ಮಿಕರ ಸಾವು: ಕೊಡಗಿಗೆ ಕರಾಳವಾದ ಸೋಮವಾರ

Published:
Updated:
Prajavani

ಮಡಿಕೇರಿ: ಕೊಡಗು ಜಿಲ್ಲೆಯ ಮಟ್ಟಿಗೆ ಸೋಮವಾರ ಕರಾಳವಾಗಿ ಪರಿಣಮಿಸಿದೆ ಜಿಲ್ಲೆಯಲ್ಲಿ ವಿವಿಧೆಡೆ ನಡೆದ ದುರ್ಘಟನೆಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ ಅರ್ವತೊಕ್ಲು ಗ್ರಾಮದ ತೋಟದಲ್ಲಿ ವಿದ್ಯುತ್‌ ಅವಘಡದಿಂದ ಮೂವರು ಕಾರ್ಮಿಕರು ಮೃತಪಟ್ಟಿದ್ದರೆ, 7ನೇ ಹೊಸಕೋಟೆಯಲ್ಲಿ ಬಾಲಕಿಯೊಬ್ಬಳು ಅಕಸ್ಮಿಕ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ. ಇನ್ನು ಮಡಿಕೇರಿಯ ಪಂಪಿನಕೆರೆಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ. ಕೆಳಗಿನ ಮೇಕೇರಿಯಲ್ಲಿ ಚಿನ್ನಾಭರಣದ ಆಸೆಗೆ ಮಹಿಳೆಯನ್ನು ಕೊಲೆ ಮಾಡಲಾಗಿದೆ.

ದಂಪತಿ ಆತ್ಮಹತ್ಯೆ:  ಪಂಪಿನಕೆರೆ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದಂಪತಿ ಸೋಮವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರಿನ ಚೇತನ್ (34) ಹಾಗೂ ವಾಣಿ (28) ಆತ್ಮಹತ್ಯೆ ಮಾಡಿಕೊಂಡವರು.

ಚೇತನ್ ನಗರದ ರಾಜೇಶ್ವರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ವಾಣಿ ಗೃಹಿಣಿ.

ಪ್ರತಿನಿತ್ಯದಂತೆ ಚೇತನ್‌ ಸೋಮವಾರ ಬೆಳಿಗ್ಗೆ ಶಾಲೆಗೆ ತೆರಳಿದ್ದರು. 11.30ರ ಸಮಾರಿಗೆ ರಜೆ ಹಾಕಿ ಮನೆಗೆ ವಾಪಸ್‌ ಆಗಿದ್ದರು. ಮನೆಗೆ ಬಂದು ನೋಡಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂತು. ನಂತರ, ಚೇತನ್ ಪೊಲೀಸರಿಗೆ ಕರೆ ಮಾಡಿ ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಬನ್ನಿ...’ ಎಂದು ತಿಳಿಸಿ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ಮೃತಪಟ್ಟಿದ್ದರು.

ದಂಪತಿಗೆ ಮೂರು ವರ್ಷದ ಮಗುವಿದೆ. ಮನೆಯಲ್ಲಿ ಮೂವರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ತಂದೆ– ತಾಯಿ ಕಣ್ಣೆದುರೇ ಶವವಾಗಿ ಬಿದ್ದಿದ್ದರೆ ಮುಗ್ಧ ಮಗು ಏನೂ ಅರಿಯದೇ ಮೊಬೈಲ್‌ನಲ್ಲಿ ಆಟವಾಡುತ್ತಿತ್ತು. ಈ ದೃಶ್ಯವು ಅಕ್ಕಪಕ್ಕದವರಲ್ಲಿ ಕಣ್ಣೀರು ತರಿಸಿತು. ಕೆಲವರು ಮಗುವನ್ನು ಎತ್ತಿಕೊಂಡ ಸಂತೈಸಿದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂವರು ಕಾರ್ಮಿಕರ ಸಾವು:  ರಾಜಪೇಟೆ ತಾಲ್ಲೂಕಿನ ಅರ್ವತೊಕ್ಲು ಗ್ರಾಮದಲ್ಲಿ  ತೆಂಗಿನಕಾಯಿ ಕೊಯ್ಲು ಮಾಡುತ್ತಿದ್ದಾಗ ವಿದ್ಯುತ್ ತಂತಿ ಮೇಲೆ ಅಲ್ಯುಮಿನಿಯಂ ಏಣಿ ಜಾರಿ ಬಿದ್ದ ಪರಿಣಾಮವಾಗಿ ಮೂವರು ಮೃತಪಟ್ಟಿದ್ದಾರೆ. ಕಾವಡಿ ಗ್ರಾಮದ ಇಗ್ಗುಡ ಸತೀಶ್ (50), ಇಗ್ಗುಡ ರವಿ (45) ಹಾಗೂ ಮೊಟ್ಟೇರ ಧರ್ಮಜ (50) ಮೃತಪಟ್ಟ ಕಾರ್ಮಿಕರು.

ಅರ್ವತೋಕ್ಲು ಗ್ರಾಮದ ರಾಮಜನ್ಮ ಅವರ ತೋಟದಲ್ಲಿ ತೆಂಗಿನ ಕಾಯಿ ಕೊಯ್ಲು ಮಾಡುತ್ತಿದ್ದಾಗ ಆಕಸ್ಮಿಕವಾಗಿ ಏಣಿ ಜಾರಿದೆ. ಮೂವರ ದೇಹಗಳೂ ಸಂಪೂರ್ಣವಾಗಿ ಕರಕಲಾಗಿವೆ.  

ಘಟನೆ ನಡೆದಿದ್ದು ಹೇಗೆ: ತೋಟದಲ್ಲಿ ತೆಂಗಿನ ಕಾಯಿ ಕೊಯ್ಲು ಮಾಡುತ್ತಿದ್ದಾಗ ಮರದ ಹತ್ತಿರದಲ್ಲಿ ಹಾದು ಹೋಗಿದ್ದ 11 ಕೆ.ವಿ. ವಿದ್ಯುತ್ ತಂತಿ ಮೇಲೆ ಏಣಿ ಬಿದ್ದು ಅನಾಹುತ ನಡೆದಿದೆ. ಏಣಿಯ ಬುಡದಲ್ಲಿಯೇ ಮೂವರ ಶವ ಕರಕಲಾಗಿದೆ. ಇದರಿಂದ ಏಣಿಯೇರುವಾಗಲೇ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಒಬ್ಬ ಏಣಿ ಏರುವಾಗ ಇಬ್ಬರು ಏಣಿ ಜಾರದಂತೆ ಹಿಡಿದುಕೊಂಡಿರಬಹುದು. ಆಕಸ್ಮಾತ್ ಏಣಿ ಜಾರುವಾಗ ಒಬ್ಬರನೊಬ್ಬರು ತಾಗಿದಾಗ ವಿದ್ಯುತ್ ಮೂವರಿಗೂ ಪ್ರವಹಿಸಿದ ಕಾರಣ ಈ ದುರ್ಘಟನೆ ನಡೆದಿದೆ. ಬೆಂಕಿಯಿಂದ ಸುತ್ತ ತೋಟದಲ್ಲಿನ ಎಲೆಗಳು ಸುಟ್ಟುಹೋಗಿವೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.  

ಕೆರೆಗೆ ಬಿದ್ದು ಬಾಲಕಿ ಸಾವು

ಸುಂಟಿಕೊಪ್ಪ: ಸಮೀಪದ 7ನೇ ಹೊಸಕೋಟೆಯಲ್ಲಿ ಮನೆಯ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದಾಳೆ.

ದಾಸಂಡ ರಂಜನ್ ಅವರ ತೋಟದಲ್ಲಿ ಕಾರ್ಮಿಕರಾಗಿರುವ ಚೋಮ ಅವರ ಪುತ್ರಿ ಭಾರತಿ (13) ಮೃತಪಟ್ಟ ಬಾಲಕಿ.

8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ತೋಟದ ಲೈನ್‌ಮನೆಯ ಪಕ್ಕದಲ್ಲಿ ಸಾಕಿದ ನಾಯಿಯೊಂದಿಗೆ ಆಟವಾಡುತ್ತಿದ್ದಳು. ಆಟದ ಮಧ್ಯೆ ಬಾಲಕಿಯನ್ನು ಓಡಿಸಿಕೊಂಡು ಹೋಗಿದ್ದು, ಓಡುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಭಾರತಿ ಕೆರೆಗೆ ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.

ಅಕ್ಕಪಕ್ಕದವರು ಕೆರೆಯಿಂದ ಬಾಲಕಿಯನ್ನು ಮೇಲಕ್ಕೆತ್ತಿದದರೂ ಆದಾಗಲೇ ಆಕೆ ಮೃತಪಟ್ಟಿದ್ದಳು. ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ಒಳಪಡಿಸಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ನಾಯಿಗೆ ಕಾರು ಡಿಕ್ಕಿ– ಕಾಲು ಮುರಿತ: ಕೆರೆಗೆ ಬಿದ್ದು ಮೃತಪಟ್ಟ ಭಾರತಿಯ ಪೋಷಕರು ವಾಸಿಸುತ್ತಿದ್ದ ಲೈನ್‌ಮನೆಯು ರಾಷ್ಡ್ರೀಯ ಹೆದ್ದಾರಿಯ ಸಮೀಪದಲ್ಲಿದ್ದು, ಈ ಘಟನೆಯ ನಂತರ ಆಕೆಯ ಸಾವಿಗೆ ಕಾರಣ ಎನ್ನಲಾದ ನಾಯಿಯು ಮೃತದೇಹದೊಂದಿಗೆ ಮಲಗಿಕೊಂಡಿತ್ತು. ಇದು ಎಲ್ಲರ ಕಣ್ಣಲ್ಲಿ ನೀರು ತರಿಸಿತು. 

ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಹೆದ್ದಾರಿಯಲ್ಲಿ ವೇದನೆಯಲ್ಲಿ ನಿಂತಿದ್ದ ನಾಯಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು ಇದರಿಂದ ನಾಯಿಯ ಕಾಲು ಮುರಿದಿದೆ. ಒಂದೆಡೆ ತನ್ನ ಒಡತಿಯ ಅಗಲುವಿಕೆಯಿಂದ ಹಾಗೂ ಕಾಲು ಮುರಿದುಕೊಂಡಿರುವ ಸಾಕು ನಾಯಿಯು ಮೂಕವೇದನೆ ಅನುಭವಿಸುತ್ತಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 8

  Sad
 • 0

  Frustrated
 • 1

  Angry

Comments:

0 comments

Write the first review for this !