ಬಳಕೆಗೆ ಬಾರದ ನಿಲ್ದಾಣ: ಅಸಮಾಧಾನ

ಸೋಮವಾರ, ಮೇ 27, 2019
29 °C
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭ

ಬಳಕೆಗೆ ಬಾರದ ನಿಲ್ದಾಣ: ಅಸಮಾಧಾನ

Published:
Updated:
Prajavani

ಮಡಿಕೇರಿ: ‘ರಸ್ತೆ ಅಪಘಾತಗಳು ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಆಯಾ ವಾಹನ ಚಾಲಕರ ಕರ್ತವ್ಯ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸೌಂದರ್ಯಾ ಹೇಳಿದರು.

ನಗರದ ಹೊರವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಾಹನ ಚಾಲಕನೂ ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಿಂದ ಅಪಘಾತಗಳಿಂದ ದೂರವಿರಬಹುದು ಎಂದು ಹೇಳಿದರು.

ರಾಷ್ಟ್ರದಲ್ಲಿ ಪ್ರತಿ ವರ್ಷ 1.50 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ಇದರಿಂದ ಕುಟುಂಬದ ಭವಿಷ್ಯವೇ ತೊಂದರೆಗೆ ಸಿಲುಕುತ್ತಿದೆ ಎಂದು ಹೇಳಿದರು.

ಕೆಲವರು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಾರೆ. ಹೆಚ್ಚು ರಸ್ತೆ ಅಪಘಾತಗಳಿಗೆ ಅತಿಯಾದ ವೇಗ, ಹೆಲ್ಮೆಟ್ ಧರಿಸದೇ ಇರುವುದು, ಸೀಟ್ ಬೆಲ್ಟ್ ಹಾಕದಿರುವುದು, ಮೊಬೈಲ್‌ನಲ್ಲಿ ಮಾತನಾಡುವುದೇ ಕಾರಣವಾಗಿರುತ್ತದೆ ಎಂದು ತಿಳಿಸಿದರು.

ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಮಾತನಾಡಿ, ‘ರಸ್ತೆ ಸುರಕ್ಷತೆ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ರಸ್ತೆ, ಪಾದಚಾರಿ ಮಾರ್ಗ, ವಾಹನಗಳ ವೇಗಗಳ ಬಗ್ಗೆ ಚಾಲಕರು ಗಮನಿಸಬೇಕು’ ಎಂದು ಸಲಹೆ ನೀಡಿದರು.

ನಗರದಲ್ಲಿ ₹ 4 ಕೋಟಿ ಖರ್ಚು ಮಾಡಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಆದರೆ, ಇನ್ನೂ ಸಾರ್ವಜನಿಕರ ಉಪಯೋಗಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಟೊ ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ ಮಾತನಾಡಿ, ಅಪಘಾತಕ್ಕೆ ಅವಸರವೇ ಕಾರಣ, ಎಲ್ಲಿಗೆ ತೆರಳಬೇಕಾದರೂ ಸಹ ಪೂರ್ವ ತಯಾರಿ, ಸಮಯ ನಿಗದಿ ಮಾಡಿಕೊಂಡೇ ಹೋಗಬೇಕು ಎಂದು ಸಲಹೆ ನೀಡಿದರು.

ಪ್ರಾದೇಶಿಕ ಸಾರಿಗೆ ಕಚೇರಿಯ ಅಧೀಕ್ಷಕ ಶಿವಣ್ಣ ಮಾತನಾಡಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಹಲವು ಸಂಘ ಸಂಸ್ಥೆಗಳು ಹಾಗೂ ಶಾಲೆ– ಕಾಲೇಜುಗಳು ಜೊತೆಗೂಡಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಯಶಸ್ವಿಯಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.

ಚಿತ್ರಕಲೆ, ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ವಿಜೇತರಾದ ತಲಾ ಮೂವರಿಗೆ ಬಹುಮಾನ ನೀಡಲಾಯಿತು. ಅಧೀಕ್ಷಕಿ ಸಲೀಮಾ, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಸಂಪತ್, ಮೋಟಾರು ವಾಹನ ನಿರೀಕ್ಷಕ ರಾಮಚಂದ್ರ, ರೀಟಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !