ಮಂಗಳವಾರ, ನವೆಂಬರ್ 12, 2019
28 °C
ಭಾರತ ಕಮ್ಯುನಿಸ್ಟ್ ಪಕ್ಷದ ಈ.ರಾ.ದುರ್ಗಪ್ರಸಾದ್ ಆಗ್ರಹ

ಅಕ್ರಮ ಒತ್ತುವರಿ ಜಾಗ ನಿರಾಶ್ರಿತರಿಗೆ ಹಂಚಿ

Published:
Updated:

ಮಡಿಕೇರಿ: ಜಿಲ್ಲೆಯಲ್ಲಿ ಅಕ್ರಮವಾಗಿ ಒತ್ತುವರಿ ಆಗಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಿ, ಭೂಕುಸಿತ ಹಾಗೂ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಹಂಚಿಕೆ ಮಾಡಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಈ.ರಾ. ದುರ್ಗಪ್ರಸಾದ್ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೊಡಗಿನ ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಪೈಸಾರಿ ಜಾಗವಿದೆ. ಈ ಜಾಗಗಳನ್ನು ಜಿಲ್ಲಾಡಳಿತ ಪರಿಶೀಲಿಸಿ, ಸಂಕಷ್ಟದಲ್ಲಿರುವ ನಿರಾಶ್ರಿತ ಕುಟುಂಬ ಹಾಗೂ ಬಡ ಕಾರ್ಮಿಕರಿಗೆ ನೀಡಬೇಕು’ ಎಂದು ಆಗ್ರಹಿಸಿದರು.

ನೆಲ್ಯಹುದಿಕೇರಿ, ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೆ ನಡೆಸಿ ಒತ್ತುವರಿ ಜಾಗವನ್ನು ಆಯ್ಕೆ ಮಾಡಿ ಬಡವರಿಗೆ ನೀಡಬೇಕು. ಈ ಭಾಗದಲ್ಲಿ ರಾಜಕೀಯ ಪ್ರಭಾವ ಬಳಸಿ, ಸರ್ಕಾರಿ ಜಾಗವನ್ನು ವಶಪಡಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪೈಸಾರಿ ಜಾಗ ಒತ್ತುವರಿಯಾದ ಕೂಡಲೇ ನಿರಾಶ್ರಿತರಿಗೆ ಹಂಚಿಕೆ ಮಾಡಬೇಕು. ಜತೆಗೆ, ಮನೆ ಕಟ್ಟಿಕೊಳ್ಳಲು ಸರ್ಕಾರ ಧನಸಹಾಯ ನೀಡಬೇಕು ಎಂದು ದುರ್ಗಾಪ್ರಸಾದ್‌ ಕೋರಿದರು.

ಕಾವೇರಿ ನದಿ ಪಾತ್ರದಲ್ಲಿ ಮನೆ ಕಟ್ಟಿಕೊಂಡವರೆಲ್ಲರೂ ಅನಧಿಕೃತವಾಗಿ ಕಟ್ಟಿಕೊಂಡಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಇವರಿಗೆ ಮಳೆ ಹಾನಿ ಪರಿಹಾರ ನೀಡುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಮನೆ ಕಟ್ಟಿಕೊಳ್ಳಲು ಆಯಾ ಪಂಚಾಯಿತಿಯೇ ಅನುಮತಿ ನೀಡಿದೆ. ಮನೆ ಕಂದಾಯವನ್ನೂ ಪಡೆಯುತ್ತಿದೆ. ಇನ್ನು ಮತದಾರ ಪಟ್ಟಿಯಲ್ಲಿ ಹೆಸರಿರುವ ಕಾರಣ ಈ ಮನೆಗಳೆಲ್ಲವೂ ಅಧಿಕೃತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.

ಹೊರದಬ್ಬುವ ಹುನ್ನಾರ: ಮನೆ ಕಳೆದುಕೊಂಡ ಪರಿಹಾರ ಕೇಂದ್ರದಲ್ಲಿ ವಾಸಿಸುತ್ತಿರುವ ಸಂತ್ರಸ್ತರನ್ನು ಪರಿಹಾರ ಕೇಂದ್ರದಿಂದ ಹೊರದಬ್ಬುವ ಹುನ್ನಾರ ಖಂಡನಾರ್ಹ. ಸೂಕ್ತ ವ್ಯವಸ್ಥೆ ಆಗುವವರೆಗೆ ಅವರನ್ನು ಪರಿಹಾರ ಕೇಂದ್ರಗಳಿಂದ ಹೊರಕ್ಕೆ ಕಳುಹಿಸಬಾರದು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದಿಂದ ಬೆಳೆಗಾರರಿಗೆ ಸೂಕ್ತ ರೀತಿಯ ಬೆಂಬಲ ಬೆಲೆ ಘೋಷಿಸಬೇಕು. ಸಣ್ಣ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಅಲ್ಲದೇ, ರೈತರಿಗೆ ಸುಲಭದಲ್ಲಿ ಹೆಚ್ಚು ಖರ್ಚಿಲ್ಲದೇ ತಮ್ಮ ಬೆಳೆಗಳನ್ನು ತಲುಪಿಸಲು ಸಾಧ್ಯವಾಗುವಂತೆ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸದಸ್ಯರಾದ ಎ.ಸಿ.ಸಾಬು, ಎಚ್‌.ಬಿ.ರಮೇಶ್‌ ಹಾಜರಿದ್ದರು. 

ಪ್ರತಿಕ್ರಿಯಿಸಿ (+)