ಸಿದ್ದಾಪುರದಲ್ಲಿ 27ರಿಂದ ಕೆಸಿಎಲ್‌ ಕಲರವ

ಶುಕ್ರವಾರ, ಮೇ 24, 2019
33 °C
ಕೊಡಗಿನಲ್ಲಿ ಕ್ರಿಕೆಟ್‌ ಪ್ರೇಮಿಗಳಿಗೆ ಕ್ರೀಡಾ ಹಬ್ಬ

ಸಿದ್ದಾಪುರದಲ್ಲಿ 27ರಿಂದ ಕೆಸಿಎಲ್‌ ಕಲರವ

Published:
Updated:
Prajavani

ಮಡಿಕೇರಿ: ಕೊಡಗಿನಲ್ಲಿ ಮಳೆಗಾಲಕ್ಕೂ ಮುನ್ನವೇ ಅಂದರೆ ಏಪ್ರಿಲ್‌– ಮೇ ತಿಂಗಳಲ್ಲಿ ಕ್ರೀಡಾ ಜಾತ್ರೆಯೇ ನಡೆಯುತ್ತದೆ. ಪ್ರತಿವರ್ಷ ಬೇಸಿಗೆ ದಿನಗಳಲ್ಲಿ ಕ್ರೀಡಾ ಪ್ರೇಮಿಗಳಿಗೆ ಹಬ್ಬವಿದ್ದಂತೆ. ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ್ದ ಪ್ರಾಕೃತಿಕ ದುರಂತದಿಂದ ಕ್ರೀಡಾ ಉತ್ಸವಗಳು ಅದ್ಧೂರಿ ತನ ಕಳೆದುಕೊಂಡಿದ್ದರೂ, ಕ್ರಿಕೆಟ್‌, ಹಾಕಿ, ಫುಟ್‌ಬಾಲ್‌ ಟೂರ್ನಿಗಳನ್ನು ಜೀವಂತವಾಗಿ ಇಡುವ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕಾಗಿ ಸಂಘಟಕರು ಅವಿರತ ಶ್ರಮ ಹಾಕುತ್ತಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು ಮೈದಾನದಲ್ಲಿ ಹಾಕಿ ಕೂರ್ಗ್‌ ವತಿಯಿಂದ ಕೊಡವ ಕೌಟುಂಬಿಕ ಚಾಂಪಿಯನ್ಸ್‌ ಲೀಗ್‌ ಹಾಗೂ ಚಾಂಪಿಯನ್ಸ್‌ ಟ್ರೋಫಿ ಶನಿವಾರದಿಂದ ಆರಂಭಗೊಂಡಿದೆ.

ಮತ್ತೊಂದು ಕಡೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ಇದೇ 27ರಿಂದ ಕೆಸಿಎಲ್‌ ಟೂರ್ನಿ ಆರಂಭಗೊಳ್ಳಲಿದೆ. ಅದಕ್ಕೆ 7 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಮೈದಾನ ಸಜ್ಜುಗೊಂಡಿದೆ. ಪಾರ್ಕಿಂಗ್‌ ವ್ಯವಸ್ಥೆ, ಉತ್ತಮ ಪಿಚ್‌ ಸಹ ತಯಾರಾಗಿದೆ.
ಸಿದ್ದಾಪುರ ಸಿಟಿ ಬಾಯ್ಸ್‌ ಯುವಕ ಸಂಘದ ಆಶ್ರಯದಲ್ಲಿ ನಾಲ್ಕನೇ ಆವೃತ್ತಿಯ ಟೂರ್ನಿ ಇದಾಗಿದ್ದು, ಇದುವರೆಗೂ ಮೂರು ಟೂರ್ನಿಗಳು ಯಶಸ್ವಿಯಾಗಿ ಮುಕ್ತಾಯವಾಗಿದ್ದವು.

ಮೈದಾನ ಹೇಗಿದೆ?: ಕರಡಿಗೋಡು ಗ್ರಾಮದ ಕುಕ್ಕುನೂರು ಪಿ. ಪುರುಷೋತ್ತಮ ಹಾಗೂ ದೇವಪ್ರಕಾಶ್ ಮಾಲೀಕತ್ವದ ಜಾಗದಲ್ಲಿ ನೂತನ ಮೈದಾನ ನಿರ್ಮಾಣವಾಗಿದೆ. ಮೈದಾನಕ್ಕೆ ಕುಕ್ಕುನೂರು ದಿವಂಗತ ಬಾಲಕೃಷ್ಣ ಹಾಗೂ ದಿವಂಗತ ಚೇತನ್ ಸ್ಮರಣಾರ್ಥ ಮೈದಾನ ಎಂದು ನಾಮಕರಣ ಮಾಡಲಾಗಿದೆ.

ಸಾಮಾಜಿಕ ಜಾಲತಾಣ ಬಳಕೆ: ಬಹುತೇಕ ಕ್ರಿಕೆಟ್‌ ಆಸಕ್ತಿಯುಳ್ಳ ಯುವಕರೇ ಸೇರಿಕೊಂಡು ಕೆಸಿಎಲ್‌ ಸಂಘಟಿಸುತ್ತಿದ್ದು, ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದಲ್ಲದೇ ಕ್ರಿಕೆಟ್‌ ಪಂದ್ಯಾವಳಿಯ ಸ್ಕೋರ್ ಸಹ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಲಿದೆ ಎನ್ನುತ್ತಾರೆ ಆಯೋಜಕರು.

8 ಭಾಷೆಗಳಲ್ಲಿ ವೀಕ್ಷಕ ವಿವರಣೆ, ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆ.ಎಸ್.ಸಿ.ಎ) ಅನುಭವಿ ತೀರ್ಪುಗಾರರು ಹಾಗೂ ಸ್ಕೋರರ್‌ಗಳು ಪಂದ್ಯಾವಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ.

ಏ.27ರಂದು ಅಂತರರಾಷ್ಟ್ರೀಯ ಅಥ್ಲೀಟ್ ಅರ್ಜುನ್ ದೇವಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ. ಪತ್ರಕರ್ತರ ತಂಡ ಹಾಗೂ ಕೊಡಗು ಜಿಲ್ಲಾ ಪೊಲೀಸ್‌ ತಂಡಗಳ ನಡುವೆ ಪ್ರದರ್ಶನ ಪಂದ್ಯವೂ ನಡೆಯಲಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !