ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಡನ್‌ ಡೆತ್‌’ನಲ್ಲಿ ಕಂಬಿರಂಡ ತಂಡಕ್ಕೆ ಒಲಿದ ಗೆಲುವು

ಕೊಡವ ಕೌಟುಂಬಿಕ ಹಾಕಿ ಟೂರ್ನಿ; 11 ತಂಡಗಳಿಗೆ ಮುನ್ನಡೆ
Last Updated 25 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ವಿರಾಜಪೇಟೆ: ಸಮೀಪದ ಕಾಕೋಟುಪರಂಬುವಿನಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಗುರುವಾರದ ಪಂದ್ಯಾಟದಲ್ಲಿ ಮುಕ್ಕಾಟಿರ (ಕಡಂಗದಾಳ್), ಕಂಬಿರಂಡ, ಮಚ್ಚಾರಂಡ, ಕಂಗಾಂಡ, ನಾಗಂಡ, ಪೆಮ್ಮಂಡ, ಬಯವಂಡ, ಐನಂಡ, ಬಿದ್ದಾಟಂಡ, ನಾಮೇರ ಹಾಗೂ ಮೇರಿಯಂಡ ತಂಡಗಳು ಜಯ ಗಳಿಸಿ ಮುಂದಿನ ಹಂತಕ್ಕೆ ಮುನ್ನಡೆದವು.

ಮುಕ್ಕಾಟಿರ (ಕಡಂಗದಾಳ್) ತಂಡವು 2-1 ಗೋಲುಗಳಿಂದ ಶಾಂತೆಯಂಡ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ವಿಜೇತ ತಂಡದ ಪರ ನಾಣಯ್ಯ ಹಾಗೂ ಕಾವ್ಯ ತಲಾ ಒಂದು ಗೋಲು ದಾಖಲಿಸಿ ಗಮನ ಸೆಳೆದರು. ಎದುರಾಳಿ ತಂಡದ ಪರ ತಿಮ್ಮಯ್ಯ ಒಂದು ಗೋಲು ದಾಖಲಿಸಿದರು.

ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಕಂಬಿರಂಡ ತಂಡವು 6-5 ಗೋಲುಗಳಿಂದ ಸಡನ್ ಡೆತ್‌ನಲ್ಲಿ ಮೇಚಿಯಂಡ ತಂಡವನ್ನು ಮಣಿಸಿತು. ನಿಗದಿತ ಅವಧಿಯ ಆಟದಲ್ಲಿ ಕಂಬಿರಂಡ ತಂಡದ ಪರವಾಗಿ ಮಯೂರ್ ಹಾಗೂ ಬೋಪಣ್ಣ, ಮೇಚಿಯಂಡ ತಂಡದ ಪರ ಅಪ್ಪುಟ ಹಾಗೂ ಪುನೀತ್ ತಲಾ ಒಂದು ಗೋಲು ದಾಖಲಿಸಿದ್ದರಿಂದ ಪಂದ್ಯ ಸಮಬಲವಾಯಿತು. ಟೈಬ್ರೇಕರ್‌ನಲ್ಲಿ ಕಂಬಿರಂಡ ಪರ ಯೋಗೇಶ್, ಮಯೂರ್, ಉಮೇಶ್ ಹಾಗೂ ಮೇಚಿಯಂಡ ಪರ ಪುನಿತ್, ಸೂರಜ್, ರಿತೇಶ್ ತಲಾ ಒಂದು ಗೋಲು ದಾಖಲಿಸಿದ್ದರಿಂದ ಪಂದ್ಯ ಮತ್ತೆ ಸಮಬಲವಾಯಿತು. ಫಲಿತಾಂಶಕ್ಕಾಗಿ ಬಳಿಕ ನಡೆದ ಸಡನ್ ಡೆತ್‌ನಲ್ಲಿ ಕಂಬಿರಂಡ ತಂಡದ ಪರ ಬೋಪಣ್ಣ ಗೋಲು ದಾಖಲಿಸಿ ತಂಡಕ್ಕೆ ಗೆಲುವು ತಂದಿತ್ತರು.

ಕಂಗಾಂಡ ತಂಡವು 4-2 ಗೋಲುಗಳಿಂದ ಟೈಬ್ರೇಕರ್‌ನಲ್ಲಿ ಬೊಳ್ಳಚೇಟ್ಟಿರ ತಂಡವನ್ನು ಮಣಿಸಿ ಮುನ್ನಡೆಯಿತು. ನಿಗದಿತ ಅವಧಿಯ ಆಟದಲ್ಲಿ ಕಂಗಾಂಡ ಪರ ಸೋಮಯ್ಯ ಮತ್ತು ಬೊಳ್ಳಚೇಟ್ಟಿರ ಪರ ಅಯ್ಯಪ್ಪ ಒಂದೊಂದು ಗೋಲು ದಾಖಲಿಸಿದ್ದರಿಂದ ಪಂದ್ಯದಲ್ಲಿ ಸಮಬಲ ಸಾಧಿಸುವಂತಾಯಿತು. ಬಳಿಕ ನಡೆದ ಟೈಬ್ರೇಕರ್‌ನಲ್ಲಿ ಬೊಳ್ಳಚೇಟ್ಟಿರ ಪರ ಪೂವಣ್ಣ ಒಂದು ಗೋಲು ದಾಖಲಿಸಿದರೆ, ಕಂಗಾಂಡ ಪರ ಮುದ್ದಯ್ಯ, ಸೋಮಯ್ಯ ಹಾಗೂ ಮುತ್ತಪ್ಪ ಒಂದೊಂದು ಗೋಲು ದಾಖಲಿಸಿ ತಂಡಕ್ಕೆ ಗೆಲುವು ತಂದಿತ್ತರು.

ನಾಗಂಡ ತಂಡವು 3-0 ಗೋಲುಗಳಿಂದ ಬಲ್ಲಂಡ ತಂಡವನ್ನು ಮಣಿಸಿ ಮನ್ನಡೆಯಿತು. ನಾಗಂಡ ತಂಡದ ಪರ ಉಮೇಶ್ ಎರಡು ಹಾಗೂ ದಿವಿನ್ ಒಂದು ಗೋಲು ದಾಖಲಿಸಿದರು. ಪಾಂಡಂಡ ತಂಡವು ಬರದಿದ್ದರಿಂದ ಮಚ್ಚಾರಂಡ ತಂಡವು ಮುಂದಿನ ಹಂತಕ್ಕೆ ಪ್ರವೇಶಿಸಿತು.

ಪೆಮ್ಮಂಡ ತಂಡವು 4-0 ಗೋಲುಗಳಿಂದ ತಾಪಂಡ ತಂಡವನ್ನು ಮಣಿಸಿ ಮುನ್ನಡೆಯಿತು. ಪೆಮ್ಮಂಡ ತಂಡದ ಪರ ಸೋಮಣ್ಣ ಎರಡು, ಬೋಪಣ್ಣ ಹಾಗೂ ಪೊನ್ನಣ್ಣ ತಲಾ ಒಂದು ಗೋಲು ದಾಖಲಿಸಿದರು.

ಬಯವಂಡ ತಂಡವು 5-4 ಗೋಲುಗಳಿಂದ ಟೈಬ್ರೇಕರ್‌ನಲ್ಲಿ ಮುಂಡ್ಯೋಳಂಡ ತಂಡವನ್ನು ಮಣಿಸಿ ಮುನ್ನಡೆಯಿತು. ನಿಗದಿತ ಅವಧಿಯ ಆಟದಲ್ಲಿ ಬಯವಂಡ ಪರ ಜನಕ ಹಾಗೂ ಮುಂಡ್ಯೋಳಂಡ ತಂಡದ ಪರ ಬೋಪಣ್ಣ ಒಂದೊಂದು ಗೋಲು ದಾಖಲಿಸಿದ್ದರು. ಬಳಿಕ ನಡೆದ ಟೈಬ್ರೇಕರ್‌ನಲ್ಲಿ ಬಯವಂಡ ತಂಡದ ಪರ ಪೊನ್ನಣ್ಣ, ಜನಕ, ಪೂವಣ್ಣ, ಸೋಮಣ್ಣ ಹಾಗೂ ಮುಂಡ್ಯೋಳಂಡ ತಂಡದ ಪರ ಬೋಪಣ್ಣ, ಚೀಯಣ್ಣ ಹಾಗೂ ಅಚ್ಚಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು.

ಐನಂಡ ತಂಡವು 5-0 ಗೋಲುಗಳಿಂದ ಬಲ್ಲಡಿಚಂಡ ತಂಡವನ್ನು ಮಣಿಸಿ ಮುನ್ನಡೆಯಿತು. ಐನಂಡ ತಂಡದ ಪರ ಪೂವಣ್ಣ ಎರಡು ಗೋಲು ಹಾಗೂ ನಾಣಯ್ಯ, ಬೋಪಣ್ಣ ಹಾಗೂ ಉತ್ತಪ್ಪ ತಲಾ ಒಂದು ಗೋಲು ದಾಖಲಿಸಿದರು.

ಬಿದ್ದಾಟಂಡ ತಂಡವು 4-1 ಗೋಲುಗಳಿಂದ ಮಲ್ಚಿರ ತಂಡವನ್ನು ಮಣಿಸಿ ಮುನ್ನಡೆಯಿತು. ವಿಜೇತ ತಂಡದ ಪರ ಅಯ್ಯಪ್ಪ ಹಾಗೂ ಚೆಲ್ಸಿ ಮೇದಪ್ಪ ತಲಾ ಎರಡು ಗೋಲು ದಾಖಲಿಸಿದರೆ, ಎದುರಾಳಿ ತಂಡದ ಶಹನ್ ಬೋಪಯ್ಯ ಒಂದು ಗೋಲು ದಾಖಲಿಸಿದರು.

ನಾಮೇರ ತಂಡವು 2-0 ಗೋಲುಗಳಿಂದ ತಿರುಟಿರ ತಂಡವನ್ನು ಮಣಿಸಿ ಮುನ್ನಡೆಯಿತು. ವಿಜೇತ ತಂಡದ ಪರ ಕರಿನ್ ಹಾಗೂ ವಿನು ತಲಾ ಒಂದು ಗೋಲು ದಾಖಲಿಸಿ ತಂಡಕ್ಕೆ ಜಯ ತಂದಿತ್ತರು.

ಮೇರಿಯಂಡ ತಂಡವು 3-2 ಗೋಲುಗಳಿಂದ ಬಲ್ಲಚಂಡ ತಂಡವನ್ನು ಟೈಬ್ರೇಕರ್‌ನಲ್ಲಿ ಮಣಿಸಿ ಮುನ್ನಡೆಯಿತು. ಮೇರಿಯಂಡ ತಂಡದ ಪರ ಕರಣ್ ಹಾಗೂ ಬಲ್ಲಚಂಡ ತಂಡದ ಪರ ವಿವೇಕ್ ನಿಗದಿತ ಅವಧಿಯ ಆಟದಲ್ಲಿ ತಲಾ ಒಂದು ಗೋಲು ದಾಖಲಿಸಿದ್ದರಿಂದ ಫಲಿತಾಂಶಕ್ಕಾಗಿ ಟೈಬ್ರೇಕರ್‌ ಮೊರೆ ಹೋಗಲಾಯಿತು. ಟೈಬ್ರೇಕರ್‌ನಲ್ಲಿ ಬಲ್ಲಚಂಡ ಪರ ಅದ್ವೈತ್ ಒಂದು ಗೋಲು ದಾಖಲಿಸಿದರೆ, ಮೇರಿಯಂಡ ಪರ ಅಕಿಲ್ ಹಾಗೂ ಶರತ್ ಒಂದೊಂದು ಗೋಲು ದಾಖಲಿಸಿ ತಂಡಕ್ಕೆ ಜಯ ತಂದಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT