ಗುರುವಾರ , ಸೆಪ್ಟೆಂಬರ್ 23, 2021
20 °C

ಪ್ರಾಕೃತಿಕ ವಿಕೋಪ: ಕೊಡಗು ಜಿಲ್ಲೆಯ ರೈತರಿಗೆ ₹32.76 ಕೋಟಿ ಪರಿಹಾರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಜಿಲ್ಲೆಯಲ್ಲಿ ಕಳೆದವರ್ಷ ಸಂಭವಿಸಿದ್ದ ಪ್ರಾಕೃತಿಕ ವಿಕೋಪದಿಂದ ನಷ್ಟಕ್ಕೆ ಒಳಗಾಗಿದ್ದ ರೈತರಿಗೆ ಒಟ್ಟು ₹ 32.76 ಕೋಟಿಯಷ್ಟು ಪರಿಹಾರ ವಿತರಣೆ ಮಾಡಲಾಗಿದೆ’ ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಡಾ.ರಾಜ್‌ಕುಮಾರ್‌ ಖತ್ರಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳೆ ನಷ್ಟಕ್ಕೆ ಒಳಗಾದ ರೈತರು ಪರಿಹಾರ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿದ್ದರು. ಅಂತಹ ರೈತರಿಗೆ ಪರಿಹಾರ ವಿತರಣೆ ಮಾಡಲಾಗಿದೆ. ನಾನಾ ಕಾರಣಕ್ಕೆ ಕೆಲವು ರೈತರ ಪರಿಹಾರ ವಿತರಣೆ ಬಾಕಿಯಿದ್ದು ಎರಡು ದಿನದಲ್ಲಿ ಅವರ ಖಾತೆಗೂ ಹಣ ಹೋಗಲಿದೆ’ ಎಂದು ಮಾಹಿತಿ ನೀಡಿದರು.

‘ಭೂಕುಸಿತದಿಂದ ಜಮೀನು ಕಳೆದುಕೊಂಡ 765 ರೈತರಿಗೆ ₹ 1.75 ಕೋಟಿ, ಗದ್ದೆಗಳಲ್ಲಿ ಹೂಳು ತುಂಬಿ ನಷ್ಟಕ್ಕೆ ಒಳಗಾದ 351 ರೈತರಿಗೆ ₹ 20.92 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ’ ಎಂದು ಖತ್ರಿ ಮಾಹಿತಿ ನೀಡಿದರು.

ಸೂಕ್ಷ್ಮ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ: ‘ಬೆಟ್ಟ ಕುಸಿದು ದುರಂತ ಸಂಭವಿಸಿದ್ದ ಸೂಕ್ಷ್ಮ ಪ್ರದೇಶಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು ಸದ್ಯದಲ್ಲೇ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಅಧ್ಯಯನ ಮಾಡಲಿದ್ದಾರೆ. ಬಳಿಕ ಜಿಲ್ಲಾಧಿಕಾರಿಗೆ ವರದಿ ನೀಡಲಿದ್ದಾರೆ. ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಸೂಚ್ಯವಾಗಿ ಹೇಳಿದರು.

‘ಜಿಲ್ಲೆಯ ಜನರು ಸುಳ್ಳು ಸುದ್ದಿ ಕಿವಿಗೊಡದೇ ಜಿಲ್ಲಾಡಳಿತ ನೀಡುವ ಅಧಿಕೃತ ಮಾಹಿತಿಯನ್ನೇ ನಂಬಬೇಕು. ವ್ಯಾಟ್ಸ್‌ಆ್ಯಪ್‌ ಹಾಗೂ ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ಸಿಡಿಲು ಆ್ಯಪ್‌ ಅನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಅಭಿವೃದ್ಧಿ ‍ಪಡಿಸಿದ್ದು, ಅದರ ಮೂಲಕವೂ ಎಲ್ಲ ಮಾಹಿತಿ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.

‘ಪ್ರವಾಹ, ಅತಿವೃಷ್ಟಿ ಬಗ್ಗೆ ಮೇ ಮೂರನೇ ವಾರದಲ್ಲಿ ಅಣಕು ಪ್ರದರ್ಶನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬಿರುಗಾಳಿ ಹಾಗೂ ಪ್ರವಾಹದ ವೇಳೆ ವಿದ್ಯುತ್‌ ಮಾರ್ಗ ಹಾಗೂ ವಿದ್ಯುತ್‌ ಪರಿವರ್ತಕಕ್ಕೆ ಹಾನಿಯಾದರೆ ತಕ್ಷಣವೇ ದುರಸ್ತಿ ಮಾಡಬೇಕೆಂದು ಸೆಸ್ಕ್‌ ಎಂಜಿನಿಯರ್‌ಗೆ ತಿಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲಾ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿ ದಾಸ್ತಾನು ಮಾಡಲು ಸೂಚಿಸಲಾಗಿದೆ. ಹೆಚ್ಚುವರಿ ವೈದ್ಯರನ್ನು ನಿಯೋಜಿಸಲೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಗಡುವು: ‘ಬಾಕಿಯುಳಿದ ಎಲ್ಲ ಕಾಮಗಾರಿಗಳನ್ನೂ ಈ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಮುಂಗಾರು ಮಳೆ ಏನಾದರೂ ಅನಾಹುತ ಸಂಭವಿಸಿದರೆ ಅದನ್ನು ಎದುರಿಸಲು ಜಿಲ್ಲಾಡಳಿತ ಸಂಪೂರ್ಣವಾಗಿ ಸಿದ್ಧವಾಗಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾದೇಶಿಕ ಆಯುಕ್ತ ಅನಿಲ್‌ಕುಮಾರ್‌, ದಕ್ಷಿಣ ವಲಯದ ಐಜಿ ಉಮೇಶ್‌ಕುಮಾರ್‌, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್‌ರೆಡ್ಡಿ, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪೆನ್ನೇಕರ್‌, ಸಿಇಒ ಲಕ್ಷ್ಮೀಪ್ರಿಯಾ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು