ಭ್ರಷ್ಟಾಚಾರಕ್ಕೆ ಕುಮ್ಮಕ್ಕು: ‘ಮೈತ್ರಿ’ ವಿರುದ್ಧ ಆಕ್ರೋಶ

7
ಸಚಿವ ಪುಟ್ಟರಂಗ ಶೆಟ್ಟಿ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ರಾಜೀನಾಮೆಗೆ ಆಗ್ರಹ

ಭ್ರಷ್ಟಾಚಾರಕ್ಕೆ ಕುಮ್ಮಕ್ಕು: ‘ಮೈತ್ರಿ’ ವಿರುದ್ಧ ಆಕ್ರೋಶ

Published:
Updated:
Prajavani

ಮಡಿಕೇರಿ: ಸಚಿವ ಪುಟ್ಟರಂಗ ಶೆಟ್ಟಿ ಅವರ ಆಪ್ತ ಮೋಹನ್‌ ಬಳಿ ₹ 25 ಲಕ್ಷ ಹಣ ದೊರೆತಿದ್ದು ವಿಧಾನಸೌಧದಲ್ಲಿ ಕಾಂಗ್ರೆಸ್‌ನವರು ಚುನಾವಣಾ ಭ್ರಷ್ಟಾಚಾರ ಆರಂಭಿಸಿದ್ದಾರೆ. ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ವಿಧಾನಸೌಧದಲ್ಲಿ ಈ ಮೈತ್ರಿ ಸರ್ಕಾರ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಈ ಅವ್ಯವಹಾರಗಳಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಈ ಪ್ರಕರಣವನ್ನು ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ದಿನೇಶ್ ಗುಂಡೂರಾವ್‌ಅವರು ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೇ, ಕೀಳುಮಟ್ಟದ ಪದ ಪ್ರಯೋಗಿಸಿ ನಾಡಿನ ಜನರಿಗೆ ಅಪಮಾನ ಎಸಗಿದ್ದಾರೆ. ಸಮರ್ಥನೆ ಮಾಡುವ ಬದಲಿಗೆ ಸಚಿವರಿಂದ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

‘ಸಚಿವ ಪುಟ್ಟರಂಗ ಶೆಟ್ಟಿ ರಾಜೀನಾಮೆ ನೀಡಬೇಕಾದ ಅಗತ್ಯವಿಲ್ಲ. ಅವರೇನು ಚೆಕ್‌ನಲ್ಲಿ ಹಣ ಪಡೆದಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರೂ ಸಮರ್ಥಿಸಿಕೊಂಡಿದ್ದಾರೆ. ಮೈತ್ರಿ ಸರ್ಕಾರವು ಲೋಕಸಭೆ ಚುನಾವಣೆಗೆ ಹಣ ಕ್ರೋಡೀಕರಿಸಲು ಮುಂದಾಗಿದೆ ಎಂದು ಆಪಾದಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಸಮ್ಮಿಶ್ರ ಸರ್ಕಾರಕ್ಕೆ ಉಳಿಗಾಲ ಇಲ್ಲ. ಮೈತ್ರಿ ಸರ್ಕಾರದಲ್ಲಿ ಸಮನ್ವಯತೆ ಕೊರತೆಯಿದೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಅಧಿಕಾರ ಸ್ವೀಕರಿಸುವಾಗ ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲ ಮಾಡಿ, ವಿದಾನಸೌಧದಲ್ಲಿ ದಲ್ಲಾಳಿಗಳನ್ನು ಇಲ್ಲದಂತೆ ಮಾಡುತ್ತೇನೆ ಎಂದಿದ್ದರು.

ಆದರೆ, ವಿಧಾನಸೌಧದಲ್ಲೇ ಸಚಿವರ ಆಪ್ತ ಕಾರ್ಯದರ್ಶಿ ಬಳಿ ಲಕ್ಷಗಟ್ಟಲೇ ಹಣ ಸಿಕ್ಕಿದೆ. ಆದರೂ, ಕುಮಾರಸ್ವಾಮಿ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಹೇಳಿದರು.

ದಿನೇಶ್ ಗುಂಡೂರಾವ್ ಅವರು ರಾಜ್ಯ ಜನರದಲ್ಲಿ ಕ್ಷಮೆಯಾಚಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಉಸ್ತುವಾರಿ ಸಚಿವರೂ ಕೂಡ ಜಿಲ್ಲೆಯ ಬಗ್ಗೆ ಆಸಕ್ತಿ ಕಡಿಮೆಯಾಗಿದ್ದು ಅವರೂ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಸವಾಲು ಹಾಕಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಯಮುನಾ ಚಂಗಪ್ಪ, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ಅನಿತಾ ಪೂವಯ್ಯ, ನಗರಸಭಾ ಸದಸ್ಯರಾದ ಶಿವಕುಮಾರಿ, ಪಿ.ಡಿ. ಪೊನ್ನಪ್ಪ, ಉಣ್ಣಿಕೃಷ್ಣ, ಪ್ರಮುಖರಾದ ರವಿ ಕುಶಾಲಪ್ಪ, ರಾಬಿನ್ ದೇವಯ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !