ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಬಸ್ ಮಾಲೀಕರಿಗೂ ‘ಬರೆ’ ಎಳೆದ ಮಳೆ

ಗ್ರಾಮೀಣ ಜನರ ‘ಜೀವಾಳ’ 160 ಖಾಸಗಿ ಬಸ್‌ಗಳು
Last Updated 15 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಮಡಿಕೇರಿ: ಕಳೆದ ಒಂದು ವಾರ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಪ್ರವಾಹದ ಪರಿಸ್ಥಿತಿಯ ಕಾರಣ ಬಹುತೇಕ ರಸ್ತೆಗಳು ಬಂದ್‌ ಆಗಿದ್ದವು. ಪ್ರವಾಹವು ಖಾಸಗಿ ಬಸ್ ಮಾಲೀಕರಿಗೂ ಬರೆ ಎಳೆದಿದೆ. ಖಾಸಗಿ ಬಸ್‌ಗಳ ಓಡಾಟ ಇಲ್ಲದೇ ಮಾಲೀಕರಿಗೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ.

ಕೊಡಗು ಜಿಲ್ಲೆಯ ಸುದ್ದಿ ಓದಲುwww.prajavani.net/kodaguಲಿಂಕ್ ಬಳಸಿ

ಕೊಡಗಿನ ಗ್ರಾಮೀಣ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳೇ ಜೀವಾಳ. ಪುಟ್ಟ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಸಂಖ್ಯೆಯೂ ನೂರರಮೇಲಿದೆ. ಬಸ್‌ಗಳಿಂದ ಬರುತ್ತಿದ್ದ ಆದಾಯವನ್ನೇ ನಂಬಿಜೀವನ ಸಾಗಿಸುತ್ತಿದ್ದ ಹಲವರ ಆದಾಯವನ್ನು ಮಹಾಮಳೆ ಕಸಿದುಬಿಟ್ಟಿದೆ.

ಕಳೆದ ವರ್ಷ ಭೂಕುಸಿತದಿಂದ ಆದ ನಷ್ಟದಿಂದ ಚೇತರಿಸಿಕೊಳ್ಳದ ಬಸ್‌ ಮಾಲೀಕರಿಗೆ ಈ ಬಾರಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮತ್ತೊಮ್ಮೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ ಎಂದು ಬಸ್‌ ಮಾಲೀಕರು ಅಳಲು ತೋಡಿಕೊಳ್ಳುತ್ತಾರೆ.

ಭಾರಿ ಮಳೆಯಿಂದ ಆಗಸ್ಟ್‌ 6ರಿಂದಲೇ ಜಿಲ್ಲೆಯ ವಿವಿಧ ಗ್ರಾಮೀಣ ರಸ್ತೆಗಳು ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಬಂದ್‌ ಆಗಿದ್ದವು. ಇದರಿಂದ ಬಸ್‌ಗಳ ಓಡಾಟಕ್ಕೆ ಬ್ರೇಕ್‌ ಬಿದ್ದಿತ್ತು. ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳಿಗೆ ಒಂದು ವಾರದ ದುಡಿಮೆ ಇರಲಿಲ್ಲ. ಈಗ ಅವರ ಜೀವನವೂ ಕಷ್ಟವಾಗಿದೆ.

ವಿರಾಜಪೇಟೆ– ಮಾಕುಟ್ಟ ರಸ್ತೆ, ಭಾಗಮಂಡಲ– ತಲಕಾವೇರಿ, ಭಾಗಮಂಡಲ– ಮಡಿಕೇರಿ, ಮೂರ್ನಾಡು– ವಿರಾಜಪೇಟೆ, ಗೋಣಿಕೊಪ್ಪಲು– ಪೊನ್ನಂಪೇಟೆ, ಅಯ್ಯಂಗೇರಿ– ಭಾಗಮಂಡಲ, ನಾಪೋಕ್ಲು– ಪಾರಾಣೆ, ಸಿದ್ದಾಪುರ– ಕರಡಿಗೋಡು, ನಿಟ್ಟೂರು– ಬಾಳೆಲೆ, ಗೋಣಿಕೊಪ್ಪಲು– ಬಾಳೆಲೆ, ಕರಿಕೆರಸ್ತೆಗಳಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ ಮಾಲೀಕರಿಗೆ ನಷ್ಟವಾಗಿದೆ. ಇನ್ನು ಸೋಮವಾರಪೇಟೆ, ಕುಶಾಲನಗರ ಭಾಗದಲ್ಲೂ ಮೂರು ದಿನಗಳವರೆಗೆ ವಾಹನ ಸಂಚಾರ ಸಾಧ್ಯವಾಗಿರಲಿಲ್ಲ.

ನಿಂತಲ್ಲೇ ನಿಂತವು ಬಸ್‌ಗಳು: ಭೂಕುಸಿತದಿಂದ ಭಾರಿ ವಾಹನಗಳ ಸಂಚಾರ ಸಾಧ್ಯವಿಲ್ಲ ಎಂದು ಜಿಲ್ಲಾಡಳಿತ ಘೋಷಿಸಿತ್ತು. ಇದರಿಂದ ಯಾವುದೇ ಬಸ್‌ಗಳು ತೆರಳಲು ಸಾಧ್ಯವಾಗಿಲ್ಲ. ಬಸ್‌ಗಳು ನಿಂತಲ್ಲಿಯೇ ನಿಂತಿದ್ದವು.

‘ಜಿಲ್ಲೆಯಲ್ಲಿ 160 ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ವಾರದ ಮಳೆಗೆ ಎಲ್ಲರೂ ನಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಶೇ 70ರಷ್ಟು ಬಸ್‌ಗಳು ಪ್ರವಾಹ ಇಳಿದ ರಸ್ತೆಗಳಲ್ಲಿ ಸಂಚರಿಸುತ್ತಿವೆ. ಮಳೆಗಾಲದ ಜುಲೈ, ಆಗಸ್ಟ್‌ನಲ್ಲಿ ಪ್ರತಿವರ್ಷವೂ ನಷ್ಟ ಅನುಭವಿಸುತ್ತೇವೆ’ಎಂದು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT