ಶನಿವಾರ, ನವೆಂಬರ್ 23, 2019
17 °C
ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ 54ನೇ ವಾರ್ಷಿಕ ಮಹಾಸಭೆ 

ಸಾಲ ಮನ್ನಾ, ಹೊಸ ಸಾಲ ವಿತರಣೆಗೆ ಪಟ್ಟು

Published:
Updated:
Prajavani

ಮಡಿಕೇರಿ: ನಗರದ ಕೊಡವ ಸಮಾಜದಲ್ಲಿ ಗುರುವಾರ ನಡೆದ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ 54ನೇ ವಾರ್ಷಿಕ ಮಹಾಸಭೆಯಲ್ಲಿ ಕಾಫಿ ಬೆಳೆಗಾರರು, ಸಾಲ ಮನ್ನಾ – ಹೊಸ ಸಾಲ ವಿತರಣೆ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಫಿ ಬೆಳೆಗಾರರ ನಾಣಯ್ಯ ಮಾತನಾಡಿ, ‘ಕಬ್ಬು ಬೆಳೆಗಾರರ ಸಾಲ ಮನ್ನಾ ಮಾಡಲಾಗುತ್ತಿದೆ. ಸಾಕಷ್ಟು ಕಾರ್ಖಾನೆಗಳಿಗೆ ಸಬ್ಸಿಡಿಯನ್ನು ಸರ್ಕಾರ ವಿತರಿಸುತ್ತಿದೆ. ನೇಕಾರರಿಗೂ ನೆರವು ಸಿಕ್ಕಿದೆ. ಆದರೆ, ಕಾಫಿ ಬೆಳೆಗಾರರನ್ನು ಸರ್ಕಾರ ಮರೆತಿದೆ. ಕಾಫಿ ಬೆಳೆಗಾರರ ಸಾಲ ಮನ್ನಾಕ್ಕೆ ಸಂಘವು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಬೆಳೆಗಾರರ ನಿಯೋಗ ಕೊಂಡೊಯ್ಯಲು ಮುಂದಾಗಬೇಕು’ ಎಂದು ಆಗ್ರಹಿಸಿದರು.

ಅದಕ್ಕೆ ಎಂ.ಬಿ.ದೇವಯ್ಯ ಪ್ರತಿಕ್ರಿಯಿಸಿ, ‘ಕೊಡಗಿನ ಅಳಿಯನೇ ಆಗಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಲ್ಲಿ ಮನವಿ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಲ್ಲೂ ಸಾಲ ಮನ್ನಾಕ್ಕೆ ಮನವಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಮತ್ತೊಬ್ಬ ಸದಸ್ಯರ ಸಂಘದಿಂದ ಲಾರಿ ಖರೀದಿಸಿದರೆ ಬೆಳೆಗಾರರಿಗೆ ಸಹಾಯವಾಗಲಿದೆ ಎಂದು ಸಲಹೆ ನೀಡಿದರು. ಅದಕ್ಕೆ ಕೆಲವರು ಆಕ್ಷೇಪಿಸಿ, ‘ಲಾರಿ ಖರೀದಿಸಿ ಸುಮ್ಮನೆ ನಿಲುಗಡೆ ಮಾಡಿದರೆ ಪ್ರಯೋಜನವಾಗದು. ಲಾರಿ ಖರೀದಿಯಿಂದ ನಷ್ಟವೇ ಅಧಿಕ ಅಲ್ಲವೇ’ ಎಂದು ಪ್ರಶ್ನಿಸಿದರು. ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ದೇವಯ್ಯ ಭರವಸೆ ನೀಡಿದರು.

‘ಹೋರಾಟ ಸಂಘಟಿತವಾಗಿಲ್ಲ’: ‘ಕಾಫಿ ಬೆಳೆಗಾರರ ಹೋರಾಟವು ಸಂಘಟಿತವಾಗಿಲ್ಲ. ಅದೇ ಕಾರಣಕ್ಕೆ ಬೆಳೆಗಾರರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸ್ಥಳದಲ್ಲಿ ಟೆಂಟ್‌ ನಿರ್ಮಿಸಿಕೊಂಡು ಪ್ರತಿಭಟನೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಾರೆ. ಕಾಫಿ ಬೆಳೆಗಾರರು ಆ ನಿಟ್ಟಿನಲ್ಲಿ ಹೋರಾಟ ರೂಪಿಸಿದರೆ ನ್ಯಾಯ ಸಿಗಬಹುದು’ ಎಂದು ಆಗ್ರಹಗಳು ಸಭೆಯಲ್ಲಿ ವ್ಯಕ್ತವಾದವು.

ಕೈಬಿಟ್ಟ ‘ಪೆಪ್ಪರ್‌ ಪಾರ್ಕ್‌’: ಜಿಎಸ್‌ಟಿ ಮತ್ತಿತರ ಕಾರಣಕ್ಕೆ ಪೆಪ್ಪರ್‌ ಪಾರ್ಕ್‌ ಯೋಜನೆ ಕೈಬಿಡಲಾಗಿದೆ ಎಂದು ದೇವಯ್ಯ ಸಭೆಗೆ ಮಾಹಿತಿ ನೀಡಿದರು.
ಸಭೆಯ ಆರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿ, ‘ಸಾಕಷ್ಟು ಅಡೆತಡೆಗಳ ನಡುವೆ ಸಂಘವನ್ನು ಲಾಭದ ಹಳಿಗೆ ತರಲಾಗಿದೆ. ಕಳೆದ ಸಾಲಿನಲ್ಲಿ ₹ 1.26 ಕೋಟಿ ನಿವ್ವಳ ಲಾಭದಲ್ಲಿ ಸಂಘವಿದೆ’ ಎಂದು ಮಾಹಿತಿ ನೀಡಿದರು.

‘ಮಾರ್ಚ್‌ ವೇಳೆಗೆ ಚುನಾವಣೆ ನಡೆಯಲಿದೆ. ಕನಿಷ್ಠ ಮೂರು ಮಹಾಸಭೆಗಳಲ್ಲಿ ಭಾಗವಹಿಸಿ, ಪ್ರತಿ ವರ್ಷ ಕನಿಷ್ಠ 5 ಚೀಲ ಕಾಫಿ, ಪ್ರತಿ ವರ್ಷ ಕನಿಷ್ಠ 10 ಕೆ.ಜಿ ಕಾಫಿ ಪುಡಿ, ₹ 5 ಸಾವಿರ ಠೇವಣಿ, ₹ 2 ಸಾವಿರ ಮೌಲ್ಯದ ಇಂಧನ, 50 ಚೀಲ ಕಾಫಿ ಸಂಸ್ಕರಣೆ ಅಥವಾ ದಾಸ್ತಾನು ಮಾಡಿದ್ದವರಿಗೆ ಮಾತ್ರ ಚುನಾವಣೆಯಲ್ಲಿ ಮತದಾನ ಹಾಗೂ ಸ್ಪರ್ಧೆಗೆ ಅವಕಾಶವಿದೆ ಎಂದು ಹೇಳಿದರು.

‘ಬಂಡವಾಳದ ಕೊರತೆಯಿಂದ ಕಾಫಿ ವ್ಯವಹಾರ ನಡೆಸಿಲ್ಲ. ಸಂಘದಲ್ಲಿ ಪ್ರಸ್ತುತ 9,132 ಮಂದಿ ಸದಸ್ಯರಿದ್ದಾರೆ. ಹುಣಸೂರು ಘಟಕದಲ್ಲಿ 320 ಟನ್‌ ಕಾಫಿ ಸಂಸ್ಕರಣೆ ಮಾಡಲಾಗಿದೆ. 6,800 ಕೆ.ಜಿ ಕಾಫಿ ಪುಡಿಯನ್ನು ಮಾಡಲಾಗಿದೆ. ಈ ಅವಧಿಯಲ್ಲಿ ₹ 1.26 ಕೋಟಿ ನಿವ್ವಳ ಲಾಭ ಬಂದಿದ್ದರೂ, ಕ್ರೋಡೀಕೃತವಾಗಿ ₹ 14.45 ಕೋಟಿ ನಷ್ಟದಲ್ಲಿದೆ’ ಎಂದು ಮಾಹಿತಿ ನೀಡಿದರು.

ಕಾಫಿ ಮಂಡಳಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಸಲು ಪಾವತಿಸಲಾಗಿದೆ. ಬಾಕಿ ಬಡ್ಡಿ ಪಾವತಿಸಲು ಕಾಫಿ ಮಂಡಳಿಯಿಂದ ಆದೇಶ ಬಂದಿದೆ. ಅದಕ್ಕೆ ತಡೆಯಾಜ್ಞೆ ಪಡೆದಿದ್ದು, ₹ 50 ಲಕ್ಷವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿದೆ. ಕಾಫಿ ಮಂಡಳಿಗೆ ಪಾವತಿಸಬೇಕಾದ ಬಡ್ಡಿ ವಸೂಲಾತಿ ಕೈಬಿಡುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೇಂದ್ರದ ಸಚಿವರೊಂದಿಗೂ ಮಾತುಕತೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಎಸ್‌.ಪಿ.ಪೊನ್ನಪ್ಪ, ನಿರ್ದೇಶಕರಾದ ನಾಯಕಂಡ ಕೆ. ಅಯ್ಯಣ್ಣ, ಹೊಸೂರು ರಮೇಶ್‌ ಜೋಯಪ್ಪ, ಪಾಡಿಯಮ್ಮಂಡ ಕೆ. ಮುರುಳಿ, ಎಂ.ಎಂ.ಧರ್ಮಾವತಿ, ಚಟ್ರಂಡ ಲೀಲಾ ಮೇದಪ್ಪ, ವ್ಯವಸ್ಥಾಕ ನಿರ್ದೇಶಕ ಡಿ.ಭಾಸ್ಕರಾಚಾರ್‌ ಹಾಜರಿದ್ದರು.

 

ಪ್ರತಿಕ್ರಿಯಿಸಿ (+)