ಕಾಳುಮೆಣಸು, ಕಾಫಿಗೆ ಉತ್ತಮ ಬೆಲೆ ನಿಗದಿಗೆ ಆಗ್ರಹ: ಕೊಡಗಿನಲ್ಲಿ ಅನ್ನದಾತರ ಜಾಥಾ

ಶನಿವಾರ, ಏಪ್ರಿಲ್ 20, 2019
27 °C
ಗಡಿಭಾಗ ಕುಟ್ಟದಿಂದ ಆರಂಭವಾದ ಜಾಥಾ, ಬೇಡಿಕೆ ಈಡೇರಿಸಲು ರೈತರ ಪಟ್ಟು

ಕಾಳುಮೆಣಸು, ಕಾಫಿಗೆ ಉತ್ತಮ ಬೆಲೆ ನಿಗದಿಗೆ ಆಗ್ರಹ: ಕೊಡಗಿನಲ್ಲಿ ಅನ್ನದಾತರ ಜಾಥಾ

Published:
Updated:
Prajavani

ಮಡಿಕೇರಿ: ಕಾಳುಮೆಣಸು ಹಾಗೂ ಕಾಫಿಗೆ ಉತ್ತಮ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕವು ಕುಟ್ಟದಿಂದ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿವರೆಗೆ ವಾಹನ ಜಾಥಾ ಹಮ್ಮಿಕೊಂಡಿತ್ತು. 

ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಜಾಥಾ ನೇತೃತ್ವ ವಹಿಸಿದ್ದರು. ಮಧ್ಯಾಹ್ನ 3ಕ್ಕೆ ಜಾಥಾ ಮಡಿಕೇರಿ ತಲುಪಿತು. ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರೈತರು, ಬೇಡಿಕೆ ಈಡೇರಿಸುವಂತೆ ಕೋರಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನೂ ಖಂಡಿಸಿದರು.

ಅದಕ್ಕೂ ಮೊದಲು ಕುಟ್ಟ ಗ್ರಾಮದ ಬಸ್‌ ನಿಲ್ದಾಣದಲ್ಲಿ ಜಿಲ್ಲಾ ರೈತ ಸಂಘದ ನೂರಾರು ಸದಸ್ಯರು ಮಾನವ ಸರಪಳಿ ನಿರ್ಮಿಸಿ ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಬಳಿಕ, ಪ್ರಗತಿಪರ ಕೃಷಿಕ ಮಾಚಿಮಾಡ ಸಿ.ಸುಬ್ಬಯ್ಯ ಜಾಥಾಕ್ಕೆ ಹಸಿರು ನಿಶಾನೆ ತೋರಿದರು.

ಬೇರೆ ಯಾರೂ ರೈತಪರ ಕಾಳಜಿ ತೋರುತ್ತಿಲ್ಲ. ರೈತ ಸಂಘಗಳೇ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಹೋರಾಟ ನಡೆಸಬೇಕಿದೆ. ಜಿಲ್ಲೆಯ ರೈತರೆಲ್ಲರೂ ರೈತ ಸಂಘದೊಂದಿಗೆ ಕೈಜೋಡಿಸಿ ಹೋರಾಟಕ್ಕೆ ಇಳಿಯಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ ಪುಚ್ಚಿಮಾಡ ಲಾಲಾ ಪೂಣಚ್ಚ ಹೇಳಿದರು.

ರೈತ ಪರ ಹೋರಾಟಗಾರ ಸೋಮೆಯಂಗಡ ಗಣೇಶ್, ‘ರೈತರು ಬೆಳೆದ ಬೆಳೆಗಳಿಗೆ ಇನ್ನೂ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಸಾಲಮನ್ನಾ ವಿಚಾರದಲ್ಲೂ ರೈತರಿಗೆ ಸ್ಪಂದನೆ ಸಿಗಲಿಲ್ಲ’ ಎಂದರು.

ರಾಜಕೀಯ ರಹಿತವಾಗಿ ರೈತ ಸಂಘ ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ವ್ಯಾಪ್ತಿ ಬೆಂಬಲ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಕೊಡಗಿನ ರೈತರು ಸಂಘದೊಂದಿಗೆ ಕೈ ಜೋಡಿಸಿ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು’ ಎಂದು ಕುಟ್ಟ ಭಾಗದ ಕೃಷಿಕ ಮಚ್ಚಮಾಡ ಸುಬ್ರಮಣಿ ಕೋರಿದರು.

ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ‘ಕರಿಮೆಣಸು ಆಮದು ನೀತಿ ಹಾಗೂ ಕಳ್ಳ ಸಾಗಣೆಯಿಂದ ರೈತರಿಗೆ ತೊಂದರೆ ಉಂಟಾಗಿದೆ. ವಿಯೆಟ್ನಾಂನಿಂದ ಕರಿಮೆಣಸು ಆಮದಾಗುತ್ತಿದೆ. ಇದರಿಂದ ಕಾಳುಮೆಣಸು ಧಾರಣೆ ಕುಸಿದಿದೆ. ಜಿಲ್ಲೆಯ ರೈತರ ಸಂಕಷ್ಟ ಹೆಚ್ಚಾಗಿದೆ’ ಎಂದು ನೋವು ತೋಡಿಕೊಂಡರು.

ವಾಹನ ಜಾಥಾವು ಹುದಿಕೇರಿ, ಪೊನ್ನಂಪೇಟೆ, ಗೋಣಿಕೊಪ್ಪಲು, ವಿರಾಜಪೇಟೆ, ಮೂರ್ನಾಡು ಮಾರ್ಗವಾಗಿ ಮಡಿಕೇರಿ ತಲುಪಿತು.

ರೈತ ಮುಖಂಡರಾದ ಪುಚ್ಚಿಮಾಡ ಸುಭಾಷ್‌ ಸುಬ್ಬಯ್ಯ, ಚೆಟ್ರುಮಾಡ ಸುಜಯ್ ಬೋಪಯ್ಯ, ಅಜ್ಜಮಾಡ ಚಂಗಪ್ಪ, ಬಾಚಮಾಡ ಭವಿಕುಮಾರ್, ಮಂಡೇಪಂಡ ಪ್ರವೀಣ್, ಚಂಗುಲಂಡ ಸೂರಜ್, ದೇವಣಿರ ಸಿ. ಬೋಪಣ್ಣ, ಸಬಿತಾ ಭೀಮಯ್ಯ, ಕುಕ್ಕನೂರು ಎ. ಸೋಮಣ್ಣ, ಪೀಟರ್ ಜಾನ್, ಐಚೆಟ್ಟಿರ ಸುಬ್ಬಯ್ಯ, ಕೆ.ಬಿ. ಗಣಪತಿ, ಆಲೇಮಾಡ ಮಂಜುನಾಥ್ ಜಾಥಾದಲ್ಲಿ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !