ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಾಪ ಸಿಂಹ ಮುಖವಾಡ ಕಳಚಲಿದೆ’

ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಹೇಳಿಕೆ
Last Updated 20 ಮಾರ್ಚ್ 2019, 13:30 IST
ಅಕ್ಷರ ಗಾತ್ರ

ಮಡಿಕೇರಿ: ‘ಐದು ವರ್ಷಗಳಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡು ಪ್ರತಾಪ ಸಿಂಹ ಕೊಡಗಿನಲ್ಲಿ ಓಡಾಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರ ಮುಖವಾಡ ಕಳಚಿ ಬೀಳಲಿದೆ’ ಎಂದು ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದರು.

ನಗರದ ಕೊಡವ ಸಮಾಜದಲ್ಲಿ ಬುಧವಾರ ಕಾಂಗ್ರೆಸ್ ಚುನಾವಣೆ ಸಿದ್ಧತಾ ಶಿಬಿರದಲ್ಲಿ ಮಾತನಾಡಿದ ಅವರು, ‘ಪ್ರತಾಪ ಸಿಂಹ ಅವಧಿಯಲ್ಲಿ ಕೊಡಗು–ಮೈಸೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಇಲ್ಲಿಯ ಜನರು ಬುದ್ಧಿವಂತರಿದ್ದಾರೆ. ಈ ಬಾರಿ ಯಾರನ್ನು ಗೆಲ್ಲಿಸಬೇಕೆಂದು ಈಗಾಗಲೇ ನಿರ್ಧರಿಸಿದ್ದಾರೆ. ಪ್ರಚಾರದ ಸೋಗಿನಲ್ಲಿ ಸುಳ್ಳು ಭರವಸೆಗಳನ್ನು ನೀಡುವ ಬಿಜೆಪಿ ನಾಯಕರಿಗೆ ತಕ್ಕಪಾಠವನ್ನು ಕೊಡಗಿನ ಜನರು ಕಲಿಸಲಿದ್ದಾರೆ’ ಎಂದು ಕುಟುಕಿದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್‌ ಸಂಘಟಿತವಾಗಿದೆ. ಕೊಡಗು–ಮೈಸೂರು ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ನಾವು ಟೊಂಕ ಕಟ್ಟಿ ನಿಂತಿದ್ದೇವೆ’ ಎಂದು ನುಡಿದರು.

ಕೆಪಿಸಿಸಿ ವಕ್ತಾರ ಮುರಳೀಧರ್ ಹಾಲಪ್ಪ ಮಾತನಾಡಿ, ಹೊರದೇಶದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೋದಿ ದೇಶದ ಪತ್ರಕರ್ತರನ್ನು ಭೇಟಿ ಮಾಡಲು ಯಾವ ಕಾರಣಕ್ಕೆ ಭಯ ಬೀಳುತ್ತಿದ್ದಾರೆ. ಅದನ್ನು ಜನರು ಎದುರು ಹೇಳಬೇಕು ಎಂದು ಸವಾಲು ಹಾಕಿದರು.

ಆಕಾಶವಾಣಿ, ಎಎನ್‌ಐ, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಮೋದಿ ಕಾಣಿಸಿಕೊಳ್ಳುತ್ತಾರೆ. ಪತ್ರಕರ್ತರೊಂದಿಗೆ ಮಾತನಾಡಲು ನಿಯಮಗಳಿವೆಯೇ ಎಂದು ಪ್ರಶ್ನಿಸಿದರು.

ರೈತರ ಸಾಲಮನ್ನಾ ವಿಚಾರದಲ್ಲಿ ಕೇಂದ್ರ ಯಾವುದೇ ಕೊಡುಗೆ ನೀಡಿಲ್ಲ. ಇನ್ನು ಕೇಂದ್ರದ ಸ್ಮಾರ್ಟ್‌ಸಿಟಿ, ಡಿಜಿಟಲ್ ಇಂಡಿಯಾ, ಉದ್ಯೋಗ ಸೃಷ್ಟಿಯಂತಹ ಯೋಜನೆಗಳು ಅನುಷ್ಠಾನವೇ ಆಗಿಲ್ಲ ಎಂದು ದೂರಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಕುಶಾಲನಗರ ಬ್ಲಾಕ್, ಸೋಮವಾರಪೇಟೆ ಬ್ಲಾಕ್ ಮತ್ತು ನಾಪೋಕ್ಲು ಬ್ಲಾಕ್ ಕಾರ್ಯಕರ್ತರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವರಿ ಮಂಜುಳಾ ರಾಜ್‌, ಕೆಪಿಸಿಸಿ ವಕ್ತಾರ ವೆಂಕಪ್ಪ ಗೌಡ, ಮಾಜಿ ಸಚಿವೆ ಸುಮಾ ವಸಂತ್‌, ಹಿರಿಯ ಮುಖಂಡರಾದ ಮಿಟ್ಟು ಚಂಗಪ್ಪ, ಎಂ.ಸಿ. ನಾಣಯ್ಯ, ಕೆ.ಪಿ. ಚಂದ್ರಕಲಾ, ಟಿ.ಪಿ. ರಮೇಶ್‌, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೆ. ಮಂಜುನಾಥ್‌, ಸುರಯ್ಯ ಅಬ್ರಾರ್‌, ನೆರವಂಡ ಉಮೇಶ್, ಯಕೂಬ್‌, ಅಧ್ಯಕ್ಷರಾದ ಅಪ್ರು ರವೀಂದ್ರ, ಕೆ.ಎಂ. ಲೋಕೇಶ್, ವಿ.ಪಿ. ಶಶಿಧರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT