ಕೊಡಗು: ಶೀಘ್ರವೇ ಸಂತ್ರಸ್ತರ ಮನೆ ನಿರ್ಮಾಣ

7
ಪ್ರಭಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಭರವಸೆ

ಕೊಡಗು: ಶೀಘ್ರವೇ ಸಂತ್ರಸ್ತರ ಮನೆ ನಿರ್ಮಾಣ

Published:
Updated:
Prajavani

ಮಡಿಕೇರಿ: ‘ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಶೀಘ್ರವೇ ಮನೆ ನಿರ್ಮಿಸಿಕೊಡಲಾಗುವುದು’ ಎಂದು ಪ್ರಭಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಭರವಸೆ ನೀಡಿದ್ದಾರೆ.

‘ಸಂತ್ರಸ್ತರು ಆತಂಕಕ್ಕೆ ಒಳಗಾಗುವುದು ಬೇಡ. ಕರ್ಣಂಗೇರಿ ಪ್ರದೇಶದಲ್ಲಿ ಅಡಿಪಾಯದ ಕೆಲಸ ಮುಕ್ತಾಯ ಹಂತದಲ್ಲಿದೆ. ಆರ್‌ಸಿಸಿ ಮನೆಯ ನಿರ್ಮಾಣ ಕಾಮಗಾರಿಯೂ ನಡೆಯುತ್ತಿದೆ. ಇಲ್ಲಿ ಫೆಬ್ರುವರಿ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದೆ’ ಎಂದೂ ತಿಳಿಸಿದ್ದಾರೆ.

‘ಮದೆ ಪುನರ್ವಸತಿ ಸ್ಥಳದಲ್ಲೂ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವು ಮನೆಗಳ ನಿರ್ಮಾಣ ಕಾಮಗಾರಿಯೂ ಆರಂಭವಾಗಿದೆ. ಇಲ್ಲಿ ಮಾರ್ಚ್ ಅಂತ್ಯಕ್ಕೆ ಮನೆಗಳನ್ನು ಪೂರ್ಣಗೊಳಿಸುತ್ತೇವೆ’ ಎಂದು ಲಕ್ಷ್ಮಿಪ್ರಿಯಾ ಮಾಹಿತಿ ನೀಡಿದ್ದಾರೆ.

‘ಸೋಮವಾರಪೇಟೆ ತಾಲ್ಲೂಕು ಮಾದಾಪುರದ ಜಂಬೂರು ಪ್ರದೇಶದಲ್ಲಿ ತಳಪಾಯ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಉಳಿದ ಪ್ರದೇಶಗಳಲ್ಲಿಯೂ ಶೀಘ್ರವೇ ಮನೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು. ಎಲ್ಲೆಡೆಯೂ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ನೆರೆ ಹಾವಳಿ ಹಾಗೂ ಭೂಕುಸಿತದಿಂದ ಹಾನಿಗೊಳಗಾದ 840 ಕುಟುಂಬಗಳಿಗೆ ಎರಡು ಬೆಡ್‌ ರೂಂ ಮನೆ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಮನೆಗೆ ₹ 8.85 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಒಟ್ಟು ₹ 82.74 ಕೋಟಿ ವೆಚ್ಚ ಆಗಲಿದೆ’ ಎಂದು ಪ್ರಭಾರ ಡಿಸಿ ತಿಳಿಸಿದ್ದಾರೆ.

‘ಬಡಾವಣೆಗಳಲ್ಲಿ ₹ 31.63 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಮನೆ ನಿರ್ಮಾಣದ ಅಂದಾಜು ವೆಚ್ಚದಲ್ಲಿ ವಿವಿಧ ವಸತಿ ಯೋಜನೆ ಅಡಿ ₹ 11.11 ಕೋಟಿ, ‘ಮುಖ್ಯಮಂತ್ರಿ ಪರಿಹಾರ ನಿಧಿ’ಯಿಂದ ₹ 71.63 ಕೋಟಿಯನ್ನು ರಾಜೀವ್‌ ಗಾಂಧಿ ವಸತಿ ಸಂಸ್ಥೆಗೆ ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿದೆ’ ಎಂದು ಮಾಹಿತಿ ನೀಡಿದ್ದಾರೆ.

ಸಂತ್ರಸ್ತರಿಗೆ ಕರ್ಣಂಗೇರಿ, ಕೆ.ನಿಡುಗಣಿ, ಗಾಳಿಬೀಡು, ಮದೆ, ಸಂಪಾಜೆ, ಬಿಳಿಗೇರಿ, ಜಂಬೂರು ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಮನೆ ನಿರ್ಮಾಣ ಕಾಮಗಾರಿಯು ವಿಳಂಬವಾಗುತ್ತಿದೆ ಎಂದು ಆರೋಪಿಸಿ, ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಸಂತ್ರಸ್ತರು ಈಚೆಗೆ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !