ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ಗೆ ಕೊಡಗು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ಎಂದಿನಂತೆ ಬಸ್‌, ಆಟೊರಿಕ್ಷಾ ಸಂಚಾರ; ಸಹಜ ಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆ, ಕಚೇರಿಗಳ ಕಾರ್ಯನಿರ್ವಹಣೆ
Last Updated 8 ಜನವರಿ 2019, 12:14 IST
ಅಕ್ಷರ ಗಾತ್ರ

ಮಡಿಕೇರಿ: ಕಾರ್ಮಿಕ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಸಾರ್ವತ್ರಿಕ ಮುಷ್ಕರ, ಬಂದ್‌ ಕರೆಗೆ ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್‌ನ ವಾತಾವರಣ ಎಲ್ಲಿಯೂ ಕಂಡುಬರಲಿಲ್ಲ.

ಖಾಸಗಿ ಬಸ್‌ಗಳು, ಆಟೊರಿಕ್ಷಾಗಳು ಎಂದಿನಂತೆಯೇ ಸಂಚರಿಸಿದವು. ಅಂಗಡಿಮಳಿಗೆಗಳು ಎಂದಿನಂತೆ ವಹಿವಾಟು ನಡೆಸಿದವು. ಬೆಳಿಗ್ಗೆ 10 ಗಂಟೆಯ ತನಕ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿದಿರಲಿಲ್ಲ. ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳೂ ಸಂಚಾರ ಆರಂಭಿಸಿದವು. ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿತ್ತು.

ಶಾಲಾ – ಕಾಲೇಜುಗಳಿಗೂ ರಜೆ ನೀಡಿರಲಿಲ್ಲ. ವಿರಾಜಪೇಟೆ, ಸೋಮವಾರಪೇಟೆಯಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಬುಧವಾರ ಮಡಿಕೇರಿಯಲ್ಲಿ ರ‍್ಯಾಲಿ ನಡೆಯಲಿದೆ.

ಧರಣಿ: ಅಗತ್ಯವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಗಾಂಧಿ ಮೈದಾನದಲ್ಲಿ ಕೊಡಗು ಜಿಲ್ಲಾ ಕ್ರಿಯಾ ಸಮಿತಿ ವತಿಯಿಂದ ಧರಣಿ ನಡೆಯಿತು.

ಗಾಂಧಿಪ್ರತಿಮೆಯ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ಮುಖಂಡ ಟಿ.ಪಿ.ರಮೇಶ್ ಅವರು, ಅಂಗನವಾಡಿ, ಆಶಾ ಕಾರ್ಯಕರ್ತರು, ಬಿಸಿಯೂಟ, ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆ ರದ್ದು ಮಾಡಿ ಎಲ್ಲ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಉದ್ಯೋಗ ಸೃಷ್ಟಿಸುವ ಕೆಲಸವಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಅಡುಗೆ ಅನಿಲ ದರ ಹೆಚ್ಚಾಗಿ, ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ಆರೋಪಿಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಟ್ಟಪ್ಪ, ಎಚ್‌.ಬಿ.ರಮೇಶ್, ಜಿಲ್ಲಾ ಸ್ವಚ್ಛತಾ ಕಾರ್ಮಿಕ ಸಂಘದ ಅಧ್ಯಕ್ಷೆ ಎಚ್.ಕೆ.ಜಾನಕಿ, ಅಂಚೆ ಇಲಾಖೆ ಕಾರ್ಯದರ್ಶಿ ಬೇಬಿ, ಆಶಾ ಕಾರ್ಯಕರ್ತೆಯರ ಜಿಲ್ಲಾ ಘಟಕದ ಅಧ್ಯಕ್ಷೆ ತೆಕ್ಕಡೆ ಪೂರ್ಣಿಮಾ, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ತಾಲ್ಲೂಕು ಅಧ್ಯಕ್ಷೆ ವಿ.ಎಚ್. ನಾಗರತ್ನಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT