ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯೇ ಪಾಠ ಕಲಿಸಲಿದೆ ಎಚ್ಚರ: ತೀತಮಾಡ ಅರ್ಜುನ್‌ ದೇವಯ್ಯ

Last Updated 26 ಮಾರ್ಚ್ 2019, 13:26 IST
ಅಕ್ಷರ ಗಾತ್ರ

ಮಡಿಕೇರಿ: ‘ನಮ್ಮ ವರ್ತನೆಗಳಲ್ಲಿ ಬದಲಾವಣೆ ಆಗದಿದ್ದರೆ ಪ್ರಕೃತಿ ಹಾಗೂ ವಯಸ್ಸೇ ಬಹುದೊಡ್ಡ ಪಾಠ ಕಲಿಸಲಿವೆ’ ಎಂದು ಅಂತರರಾಷ್ಟ್ರೀಯ ಅಥ್ಲೀಟ್‌ ತೀತಮಾಡ ಅರ್ಜುನ್‌ ದೇವಯ್ಯ ಎಚ್ಚರಿಸಿದರು.

ನಗರದಲ್ಲಿ ಮಂಗಳವಾರ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಶೋರ್ ರೈ ಕತ್ತಲೆಕಾಡು ಅವರ ‘ಪ್ರಕೃತಿ ಮುನಿದ ಹಾದಿಯಲ್ಲಿ...’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸ್ವಾರ್ಥಕ್ಕಾಗಿ ಬದುಕಿದರೆ ಮಣ್ಣಾದ ಮೇಲೆ ಏನೂ ಉಳಿಯುವುದಿಲ್ಲ. ಸ್ವಾರ್ಥ ಬಿಟ್ಟು ಬದುಕಿದರೆ ಜೀರಂಜೀವಿ ಆಗುತ್ತೇವೆ ಎಂದು ಅವರು ಹೇಳಿದರು. ಪ್ರಕೃತಿ ನಮಗೆ ಯಾವಾಗಲೂ ಪಾಠ ಕಲಿಸುತ್ತದೆ. ನಮ್ಮ ಮನೆಗೆ ಬೆಂಕಿ ಬಿದ್ದಾಗ ಆರಿಸುವ ಯತ್ನಕ್ಕೆ ಮುಂದಾಗುವ ಬದಲಿಗೆ ಪ್ರಕೃತಿಯನ್ನೇ ಮುನಿಯದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸಾಧಕರು ಸಂಸ್ಥೆಗಳನ್ನು ನಿರ್ಮಿಸುವ ಬದಲಿಗೆ ಸಾಧಕರನ್ನು ಬೆಳೆಸುವ ಕೆಲಸಕ್ಕೆ ಮುಂದಾಗಬೇಕು. ಪರಿಶ್ರಮ, ಛಲವಿದ್ದರೆ ಸಾಧನೆ ಸಾಧ್ಯವಾಗುತ್ತದೆ. ನಮ್ಮಲ್ಲಿ ಸಾಧನೆಯ ತುಡಿತವಿದ್ದರೆ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಲಿದೆ. ಅದೇ ಹೊಟ್ಟೆ ಉರಿಯಿದ್ದರೆ ನಮ್ಮನ್ನೇ ಹಾಳು ಮಾಡಲಿದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪೆನ್ನೇಕರ್‌ ಮಾತನಾಡಿ, ‘ವೃತ್ತಿಯೊಂದಿಗೆ ಸಾಮಾಜಿಕ ಜವಾಬ್ದಾರಿಯ ನಿರ್ವಹಣೆ ಮುಖ್ಯ. ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದ ದುರಂತ, ಜನರಿಗೆ ಉಂಟಾದ ತೊಂದರೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮುಟ್ಟಿಸುವಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು. ಪತ್ರಿಕೆ ಹಾಗೂ ಮಾಧ್ಯಮಗಳು ಸವಿಸ್ತಾರ ಮಾಹಿತಿ ನೀಡಿದ್ದರಿಂದಲೇ ಸಂತ್ರಸ್ತರಿಗೆ ತಕ್ಷಣದ ನೆರವು ಲಭಿಸಿತು’ ಎಂದು ಶ್ಲಾಘಿಸಿದರು.

‘ಈ ಬಾರಿ ಜಿಲ್ಲಾಡಳಿತ ಈಗಿನಿಂದಲೇ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಆದರೆ, ಇಂತಹ ದುರಂತ ಮತ್ತೆ ನಡೆಯಬಾರದು’ ಎಂದು ಆಶಿಸಿದರು.

ಎಫ್‌.ಎಂ.ಸಿ. ಕಾಲೇಜು ಪ್ರಾಂಶುಪಾಲ ಪ್ರೊ.ಟಿ.ಡಿ. ತಿಮ್ಮಯ್ಯ, ಜನಸಂಖ್ಯೆ ಹೆಚ್ಚಳವಾದಂತೆ ಪ್ರಕೃತಿಯ ಮೇಲೆ ಅನಾಚಾರದಂಥ ಕೃತ್ಯಗಳು ನಡೆಯುತ್ತಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದಿದ್ದ ಪ್ರಕೃತಿ ವಿಕೋಪಕ್ಕೆ ನಾನಾ ಕಾರಣ ಎಂಬುದನ್ನು ವಿಶ್ಲೇಷಿಸಲಾಗುತ್ತಿದೆ. ಆದರೆ, ಸುಸ್ಥಿರ ಅಭಿವೃದ್ಧಿ ಕುರಿತು ಯಾರೊಬ್ಬರೂ ಚರ್ಚಿಸುತ್ತಿಲ್ಲ. ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಬೇಕು. ಆ ಮೂಲಕ ಪ್ರಾಕೃತಿಕ ವಿಕೋಪ ತಡೆಯಲು ಸಾಧ್ಯ’ ಎಂದು ಹೇಳಿದರು.

ಲೇಖಕ ಕಿಶೋರ್‌ ರೈ ಕತ್ತಲೆಕಾಡು ಪ್ರಾಸ್ತಾವಿಕ ಮಾತನಾಡಿ, ‘ಪುಸ್ತಕದಲ್ಲಿರುವುದು ನೈಜ ಸಂಗತಿಗಳು. ಪ್ರಕೃತಿ ವಿಕೋಪದ ಬಳಿಕ ಕೊಡಗಿನಲ್ಲಿ ಆದ ವಿದ್ಯಮಾನವನ್ನು ಬ್ಲಾಗ್‌ನಲ್ಲಿ ಬರೆಯುತ್ತಿದ್ದೆ. ಸ್ನೇಹಿತರ ಸಲಹೆಯಂತೆ ಪುಸ್ತಕ ಹೊರತರಲಾಗಿದೆ’ ಎಂದು ಹೇಳಿದರು.

ಪ್ರಕೃತಿ ವಿಕೋಪದ ವೇಳೆ ಅಪಾಯಕ್ಕೆ ಸಿಲುಕಿದ್ದ ಚಂದುಗೋಪಾಲ್‌ ಹಾಗೂ ಹೊನ್ನಮ್ಮ ದಂಪತಿ ಉದ್ಘಾಟಿಸಿದರು. ಕೊಡಗು ಪ್ರೆಸ್‌ಕ್ಲಬ್‌ ಅಧ್ಯಕ್ಷ ಅಜ್ಜಮಾಡ ರಮೇಶ್‌ ಕುಟ್ಟಪ್ಪ, ಎಫ್‌.ಎಂ.ಸಿ ಕಾಲೇಜು ಉಪನ್ಯಾಸಕಿ ಡಾ.ನಯನಾ ಕಾಶ್ಯಪ್‌, ಟ್ರಾವೆಲ್‌ ಕೂರ್ಗ್‌ ಸಂಸ್ಥೆ ಚೆಯ್ಯಂಡ ಸತ್ಯ ಗಣಪತಿ ಹಾಜರಿದ್ದರು.

‘ಪರಿಸರ ಹಾಗೂ ಅಭಿವೃದ್ಧಿ’ ವಿಷಯ ಕುರಿತು ನಡೆದಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಎಚ್.ಜಿ.ರಿತೇಶ್‌, ಲೀನಾ, ನಿರ್ಮಿತಾ, ವೇದಶ್ರೀ, ದೀಕ್ಷಿತಾ, ಯಶಸ್ವಿನಿ, ಎಂ.ಆರ್.ಅಮೃತಾ, ಜೆನಿಫಾ, ರಾಜೇಶ್ವರಿ ಅವರಿಗೆ ಗಣ್ಯರು ಬಹುಮಾನ ವಿತರಿಸಿದರು.ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಗೆ ಅರ್ಜುನ್‌ ದೇವಯ್ಯ ಅವರು ವ್ಯಕ್ತಿತ್ವ ವಿಕಸನ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು.

ರಕ್ಷಕರಿಗೆ ಸನ್ಮಾನ

ಪ್ರಕೃತಿ ವಿಕೋಪದ ವೇಳೆ ಹೆಮ್ಮೆತ್ತಾಳ, ಹಟ್ಟಿಹೊಳೆ ವ್ಯಾಪ್ತಿಯಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾಗಿ ಬದುಕಿನ ಆಸೆಯನ್ನೇ ಕಳೆದುಕೊಂಡಿದ್ದವರ ಜೀವ ಉಳಿಸಿದ ರಕ್ಷಕರನ್ನೂ ಸನ್ಮಾನಿಸಲಾಯಿತು.

ಅಗ್ನಿ ಶಾಮಕ ದಳದ ಸಿಬ್ಬಂದಿ ಚೇತನ್‌ ಹಾಗೂ ಲಕ್ಷ್ಮಿಕುಮಾರ್ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT