ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಭೆ ತಂದ ಗುಲ್‌ಮೊಹರ್‌

ಹೆದ್ದಾರಿಗೆ ನಿಸರ್ಗದ ಹಸಿರು ತೋರಣ
Last Updated 27 ಮೇ 2019, 13:13 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ನಡೆದು ನೋಡು ಕೊಡಗಿನ ಬೆಡಗ‘ ಎಂದು ಕವಿಯೊಬ್ಬರು ಹೇಳಿದಂತೆ ಕೊಡಗಿನ ಪ್ರಾಕೃತಿಕ ಸೊಬಗನ್ನು ನಡೆದಾಡಿಕೊಂಡು ಸವಿಯಬೇಕು. ಬೇಸಿಗೆ ಬಿಸಿಲಲ್ಲಿ ಇಲ್ಲಿನಗಿಡಮರಗಳೆಲ್ಲ ಒಣಗಿದ್ದವು. ಇದೀಗ ಬಿದ್ದ ಮಳೆಗೆ ಅವುಗಳೆಲ್ಲ ಚಿಗುರಿ ಕಂಗೊಳಿಸುತ್ತಿವೆ.ವಸಂತ ಋತುವಿನ ಆಗಮನದೊಂದಿಗೆ ಕೆಲವು ಮರಗಳು ಹೂ ಬಿಟ್ಟು ಪ್ರಕೃತಿ ಮಾತೆ ಮುಡಿಯನ್ನು ಶೃಂಗಾರಗೊಳಿಸಿವೆ.

ನಾಗರಹೊಳೆ ಅರಣ್ಯದ ನಡುವೆ ಹಾದು ಹೋಗಿರುವ ಹುಣಸೂರು, ಗೋಣಿಕೊಪ್ಪಲು ನಡುವಿನ ಅಂತರ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಗುಲ್‌ ಮೊಹರ್ ಹಾಗೂ ಇತರ ಜಾತಿಯ ಮರಗಳ ಹೂಗಳು ಅರಳಿ ಕಂಗೊಳಿಸುತ್ತಿವೆ. ಪಿರಿಯಾಪಟ್ಟಣ ತಾಲ್ಲೂಕಿನ ಅಳ್ಳೂರಿನಿಂದ ತಿತಿಮತಿವರೆಗಿನ 20 ಕಿ.ಮೀ ಮಾರ್ಗದ ಅರಣ್ಯದ ಗಿಡಮರಗಳ ಚಿಗುರು ಭೂ ದೇವಿಗೆ ಹಸಿರುಡುಗೆ ತೊಡಿಸಿದಂತಿದೆ.

ಮುಂದೆ ತಿತಿಮತಿಯಿಂದ ಗೋಣಿಕೊಪ್ಪಲುವರೆಗೂ ಕಾಫಿ ತೋಟದ ನಡುವಿನ ಹೆದ್ದಾರಿ ರಸ್ತೆ ಕಂಗೊಳಿಸುತ್ತಿದೆ. ಲೋಕೋಪಯೋಗಿ ಇಲಾಖೆ ರಸ್ತೆಗೆ ಡಾಂಬಾರ್ ಹಾಕಿ ಅದರ ಎರಡು ಬದಿಗೆ ಬಿಳಿ ಬಣ್ಣದ ಪಟ್ಟೆ ಹಾಕಿದೆ. ರಸ್ತೆಯ ಇಕ್ಕೆಲಗಳಲ್ಲಿ ಆಕಾಶದೆತ್ತರಕ್ಕೆ ಬೆಳೆದ ಮರಗಳ ರೆಂಬೆ ತಲೆ ಬಾಗಿ ನಿಂತಿವೆ. ಪ್ರಯಾಣಿಕರಿಗೆ ನೆರಳು ನೀಡುವುದೇ ಅಲ್ಲದೆ ಭೂದೇವಿಗೂ ತಂಪುಣಿಸಿವೆ.

ದೇವರಪುರ ಗೋಣಿಕೊಪ್ಪಲು ನಡುವಿನ ಚೆನ್ನಂಗೊಲ್ಲಿ ರಸ್ತೆಯ ಎತ್ತರದ ದಿಣ್ಣೆ ವಾಹನ ಸವಾರರಿಗೆ ಸವಾಲಾಗಿದೆ. ಆದರೂ ರಸ್ತೆಯ ಇಕ್ಕೆಲಗಳಲ್ಲಿ ಇರುವ ಗಿಡಮರಗಳ ಸೊಬಗು ಚಾಲಕರ ದಣಿವನ್ನು ನಿವಾರಿಸುತ್ತದೆ. ಈ ರಸ್ತೆಯಲ್ಲಿ ಸುಮಾರು 500 ಮೀಟರ್ ನಷ್ಟು ರಸ್ತೆ ಬೃಹತ್ ದಿಣ್ಣೆಯಿಂದ ಕೂಡಿದೆ. ಬಹಳಷ್ಟು ಲೋಡು ಲಾರಿಗಳು ಈ ದಿಣ್ಣೆಯನ್ನು ಹತ್ತಲಾಗದೆ ಮಾರ್ಗದ ಮಧ್ಯದಲ್ಲಿಯೇ ನಿಂತಿರುತ್ತವೆ. ಇಂತಹ ಮಾರ್ಗದಲ್ಲಿನ ಗಿಡಮರಗಳು ಹಸಿರಿನಿಂದ ಕಂಗೊಳಿಸುತ್ತಿದೆ. ಹಚ್ಚ ಹಸಿರಿನ ಪರಿಸರಕ್ಕೆ ಕೆಂಪು ಬಣ್ಣದ ಗುಲ್ ಮೋಹರ್ ಮತ್ತಷ್ಟು ಮೆರಗು ನೀಡಿದೆ.

ಮತ್ತೊಂದು ಕಡೆ ಗೋಣಿಕೊಪ್ಪಲು, ಪಾಲಿಬೆಟ್ಟ ನಡುವಿನ ಮಾರ್ಗವೂ ಹಸಿರಿನಿಂದ ಕಂಗೊಳಿಸುತ್ತಿದೆ. ಪಾಲಿಬೆಟ್ಟದಲ್ಲಿರುವ ಟಾಟಾ ಕಾಫಿಯ ಗಾಲ್ಫ್ ಮೈದಾನದನ ಗುಲ್ ಮೋಹರ್ ಅರಳಿ ಹಸಿರು ಮುಕ್ಕುವ ಪರಿಸರಕ್ಕೆ ಶೃಂಗಾರಮಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT