ಸೋಮವಾರ, ಆಗಸ್ಟ್ 26, 2019
20 °C
ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಸೂಚನೆ

ಪ್ರವಾಹ: ಹಾನಿ ವಿವರ ಸಲ್ಲಿಸಿ

Published:
Updated:
Prajavani

ಮಡಿಕೇರಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ನಷ್ಟದ ಅಂದಾಜು ಪಟ್ಟಿಯನ್ನು ತುರ್ತಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆಹಾನಿ ಸಂಬಂಧ ನಡೆದ ತುರ್ತುಸಭೆಯಲ್ಲಿ ಅವರು ಮಾತನಾಡಿದರು.

ವ್ಯಾಪಕ ಮಳೆಯಿಂದ ಸಾವು–ನೋವು, ಜಾನುವಾರುಗಳ ಜೀವಹಾನಿ, ಕೃಷಿ ಭೂಮಿ, ಕಾಫಿ ಬೆಳೆ, ರಸ್ತೆ, ಸೇತುವೆ, ಮನೆಗಳಿಗೆ ಹಾನಿ... ಹೀಗೆ ವ್ಯಾಪಕ ಹಾನಿ ಉಂಟಾಗಿದ್ದು, ಸರ್ಕಾರಕ್ಕೆ ನಷ್ಟದ ಪ್ರಾಥಮಿಕ ಅಂದಾಜು ಪಟ್ಟಿಯನ್ನು ನೀಡಬೇಕಿದೆ. ಅಧಿಕಾರಿಗಳು ಯಾವುದೇ ಲೋಪದೋಷ ಆಗದಂತೆ ನಿಯಮಾನುಸಾರ ಅಂದಾಜು ಪಟ್ಟಿ ಸಿದ್ಧಪಡಿಸಿ ತುರ್ತಾಗಿ ಸಲ್ಲಿಸಬೇಕು ಎಂದು ಹೇಳಿದರು.

ಜಿಲ್ಲೆಯ ವಿವಿಧೆಡೆ ತೆರೆಯಲಾಗಿರುವ ಪುನರ್ವಸತಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯ ನೀಡಿದ್ದು, ಪ್ರಾಥಮಿಕ ಹಂತದಲ್ಲಿ ₹3,800 ಹಾಗೂ ಪ್ರತಿ ವ್ಯಕ್ತಿಗೆ ದಿನಭತ್ಯೆಯನ್ನು ಮತ್ತು ಪಡಿತರ ಕಿಟ್‌ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅಡಿಯಲ್ಲಿ ಅಗತ್ಯ ಹಣವಿದೆ. ತುರ್ತು ಕೆಲಸಗಳಿಗೆ ಯಾವುದೇ ಕೊರತೆ ಆಗದಂತೆ ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್‌, ಜಿ.ಪಂ ಸಿಇಒ ಲಕ್ಷ್ಮಿಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಹಾಜರಿದ್ದರು.

ಸಾಮಗ್ರಿಗಳ ವಿತರಣೆ: ಶಾಸಕರಾದ ಆರ್. ಅಶೋಕ್, ಕೆ.ಜಿ.ಬೋಪಯ್ಯ, ಕೃಷ್ಣಪ್ಪ, ಸಂಸದ ಪ್ರತಾಪ ಸಿಂಹ, ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್ ಅವರು ಪ್ರವಾಹ ಪೀಡಿತ ಸಂತ್ರಸ್ತರಿಗೆ ಆಹಾರ ಹಾಗೂ ಬಟ್ಟೆ ಇತರೆ ಸಾಮಗ್ರಿಗಳನ್ನು ವಿತರಿಸಿದರು.

ವಿರಾಜಪೇಟೆ ತಾಲ್ಲೂಕಿನ ಬೆಕ್ಕೆಸೊಡ್ಲೂರು, ಕಾನೂರು, ಬಾಳೆಲೆ, ನಿಟ್ಟೂರು, ಸಿದ್ದಾಪುರ ಮತ್ತಿತರ ಪುನರ್ವಸತಿ ಕೇಂದ್ರಗಳಿಗೆ ಶಾಸಕರು ಭೇಟಿ ನೀಡಿ, ಆಹಾರದ ಕಿಟ್‌ ವಿತರಿಸಿದರು.

Post Comments (+)