ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಳೆಯಿಂದ ತೊಂದರೆಗೊಳಗಾದ ರೈತರಿಗೆ ಕೇಂದ್ರದ ಮಾರ್ಗಸೂಚಿಯಂತೆ ಪರಿಹಾರ

ಪರಿಹಾರ ವಿತರಣೆಯಲ್ಲಿ ತಾರತಮ್ಯ ಆಗಿಲ್ಲ: ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌
Last Updated 16 ಮೇ 2019, 12:46 IST
ಅಕ್ಷರ ಗಾತ್ರ

ಮಡಿಕೇರಿ: ಕಳೆದ ವರ್ಷ ಮಹಾಮಳೆಯಿಂದ ತೊಂದರೆಗೆ ಒಳಗಾದ ರೈತರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿಯೇ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದರು.

ಬೆಳೆ ನಾಶಕ್ಕೆ ಪರಿಹಾರ ನೀಡುವ ಸಂದರ್ಭದಲ್ಲಿ ತಾರತಮ್ಯ ಎಸಗಲಾಗಿದೆ. ಪರಿಹಾರಕ್ಕೆ ಯೋಗ್ಯರಲ್ಲದವರಿಗೂ ಪರಿಹಾರ ನೀಡಲಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಿಸುತ್ತಿರುವುದು ಗಮನಕ್ಕೆ ಬಂದಿದೆ. ಪರಿಹಾರ ವಿತರಣೆಯಲ್ಲಿ ಕೇಂದ್ರದ ನಿಯಮಾವಳಿಗಳನ್ನು ಪಾಲಿಸಲಾಗಿದೆ ಎಂದು ಹೇಳಿದರು.

ಎಷ್ಟು ಪರಿಹಾರ ವಿತರಣೆ?: ಕಾಫಿ, ಸಂಬಾರ ಬೆಳೆ ಹಾನಿ ಹೆಕ್ಟೇರ್‌ಗೆ ₹ 18 ಸಾವಿರದಂತೆ ಗರಿಷ್ಠ 2 ಹೆಕ್ಟೇರ್‌ಗೆ ಪರಿಹಾರ ವಿತರಿಸಲಾಗಿದೆ. ಕೃಷಿ ಭೂಮಿಯಲ್ಲಿ ಹೂಳು ತೆಗೆಯಲು ಹೆಕ್ಟೇರ್‌ಗೆ ₹ 12 ಸಾವಿರದಂತೆ ಗರಿಷ್ಠ 2 ಹೆಕ್ಟೇರ್‌ಗೆ ಪರಿಹಾರ ವಿತರಣೆ ಮಾಡಲಾಗಿದೆ. ಭೂಕುಸಿತದಿಂದ ಜಮೀನು ನಾಶವಾಗಿದ್ದರೆ ಹೆಕ್ಟೇರ್‌ಗೆ ₹ 37,500ರಂತೆ ಗರಿಷ್ಠ 2 ಹೆಕ್ಟೇರ್‌ಗೆ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕಾಫಿ ಮಂಡಳಿಯ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಪ್ರವಾಹ ಹಾಗೂ ಭೂಕುಸಿತದಿಂದ ಬೆಳೆ ಹಾನಿ, ಜಮೀನು ನಾಶ ಹಾಗೂ ಜಮೀನುಗಳಲ್ಲಿ ಹೂಳು ತುಂಬಿರುವ ಪ್ರಮಾಣವನ್ನು ದೃಢೀಕರಿಸಿರುತ್ತಾರೆ. ಈ ಜಂಟಿ ಸಮೀಕ್ಷೆ ಆಧಾರದ ಮೇಲೆಯೇ ಫಲಾನುಭವಿಗಳ ಪಟ್ಟಿ ತಯಾರಿಸಿ ಪರಿಹಾರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪರಿಹಾರ ವಿತರಣೆಯಲ್ಲಿ ಸಣ್ಣ ಅಥವಾ ದೊಡ್ಡ ಹಿಡುವಳಿ ಹೊಂದಿರುವ ರೈತರ ನಡುವೆ ಯಾವುದೇ ರೀತಿಯ ತಾರತಮ್ಯ ಅನುಸರಿಸಿರುವುದಿಲ್ಲ. ಮಾನದಂಡದಲ್ಲಿನ ಗರಿಷ್ಠ ಕ್ಷೇತ್ರದ (2 ಹೆಕ್ಟೇರ್ ತನಕ) ಹಾನಿಗೆ ಮಾತ್ರ ಪರಿಹಾರ ನೀಡಲಾಗಿದೆ ಎಂದು ಹೇಳಿದರು.

ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೇ ಸಂದೇಹಗಳಿದ್ದಲ್ಲಿ ನೇರವಾಗಿ ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಬಹುದು. ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಬೆಳೆ ಪರಿಹಾರ ಪಾವತಿಸಿರುವ ಫಲಾನುಭವಿಗಳ ಪಟ್ಟಿ ಮತ್ತು ಸಾರ್ವಜನಿಕರ ಮಾಹಿತಿಯನ್ನು ಜಿಲ್ಲಾ ವೆಬ್‌ಸೈಟ್‌ನಲ್ಲಿ ಪಡೆಯಬಹುದು ಎಂದು ಮಾಹಿತಿ ನೀಡಿದರು.

ಹೆದ್ದಾರಿಯಲ್ಲಿ ತಡೆಗೋಡೆ ನಿರ್ಮಾಣ: ಮಡಿಕೇರಿ–ಜೋಡುಪಾಲ ರಸ್ತೆಯಲ್ಲಿ ಅತಿವೃಷ್ಟಿಗೆ ಹಾನಿಯಾದ ರಸ್ತೆಯಲ್ಲಿ ಶಾಶ್ವತ ತಡೆಗೋಡೆ ಕಾಮಗಾರಿ ಆರಂಭಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಕಾಮಗಾರಿ ಆರಂಭಿಸಿದ್ದು ರಸ್ತೆ ಹಾನಿಗೊಳಗಾದ ಪ್ರದೇಶದಲ್ಲಿ 300 ಮೀಟರ್ ವಿಸ್ತಾರದ 30 ಅಡಿ ಉದ್ದದ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

2ನೇ ಮೊಣ್ಣಂಗೇರಿಗೆ ಭೇಟಿ: ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ. ಲಕ್ಷ್ಮಿಪ್ರಿಯಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ವೀಕ್ಷಣೆ ಮಾಡಿದರು. ಪೂರ್ಣ, ಭಾಗಶಃ ಹಾನಿಗೀಡಾದ ಮನೆಗಳನ್ನು ಪರಿಶೀಲಿಸಿದರು.

ರಸ್ತೆ, ಕುಡಿಯುವ ನೀರು, ಮನೆ ಪರಿಹಾರ, ಬೆಳೆ ಪರಿಹಾರ, ಮನೆ ಬಾಡಿಗೆ ಹಾಗೂ ಇನ್ನಿತರ ಪ್ರಮುಖ ಸಮಸ್ಯೆ ಆಲಿಸಿದ ಡಿ.ಸಿ, ಸಂತ್ರಸ್ತರು ಪರಿಹಾರದಿಂದ ವಂಚಿತರಾಗಿದ್ದರೆ ತಕ್ಷಣವೇ ಪರಿಶೀಲಿಸಿ ವರದಿ ನೀಡಬೇಕು ಎಂದು ನೋಡಲ್‌ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT