ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಸಾಧಕರ ಊರಲ್ಲೇ ಕ್ರೀಡಾಂಗಣದ ಕೊರತೆ

ಸೋಮವಾರಪೇಟೆ: ಸುಸ್ಸಜಿತ ಮೈದಾನ ಕೊಡಿ– ಕ್ರೀಡಾಪಟುಗಳ ಮನವಿ
Last Updated 16 ಜುಲೈ 2019, 19:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ದೇಶ– ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ಸಾಧಕರ ತವರೂರಿನಲ್ಲೇ ಕ್ರೀಡಾಂಗಣಗಳ ಕೊರತೆ ಕಂಡುಬಂದಿದೆ.

ಸೋಮವಾರಪೇಟೆ ತಾಲ್ಲೂಕು ಕೇಂದ್ರವಾಗಿದ್ದು ಇಲ್ಲಿ ಹಾಕಿ, ಕ್ರಿಕೆಟ್‌, ಫುಟ್‌ಬಾಲ್‌, ಅಥ್ಲೆಟಿಕ್ಸ್‌, ಕಬಡ್ಡಿ ಸೇರಿದಂತೆ ಸಾಕಷ್ಟು ಕ್ರೀಡೆಗಳಲ್ಲಿ ಸ್ಥಳೀಯ ಪ್ರತಿಭೆಗಳು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಗೌರವ ಹೆಚ್ಚಿಸಿದ್ದಾರೆ. ಆದರೂ, ಕ್ರೀಡಾಪಟುಗಳಿಗೆ ಉತ್ತಮ ಆಟದ ಮೈದಾನದ ಸೌಲಭ್ಯವಿಲ್ಲ!

ಬೆಳಿಗ್ಗೆ ಸಾಕಷ್ಟು ಮಹಿಳೆಯರು, ಪುರುಷರು ಇರುವ ಚಿಕ್ಕ ಮೈದಾನದಲ್ಲಿ ವಾಯುವಿಹಾರಕ್ಕೆ ಆಗಮಿಸುತ್ತಾರೆ. ಆದರೆ, ಇದೇ ಮೈದಾನವನ್ನು ಹಾಕಿ, ಕ್ರಿಕೆಟ್‌, ಫುಟ್‌ಬಾಲ್‌ ಸೇರಿದಂತೆ ಇನ್ನಿತರ ಕ್ರೀಡೆಗಳಿಗೂ ಬಳಸಿಕೊಳ್ಳಲಾಗುತ್ತದೆ. ಸಾಕಷ್ಟು ಕಳೆ, ದೂಳು ತುಂಬಿರುವುದರಿಂದ ಮೂಗುಮುಚ್ಚಿಕೊಂಡೇ ವ್ಯಾಯಾಮ ಮಾಡುವ ಸ್ಥಿತಿಯಿದೆ.

ಸ್ಪಂದಿಸದ ಜನಾಪ್ರತಿನಿಧಿಗಳು: ಕ್ರೀಡಾಂಗಣದ ಅವಶ್ಯಕತೆಯನ್ನು ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಕ್ರೀಡಾಪ್ರೇಮಿಗಳು ನೋವು ತೋಡಿಕೊಂಡಿದ್ದಾರೆ.

ಬೆಳಿಗ್ಗೆ ವಾಯುವಿಹಾರಕ್ಕೆ ಹೆಚ್ಚಿನವರು ಶಾಲೆಗಳ ಮೈದಾನವನ್ನೇ ಆಶ್ರಯಿಸಬೇಕಾಗಿದೆ. ಒಂದೆರಡು ಗಂಟೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮಾಡಲು ಆಗಮಿಸಿದರೂ, ಸೂಕ್ತ ಮೈದಾನದ ಕೊರತೆಯಿದೆ. ಸರಿಯಾದ ಸ್ಥಳವಿಲ್ಲದೇ, ಹೆಚ್ಚಿನ ಜನರು ಮೈದಾನದತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ.

ಈ ಹಿಂದೆ ಇಲ್ಲಿ ಎರಡು ಮೈದಾನಗಳಿದ್ದವು. ಶಾಲಾ ಕ್ರೀಡಾಕೂಟಗಳು ನಡೆಯುತ್ತಿದ್ದವು. ಅದರಲ್ಲಿ ಒಂದು ಮೈದಾನವನ್ನು ಟರ್ಫ್ ಮೈದಾನ ನಿರ್ಮಿಸುವ ಸಲುವಾಗಿ 6 ವರ್ಷಗಳ ಹಿಂದೆ ಭೂಮಿಪೂಜೆ ಮಾಡಿದ್ದರೂ ಕಾಮಗಾರಿ ನಡೆದಿಲ್ಲ. ಇದರ ಬದಿಯಲ್ಲೇ ಬಾಸ್ಕೆಟ್‌ಬಾಲ್‌ ಕ್ರೀಡಾಂಗಣವನ್ನು ಕ್ರೀಡಾಪಟುಗಳೇ ಸ್ವಂತ ಹಣದಿಂದ ನಿರ್ಮಾಣ ಮಾಡಿದ್ದರೂ, ಅದನ್ನು ಕಿತ್ತು ಹಾಕಲಾಗಿದೆ.

‘ಮೈದಾನವನ್ನು ಕಿತ್ತುಹಾಕಿ ಅದರ ಮಧ್ಯದಲ್ಲಿ ಜಲ್ಲಿ–ಕಲ್ಲುಗಳನ್ನು ಹಾಕಲಾಗಿದೆ. ಅಲ್ಲದೇ, ಕಾಡು ಬೆಳೆದಿರುವುದರಿಂದ ಬಳಸಲು ಸಾಧ್ಯವಾಗುತ್ತಿಲ್ಲ. ಹಾಕಿ ಆಟವಾಡಲು ಅಲ್ಲದಿದ್ದರೂ ಬೆಳಿಗ್ಗೆ– ಸಂಜೆ ವ್ಯಾಯಾಮ ಮಾಡಲು ಕ್ರೀಡಾಂಗಣ ಸಿದ್ಧ ಮಾಡಿಕೊಡಿ’ ಎಂದು ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಬಿ.ಎಸ್.ಪ್ರಕಾಶ್ ಮನವಿ ಮಾಡಿದರು.

‘ಸರ್ಕಾರದಿಂದ ಯಾವುದೇ ಹಣ ನಿರೀಕ್ಷಿಸದೇ ಸ್ವಂತ ಹಣದಿಂದ ಸುಸಜ್ಜಿತ ಮೈದಾನವನ್ನು ನಿರ್ಮಿಸಿಕೊಂಡಿದ್ದೆವು. ಇದು ಟರ್ಫ್ ಮೈದಾನದ ಬದಿಯಲ್ಲಿತ್ತು. ಇದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ಆದರೂ, ಮೈದಾನವನ್ನು ಕಿತ್ತು ನಾವು ಆಟವಾಡಲು ತೊಂದರೆ ನೀಡಿದ್ದಾರೆ. ಈಗ ನಾವು ಸಿಕ್ಕ ಸ್ಥಳದಲ್ಲಿ ಆಟವಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಮಗೂ ಉತ್ತಮ ಮೈದಾನ ನಿರ್ಮಿಸಿಕೊಡಬೇಕು’ ಎಂದು ಹಿರಿಯ ಕ್ರೀಡಾಪಟು ಬಾಲಕೃಷ್ಟ ನಂಬಿಯಾರ್ ಹೇಳಿದರು.

*
ಮೈದಾನ ಮಧ್ಯದಲ್ಲಿಯೇ ಜಲ್ಲಿಕಲ್ಲುಗಳನ್ನು ಹಾಕಲಾಗಿದೆ. ಕಾಡು ಬೆಳೆದಿರುವುದರಿಂದ ಬಳಸಲು ಸಾಧ್ಯವಾಗುತ್ತಿಲ್ಲ.
-ಬಿ.ಎಸ್. ಪ್ರಕಾಶ್, ಸ್ಥಾಪಕ ಅಧ್ಯಕ್ಷ, ಬ್ಲೂಸ್ಟಾರ್ ಹಾಕಿ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT