ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ವಿಪತ್ತು ಎದುರಿಸಲು ಪೊಲೀಸರು ಸಜ್ಜು

ಜಿಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಕಾರ್ಯಾಗಾರ ಆರಂಭ
Last Updated 9 ಮೇ 2019, 13:44 IST
ಅಕ್ಷರ ಗಾತ್ರ

ಮಡಿಕೇರಿ: ಅನಿರೀಕ್ಷಿತವಾಗಿ ಬರುವ ವಿಪತ್ತನ್ನು ಸಮಯ ಪ್ರಜ್ಞೆಯಿಂದ ಎದುರಿಸಿಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್‌ ಸೂಚಿಸಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಪೊಲೀಸ್ ಘಟಕ ವತಿಯಿಂದ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಿಪತ್ತು ನಿರ್ವಹಣೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ್ದ ದುರಂತವನ್ನು ಅರಿತುಕೊಂಡು ಈ ವರ್ಷ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ. ಪೊಲೀಸ್ ಇಲಾಖೆ ವತಿಯಿಂದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರನ್ನು ಸ್ಥಳಾಂತರ ಮಾಡುವ ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಒಂದುವಾರದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ವರ್ಷದಲ್ಲಿ ಸಂಭವಿಸಬಹುದಾದ ವಿಪತ್ತು ನಿರ್ವಹಣೆ ಎದುರಿಸುವಲ್ಲಿ ಪೊಲೀಸ್‌ ಇಲಾಖೆ ಅಗತ್ಯ ತಯಾರಿ ಮಾಡಿಕೊಳ್ಳಬೇಕಿದೆ ಎಂದು ಸೂಚಿಸಿದರು.

ಚಂಡಮಾರುತ, ಭೂಕಂಪಗಳನ್ನು ಮುಂಚಿತವಾಗಿಯೇ ವೈಜ್ಞಾನಿಕವಾಗಿ ತಿಳಿದುಕೊಳ್ಳಬಹುದು. ಆದರೆ, ನೈಸರ್ಗಿಕ ವಿಕೋಪಗಳಾದ ಪ್ರವಾಹ ಮತ್ತು ಭೂಕುಸಿತ ತಿಳಿಯುವುದು ಕಷ್ಟಸಾಧ್ಯ. ಆದ್ದರಿಂದ ಎಲ್ಲದಕ್ಕೂ ಮೊದಲೆ ತಯಾರಿಯಾಗುವುದು ಅನಿವಾರ್ಯ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದರು.

ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ಕೆ.ಎಸ್. ಸುಂದರರಾಜ್ ಮಾತನಾಡಿ, ಕಳೆದ ವರ್ಷ ವಿಪತ್ತು ಸಂದರ್ಭದಲ್ಲಿ ಇಲಾಖೆ ಸಿಬ್ಬಂದಿಗಳು ರಕ್ಷಣ ಕಾರ್ಯದಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿದ್ದರು. ವಿಕೋಪ ಸಂದರ್ಭ ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದರು.

ಬೆಂಗಳೂರಿನ ಟೀಂ ಸೃಷ್ಟಿ ಅಡ್ವೆಂಚರ್ಸ್ ಸಂಸ್ಥೆಯ ತಜ್ಞರಾದ ಸಂತೋಷ್, ಅಕ್ಷಿತಾ ಮತ್ತು ಅನಘಾ ಹಾಗೂ ಪುಣೆ ಆರ್.ಟಿ. ಜಿಯೋ ಮತ್ತು ಪರಿಸರ ಸಮನ್ವಯ ಸಂಸ್ಥೆಯ ಭೂವಿಜ್ಞಾನಿ ರೆನಿ ಥಾಮಸ್ ಅವರ ತಜ್ಞರ ತಂಡವು ಒಂದು ವಾರ ತರಬೇತಿ ನೀಡುತ್ತಿದೆ.

ಎಸ್‌ಐ ನಾಗೇಗೌಡ, ಡಿಎಸ್‌ಬಿ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಡಿಸಿಆರ್‌ಬಿ ನಿರೀಕ್ಷಕ ಇರ್ಷಾದ್ ಅಹಮದ್, ಡಿಸಿಐಬಿ ನಿರೀಕ್ಷಕ ನಾಗೇಶ್ ಹಾಗೂ ಡಿಎಆರ್‌ನ ಆರ್‌ಪಿಐ ರಾಚಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT