11 ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ

ಬುಧವಾರ, ಮಾರ್ಚ್ 27, 2019
22 °C
ದಾಖಲೆ ರಹಿತ ಹಣ ಸಾಗಣೆ ಮಾಡಿದರೆ ವಶ: ಜಿಲ್ಲಾಧಿಕಾರಿ ಎಚ್ಚರಿಕೆ

11 ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ

Published:
Updated:
Prajavani

ಮಡಿಕೇರಿ: ಲೋಕಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕೊಡಗು ಜಿಲ್ಲೆಯಲ್ಲಿ ಒಟ್ಟು 11 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು ಜಿಲ್ಲೆಯ ಒಳಕ್ಕೆ ಬರುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ‘ಮೂರು ಅಂತರ ರಾಜ್ಯ ಚೆಕ್‌ಪೋಸ್ಟ್‌ಗಳಿವೆ. ಸಾರ್ವಜನಿಕರು ದಾಖಲೆ ರಹಿತವಾಗಿ ₹ 50 ಸಾವಿರಕ್ಕಿಂತ ಹಚ್ಚಿನ ನಗದು ಹಾಗೂ ₹ 10 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಉಡುಗೊರೆ ಸಾಗಣೆ ಮಾಡುವಂತಿಲ್ಲ. ವಾಹನಗಳಲ್ಲಿ ₹ 10 ಲಕ್ಷಕ್ಕಿಂತ ಹೆಚ್ಚಿನ ನಗದು ಇರುವುದು ತಪಾಸಣೆ ವೇಳೆ ಕಂಡುಬಂದರೆ ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಹೇಳಿದರು.

ವಾಹನಗಳಲ್ಲಿ ದಿನಬಳಕೆ ವಸ್ತು, ಮದ್ಯ, ಮಾದಕ ದೃವ್ಯಗಳು ಮತ್ತು ಆಯುಧಗಳು ಕಂಡುಬಂದರೆ ವಶಕ್ಕೆ ‍ಪಡೆಯಲಾಗುವುದು ಎಂದು ಮಾಹಿತಿ ನೀಡಿದರು.

ಎಷ್ಟು ಮತದಾರರು?: ಮಡಿಕೇರಿ ವಿಧಾನಸಭಾ ಕ್ಷೇತ್ರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಹಾಯಕ ಚುನಾವಣಾಧಿಕಾರಿ ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 4,35,554 ಮತದಾರರು ಇದ್ದಾರೆ. ಹೊಸದಾಗಿ 7,080 ಯುವ ಮತದಾರರನ್ನು ನೋಂದಣಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಕ್ಕೆ ಇಬ್ಬರು ನೋಡೆಲ್‌ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. 41 ಸೆಕ್ಟರ್‌ ಅಧಿಕಾರಿಗಳ, 14 ಫ್ಲೈಯಿಂಗ್‌ ಸ್ಕ್ವಾಡ್‌, ಎಸ್‌ಎಸ್‌ಟಿ ತಂಡಕ್ಕೆ 42 ಮಂದಿಯನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವೆಚ್ಚ ತಂಡಗಳು: ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯು ₹ 70 ಲಕ್ಷ ಖರ್ಚು ಮಾಡಬಹುದು. ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ವಹಿಸಲು ಇಬ್ಬರು ಸಹಾಯಕ ವೆಚ್ಚ ವೀಕ್ಷಕರು, 2 ಲೆಕ್ಕಪತ್ರ ತಂಡ, 1 ವಿಡಿಯೊ ವೀಕ್ಷಣಾ ತಂಡವನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

813 ಬ್ಯಾಲೆಟ್‌ ಯುನಿಟ್‌, 653 ಕಂಟ್ರೋಲ್‌ ಯುನಿಟ್‌, 697 ವಿ.ವಿ ಪ್ಯಾಟ್‌ಗಳನ್ನು ಸ್ಟ್ರಾಂಗ್‌ ರೂಂನಲ್ಲಿ ಇಡಲಾಗಿದೆ. ಆಯೋಗದ ನಿರ್ದೇಶನದಂತೆ ಇ.ವಿ.ಎಂ ಹಾಗೂ ವಿ.ವಿ ಪ್ಯಾಟ್‌ಗಳನ್ನು ಪರಿಶೀಲನೆ ನಡೆಸಿದ್ದೇವೆ. ಇ.ವಿ.ಎಂ ಹಾಗೂ ವಿ.ವಿ ಪ್ಯಾಟ್‌ಗಳ ಬಳಕೆ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ. ಲೋಕಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯವು ಮೈಸೂರಿನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

11 ಬಗೆಯ ಗುರುತಿನ ಚೀಟಿ: ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಮತದಾರರು ಗುರುತಿನ ಚೀಟಿ ಇಲ್ಲದಿದ್ದರೆ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ 11 ಬಗೆಯ ಗುರುತಿನ ಚೀಟಿ ಹಾಜರುಪಡಿಸಿ ಮತದಾನ ಮಾಡಬಹುದು. ಪಾಸ್‌ಪೋರ್ಟ್‌, ಡ್ರೈವಿಂಗ್ ಲೈಸೆನ್ಸ್‌, ಕಂಪನಿಗಳ ಸೇವಾ ಗುರುತಿನ ಚೀಟಿ, ಬ್ಯಾಂಕ್‌ ಹಾಗೂ ಪೋಸ್ಟ್‌ ಆಫೀಸ್‌ಗಳು ನೀಡಿರುವ ಭಾವಚಿತ್ರವುಳ್ಳ ಪಾಸ್‌ಬುಕ್‌, ಪಾನ್‌ಕಾರ್ಡ್‌, ಎನ್‌ಜಿಆರ್‌ ಮತ್ತು ಎನ್‌ಪಿಆರ್‌ ಮೂಲಕ ನೀಡಿರುವ ಭಾವಚಿತ್ರವುಳ್ಳ ಸ್ಮಾರ್ಟ್‌ಕಾರ್ಡ್‌, ಉದ್ಯೋಗ ಖಾತ್ರಿ ಗುರುತಿನ ಚೀಟಿ, ಹೆಲ್ತ್‌ ಇನ್ಸುರೆನ್ಸ್‌ ಸ್ಮಾರ್ಟ್‌ಕಾರ್ಡ್‌, ಭಾವಚಿತ್ರವಿರುವ ಪೆನ್ಷನ್‌ ದಾಖಲೆ ಹಾಗೂ ಆಧಾರ್‌ ಕಾರ್ಡ್‌ ತೋರಿಸಿ ಮತದಾನ ಮಾಡಬಹುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲಕ್ಷ್ಮಿಪ್ರಿಯಾ, ಎಸ್‌ಪಿ ಸುಮನ್‌ ಪನ್ನೇಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್‌ ಹಾಜರಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !