ರೋಚಕ ಹಾದಿಯಲ್ಲಿ ವಿದ್ಯಾರ್ಥಿಗಳ ನಡಿಗೆ

7
ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದ ನರಿಮಲೆಗೆ ಸಂತ ಅನ್ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಚಾರಣ

ರೋಚಕ ಹಾದಿಯಲ್ಲಿ ವಿದ್ಯಾರ್ಥಿಗಳ ನಡಿಗೆ

Published:
Updated:
Prajavani

ವಿರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನ ‘ಸ್ಟೂಡೆಂಟ್ ಆಕ್ಟಿವಿಟಿ ಕ್ಲಬ್‌’ನಿಂದ ಈಚೆಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ದಕ್ಷಿಣ ಕೊಡಗಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದ ನರಿಮಲೆಗೆ ಚಾರಣ ಆಯೋಜಿಸಲಾಗಿತ್ತು.

ಅರಣ್ಯ ಹಾಗೂ ವನ್ಯಮೃಗಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಚಾರಣದ ನೇತೃತ್ವವನ್ನು ಕೂರ್ಗ್ ವೈಲ್ಡ್‌ಲೈಫ್ ಸೊಸೈಟಿಯ ಬೋಸ್ ಮಾದಪ್ಪ ಹಾಗೂ ಉರಗ ತಜ್ಞ ಸ್ನೇಕ್‌ ಸತೀಶ್‌ ವಹಿಸಿದ್ದರು.

ಸುಮಾರು 45 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾರಣದ ವಿಶಿಷ್ಟ ಅನುಭವದೊಂದಿಗೆ ಪರಿಸರ ಕುರಿತು ಅರಿವು ಪಡೆದುಕೊಂಡರು. ಉಪನ್ಯಾಸಕರಾದ ಹೇಮಂತ್, ವಿವೇಕ್‌ ಹಾಗೂ ಅಶ್ವಿನಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಚಾರಣದ ದಿನ ಕಾಲೇಜಿನಿಂದ ಬೆಳಿಗ್ಗೆ 6.30ಕ್ಕೆ ಹೊರಟ ವಿದ್ಯಾರ್ಥಿಗಳ ತಂಡ 8 ಗಂಟೆಗೆ ಇರ್ಪು ಜಲಪಾತದ ಸಮೀಪ ತಲುಪಿ ಬೆಳಗಿನ ಉಪಾಹಾರವನ್ನು ಮುಗಿಸಿತು. ಬಳಿಕ ವಿದ್ಯಾರ್ಥಿಗಳಿಗೆ ಬೋಸ್ ಮಾದಪ್ಪ ಅವರು ಚಾರಣದ ಮಹತ್ವ ಹಾಗೂ ಈ ಸಂದರ್ಭ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳನ್ನು ವಿವರಿಸಿದರು.

ಹಾದಿಯಲ್ಲಿ ಜಿಗಣೆಗಳಿಂದ ಪಾರಾಗಲು ಮುನ್ನೆಚರಿಕೆಯನ್ನು ಕೈಗೊಂಡ ವಿದ್ಯಾರ್ಥಿಗಳು ಮಧ್ಯಾಹ್ನದ ಆಹಾರ ಹಾಗೂ ಅಗತ್ಯ ನೀರನ್ನು ತೆಗೆದುಕೊಂಡು 8.30 ಗಂಟೆಗೆ ಚಾರಣವನ್ನು ಆರಂಭಿಸಿತು. ಇರ್ಪು ಜಲಪಾತದಿಂದ ಮುಂದಕ್ಕೆ ಸುಮಾರು 8 ಕಿ.ಮೀ ದೂರದಲ್ಲಿನ ನರಿಮಲೆ ಶಿಖರದ ಕಡೆಗಿನ ಚಾರಣದ ಹಾದಿ ರೋಚಕವಾಗಿದೆ.

ಜರಿತೊರೆ, ಹಳ್ಳದಿಣ್ಣೆ, ಶೋಲೆ ಅರಣ್ಯ ಸೇರಿದಂತೆ ಪರ್ವತದ ಕಡಿದಾದ ಹಾದಿಯಲ್ಲಿ ಸಾಗಿದ ವಿದ್ಯಾರ್ಥಿಗಳು, ಬ್ರಹ್ಮಗಿರಿ ಅಭಯಾರಣ್ಯದ ಎರಡನೇ ಅತಿ ಎತ್ತರದ ಶಿಖರವಾಗಿರುವ ನರಿಮಲೆಯ ಕಡೆಗೆ ಪಯಣವನ್ನು ಮುಂದುವರಿಸಿದರು.

ನರಿಮಲೆಗೆ ಸಾಗುವ ದಾರಿಯುದ್ದಕ್ಕೂ ಕಾಡಾನೆಗಳ ಸಂಚಾರದ ಕುರುಹಾಗಿ ಅವುಗಳ ತ್ಯಾಜ್ಯ ಹಾಗೂ ಹೆಜ್ಜೆ ಗುರುತುಗಳು ಅಲ್ಲಲ್ಲಿ ಕಂಡುಬರುತ್ತಿದ್ದವು. ಇದು ವಿದ್ಯಾರ್ಥಿಗಳಿಗೆ ಭಯವನ್ನುಂಟು ಮಾಡಿದರೂ, ಕುತೂಹಲ ಹಾಗೂ ಸಾಹಸಿ ಪ್ರವೃತ್ತಿಯಿಂದಾಗಿ ವಿದ್ಯಾರ್ಥಿಗಳು ಮುನ್ನಡೆದರು. ಕೆಲವೆಡೆ ಚಿರತೆ ಸೇರಿದಂತೆ ಕೆಲ ಪ್ರಾಣಿಗಳು ಸಾಗಿದ ಗುರುತುಗಳೂ ಪತ್ತೆಯಾದವು.

ಬೆಳಿಗ್ಗೆ 8.30ಕ್ಕೆ ಆರಂಭಗೊಂಡ ಪ್ರಯಾಣವು ಮಧ್ಯಾಹ್ನ 12.30ಕ್ಕೆ ನರಿಮಲೆ ಪರ್ವತದ ತುದಿಯನ್ನು ತಲುಪುದರೊಂದಿಗೆ ಚಾರಣದ ಮೊದಲ ಹಂತ ಮುಕ್ತಾಯಗೊಂಡಿತು. ಅಲ್ಲಿಯೇ ಮಧ್ಯಾಹ್ನದ ಊಟವನ್ನು ಸೇವಿಸಿದ ವಿದ್ಯಾರ್ಥಿಗಳು ಮಧ್ಯಾಹ್ನ 2ಕ್ಕೆ ಮರಳಿ ಇರ್ಪು ಜಲಪಾತದ ಕಡೆಗೆ ಪ್ರಯಾಣ ಬೆಳೆಸಿದರು.

ಸಂಜೆ 4 ಗಂಟೆಗೆ ಇರ್ಪು ಜಲಪಾತ ಸಮೀಪ ಬಂದ ವಿದ್ಯಾರ್ಥಿಗಳು ಬೋಸ್ ಮಾದಪ್ಪ, ಸತೀಶ್‌ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು. ಬಳಿಕ, ಬಸ್‌ ಹತ್ತಿದ ವಿದ್ಯಾರ್ಥಿಗಳು ಚಾರಣದ ಸುಂದರ ಕ್ಷಣಗಳನ್ನು ಮೆಲುಕು ಹಾಕುತ್ತಾ ತಮ್ಮ ಊರಿನ ಕಡೆಗೆ ಪ್ರಯಾಣ ಬೆಳೆಸಿದರು.

ಜೀವ ವೈವಿಧ್ಯದ ಕುರಿತು ಪರಿಚಯ
ವಿದ್ಯಾರ್ಥಿಗಳು ಚಾರಣದ ನಡುನಡುವೆ ವಿಶ್ರಾಂತಿ ಪಡೆದರು. ಈ ವೇಳೆ, ಬೋಸ್ ಮಾದಪ್ಪ ಅವರು ಔಷಧಗಳ ಉತ್ಪಾದನೆಗೆ ಸೇರಿದಂತೆ ಜೀವಜಗತ್ತಿನ ಉಳಿವಿಗೆ ಅರಣ್ಯಗಳು ನೀಡುತ್ತಿರುವ ಕೊಡುಗೆ ಬಗ್ಗೆ ಉದಾಹರಣೆ ಸಹಿತವಾಗಿ ವಿವರಿಸಿದರು. ಸ್ನೇಕ್‌ ಸತೀಶ್‌ ಅವರು ಹಾವುಗಳ ಕುರಿತು ಹಾಗೂ ತಮ್ಮ ರೋಚಕ ಅನುಭವಗಳ ಬುತ್ತಿಯನ್ನು ತಂಡಕ್ಕೆ ಉಣಬಡಿಸಿದರು.

ಜತೆಗೆ, ಹಾದಿಯಲ್ಲಿ ಕಾಣಸಿಕ್ಕ ಪ್ರಾಣಿಗಳ ಹೆಜ್ಜೆ ಗುರುತು ಹಾಗೂ ಹಿಕ್ಕೆಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ, ಅವುಗಳಿಂದ ಆ ಪ್ರಾಣಿಗಳು ಯಾವುದೆಂದು ಪತ್ತೆ ಹಚ್ಚುವ ವಿಧಾನವನ್ನು ತಿಳಿಸಿದರು. ಕಾಡುಪ್ರಾಣಿ ಹಾಗೂ ಸಸ್ಯರಾಶಿಗಳ ಪರಿಚಯ ಮಾಡಿದ್ದಲ್ಲದೆ, ಅವುಗಳ ವೈಶಿಷ್ಟ್ಯಗಳನ್ನು ತಿಳಿಸಿದರು.


ಚಾರಣದ ಹಾದಿಯಲ್ಲಿ ಬೋಸ್ ಮಾದಪ್ಪ ಹಾಗೂ ಸತೀಶ್‌ ಅವರು ಕಾಡಿನ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !