ಮರ ಸಾಗಣೆ ನಿರ್ಬಂಧ: ಆದೇಶ ಹಿಂಪಡೆಯಲು ಒತ್ತಾಯ

ಶುಕ್ರವಾರ, ಜೂಲೈ 19, 2019
24 °C
ಜಿಲ್ಲಾ ಭೂಮಾಲೀಕರು ಮತ್ತು ಮರ ವ್ಯಾಪಾರಿಗಳ ಸಂಘದಿಂದ ಪ್ರತಿಭಟನೆಯ ಎಚ್ಚರಿಕೆ

ಮರ ಸಾಗಣೆ ನಿರ್ಬಂಧ: ಆದೇಶ ಹಿಂಪಡೆಯಲು ಒತ್ತಾಯ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಜೂನ್‌ 12ರಿಂದ ಆಗಸ್ಟ್ 8ರವರೆಗೆ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಅದನ್ನು ಪುನರ್ ಪರಿಶೀಲಿಸಿ ಆದೇಶವನ್ನು ಹಿಂಪಡೆಯಬೇಕು ಎಂದು ಜಿಲ್ಲಾ ಭೂಮಾಲೀಕರು ಮತ್ತು ಮರ ವ್ಯಾಪಾರಿಗಳ ಸಂಘ ಹಾಗೂ ಜಿಲ್ಲಾ ಕ್ರೇನ್ಅ ಸೋಸಿಯೇಷನ್, ಜಿಲ್ಲಾ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ಜಿಲ್ಲಾ ಭೂಮಾಲೀಕರು ಮತ್ತು ಮರ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಕೆ.ಎ.ಆದಂ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಇಲ್ಲಿಯ ಕಾಫಿ ಬೆಳೆಗಾರರು, ಭೂಮಾಲೀಕರು ತಮ್ಮ ತೋಟದಲ್ಲಿ ಬೆಳೆದ ಬಳಂಜಿ, ಸಿಲ್ವರ್ ಓಕ್‌ ಮರಗಳನ್ನು ತಮ್ಮ ಕಷ್ಟಗಳು ನಿವಾರಣೆಯಾಗಲು ಮರದ ವ್ಯಾಪಾರಸ್ಥರಿಗೆ ಮಾರುತ್ತಾರೆ. ಆದರೆ, ಯಾವುದೇ ದಂಧೆ ಮಾಡುತ್ತಿಲ್ಲ ಎಂದು ಹೇಳಿದರು.

ಮರ ವ್ಯಾಪಾರಿಗಳು ಕೂಡ ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ಮರ ಕಡಿಯುತ್ತಾರೆ. ಆದರೆ, ಜಿಲ್ಲಾಡಳಿತ ನಿರ್ಬಂಧ ಮಾಡಿರುವ ಕ್ರಮ ಸರಿಯಲ್ಲ ಎಂದು ಆದಂ ದೂರಿದರು.

ಜಿಲ್ಲೆಯಲ್ಲಿ ಮಾರ್ಚ್ ತಿಂಗಳವರೆಗೆ ಕಾಫಿ ಕೊಯ್ಲು ಇರುವುದರಿಂದ ಏಪ್ರಿಲ್ ನಂತರ ಮರಗಳನ್ನು ಕಡಿಯಲಾಗುತ್ತಿದೆ. ಮರ ಕಡಿದು ಸಾಗಾಟ ಮಾಡಲು 3 ತಿಂಗಳ ಅವಕಾಶಬೇಕು. ಆದರೆ, ಜಿಲ್ಲಾಡಳಿತ ಏಕಾಏಕಿ ಯಾವುದೇ ಮುನ್ಸೂಚನೆಯನ್ನೂ ನೀಡದೇ ಲೋಕೋಪಯೋಗಿ ಇಲಾಖೆ ಮಾತು ಕೇಳಿ ಮರ ಮತ್ತು ಮರಳು ಸಾಗಣೆಗೆ ನಿರ್ಬಂಧ ಹೇರಿರುವುದು ಸರಿಯಲ್ಲ ಎಂದು ಆರೋಪಿಸಿದರು.

ಈಗಾಗಲೇ ಲಾರಿ ಮಾಲೀಕರು ಹಾಗೂ ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಡಿದ ಮರಗಳು ಮಳೆಯಿಂದ ಹಾಳಾಗಿ ನಷ್ಟ ಉಂಟಾಗುತ್ತದೆ. ಹಾಗಾಗಿ, ಈಗಾಗಲೇ ಕಡಿದು ಸಂಗ್ರಹ ಮಾಡಿರುವ ಮರಗಳು ಮತ್ತು ಮರಳು ಸಂಗ್ರಹಣೆ ಮಾಡಿರುವುದರ ಸಾಗಾಣಿಕೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಸೂಕ್ತ ಸ್ಪಂದನೆ ದೊರಕದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಭೂಮಾಲೀಕರು ಮತ್ತು ಮರ ವ್ಯಾಪಾರಿಗಳ ಸಂಘದ ಅಧ್ಯಕ್ಷ ರವಿ ಕುಟ್ಟಪ್ಪ, ಕಾರ್ಯದರ್ಶಿ ಮನೋರಂಜನ್, ಜಿಲ್ಲಾ ಕ್ರೇನ್‌ ಅಸೋಸಿಯೇಷನ್ ಕಾರ್ಯದರ್ಶಿ ರಿತೇಶ್, ಜಿಲ್ಲಾ ಲಾರಿ ಮಾಲೀಕರ ಸಂಘದ ಪದಾಧಿಕಾರಿ ರೂಪೇಶ್ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !