‘ಬಂಡಾಯ ಶಮನ’ಕ್ಕೆ ದೇವೇಗೌಡರ ತಂತ್ರ

ಬುಧವಾರ, ಮಾರ್ಚ್ 20, 2019
26 °C
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ‘ಅಸಮಾಧಾನದ ಹೊಗೆ’, ಮೈತ್ರಿ ಅಭ್ಯರ್ಥಿಗೆ ಹೊಸ ಸವಾಲು

‘ಬಂಡಾಯ ಶಮನ’ಕ್ಕೆ ದೇವೇಗೌಡರ ತಂತ್ರ

Published:
Updated:
Prajavani

ಮಡಿಕೇರಿ: ಕೊಡಗು ಜಿಲ್ಲಾ ಜೆಡಿಎಸ್‌ ಈಗ ಒಡೆದ ಮನೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಬಂಡಾಯ ಎದ್ದಿರುವುದು ಮೈತ್ರಿ ಅಭ್ಯರ್ಥಿಗೇ ಮುಳುವಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

ಕೊಡಗು– ಮೈಸೂರು ಲೋಕಸಭಾ ಕ್ಷೇತ್ರಕ್ಕೆ ‘ಮೈತ್ರಿ’ ಅಭ್ಯರ್ಥಿ ಯಾರೆಂದು ಇನ್ನೂ ನಿರ್ಧಾರವಾಗಿಲ್ಲ. ಅಷ್ಟರಲ್ಲಿಯೇ ‘ಅಸಮಾಧಾನ ಸ್ಫೋಟ’ಗೊಂಡಿರುವುದು ಜೆಡಿಎಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಬಂಡಾಯ ಶಮನಕ್ಕೆ ದೇವೇಗೌಡರೇ ಅಖಾಡಕ್ಕೆ ಇಳಿದಿದ್ದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಭರವಸೆ ನೀಡಿದ್ದಾರೆ.    

2018ರ ವಿಧಾನಸಭೆ ಚುನಾವಣೆಯಲ್ಲೂ ಒಂದು ಗುಂಪು ಅಸಮಾಧಾನಗೊಂಡಿತ್ತು. ಮಾಜಿ ಸಚಿವ ಎಂ.ಸಿ. ನಾಣಯ್ಯ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್‌ ಸೇರಿದ್ದರು. ಒಂದು ಬಣವು ಅಭ್ಯರ್ಥಿಗಳ ವಿರುದ್ಧವೇ ಕೆಲಸ ಮಾಡಿತ್ತು ಎಂಬ ಆರೋಪವೂ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಇದೇ ಕಾರಣಕ್ಕೆ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಎ. ಜೀವಿಜಯ ಹಾಗೂ ವಿರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂಕೇತ್‌ ಪೂವಯ್ಯ ಅವರು ಸೋತಿದ್ದರು ಎಂಬ ವಿಶ್ಲೇಷಣೆಗಳೂ ನಡೆದಿದ್ದವು. ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ. 

ಜೆಡಿಎಸ್‌ಗೆ ಕೊಡಗಿನಲ್ಲಿ ಭದ್ರ ನೆಲೆ ಇಲ್ಲದಿದ್ದರೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ‘ಹಲವು ಕೊಡುಗೆ’ ನೀಡುವ ಮೂಲಕ ಕಾರ್ಯಕರ್ತರು ಹಾಗೂ ಜಿಲ್ಲೆಯ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಅದು ಲೋಕಸಭೆ ಚುನಾವಣೆಯಲ್ಲಿ ವರವಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಜಿಲ್ಲಾ ಅಧ್ಯಕ್ಷರ ಹುದ್ದೆಗೆ ಕೆ.ಎಂ.ಬಿ.ಗಣೇಶ್‌ ಅವರನ್ನು ನೇಮಕ ಮಾಡಿದ್ದು ಲೆಕ್ಕಾಚಾರವನ್ನೇ ಬುಡಮೇಲು ಮಾಡುತ್ತಿದೆ.

ಮಾಜಿ ಸಚಿವ ಬಿ.ಎ. ಜೀವಿಜಯ ಹಾಗೂ ಅವರ ಬೆಂಬಲಿಗರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಗಣೇಶ್‌ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಸಾಧ್ಯವಿಲ್ಲವೆಂದು ರಾಜೀನಾಮೆ ನೀಡುವ ತೀರ್ಮಾನಕ್ಕೂ ಬಂದಿದ್ದಾರೆ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳು ರಾಜ್ಯ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. 

ದೇವೇಗೌಡರ ಕರೆ: ಮಂಗಳವಾರ ಬೆಳಿಗ್ಗೆ ಜೀವಿಜಯ ಅವರಿಗೆ ದೇವೇಗೌಡರೇ ಖುದ್ದು ಕರೆ ಮಾಡಿ ‘ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಬುಧವಾರ ಸಂಜೆಯೊಳಗೆ ಎಲ್ಲವನ್ನೂ ಸರಿಪಡಿಸಲಾಗುವುದು. ತಾಳ್ಮೆಯಿಂದ ಇರಬೇಕು’ ಎಂದು ಸೂಚಿಸಿದ್ದಾರೆ. ಹೀಗಾಗಿ, ಜೀವಿಜಯ ಅವರ ಬೆಂಬಲಿಗರು ಕರೆದಿದ್ದ ಪತ್ರಿಕಾಗೋಷ್ಠಿಗೂ ಬ್ರೇಕ್‌ ಬಿದ್ದಿದೆ.

ಅಸಮಾಧಾನ ಯಾಕೆ?: ಜೀವಿಜಯ ಅವರ ಪುತ್ರ ಸಂಜಯ್‌ ಜೀವಿಜಯ ಅವರು ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಜೀವಿಜಯ ಅವರೂ ಪುತ್ರನ ಪರ ಬ್ಯಾಟಿಂಗ್‌ ನಡೆಸಿದ್ದರು. ದೇವೇಗೌಡರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು. ಸಕಾರಾತ್ಮಕ ಸ್ಪಂದನೆಯೂ ಸಿಕ್ಕಿತ್ತು. ಅಷ್ಟರಲ್ಲಿ ಗಣೇಶ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಕುಶಾಲನಗರದಲ್ಲಿಯೇ ತೀರ್ಮಾನ: ಫೆ.28ರಂದು ಕುಶಾಲನಗರಕ್ಕೆ ಬಂದಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಖಾಸಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಅಂದು ಎಚ್‌.ವಿಶ್ವನಾಥ್‌ ಅವರೂ ಬಂದಿದ್ದರು. ಅಂದೇ ಜಿಲ್ಲಾ ಅಧ್ಯಕ್ಷ ನೇಮಕದ ಚರ್ಚೆ ನಡೆದು ನಿರ್ಧಾರ ಅಂತಿಮಗೊಂಡಿತ್ತು ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸಮಿತಿಗೆ ಸಂಕೇತ್‌: ಜಿಲ್ಲಾ ಅಧ್ಯಕ್ಷರಾಗಿದ್ದ ಸಂಕೇತ್‌ ಪೂವಯ್ಯ ಅವರ ವಿರುದ್ಧವೂ ಪಕ್ಷದ ಕೆಲವು ಮುಖಂಡರು ಈ ಹಿಂದೆ ಅಸಮಾಧಾನಗೊಂಡಿದ್ದರು. ಬಹಿರಂಗ ಹೇಳಿಕೆಯನ್ನೂ ನೀಡಿದ್ದರು. ಇದರಿಂದ ಬೇಸರಗೊಂಡು ರಾಜೀನಾಮೆ ಸಲ್ಲಿಸಿದ್ದರು. ಆರು ತಿಂಗಳು ಕಳೆದರೂ ಅಂಗೀಕಾರ ಆಗಿರಲಿಲ್ಲ. ಸೋಮವಾರ ಸಂಕೇತ್‌ ಅವರ ರಾಜೀನಾಮೆ ಅಂಗೀಕರಿಸಿ ಅವರ ಸ್ಥಾನಕ್ಕೆ ಅಡಗೂರು ಎಚ್‌. ವಿಶ್ವನಾಥ್‌ ಅವರ ಬೆಂಬಲಿಗ ಗಣೇಶ್‌ ಅವರನ್ನು ದಿಢೀರ್‌ ಆಗಿ ನೇಮಕ ಮಾಡಲಾಗಿದೆ. ಸಂಕೇತ್‌ ಅವರನ್ನು ರಾಜ್ಯ ಘಟಕಕ್ಕೆ ನೇಮಕ ಮಾಡುವ ಭರವಸೆಯನ್ನೂ ನೀಡಲಾಗಿದೆ. ಅದಕ್ಕೆ ಸಂಕೇತ್‌ ಅವರೂ ಒಪ್ಪಿಗೆ ಸೂಚಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !