ಶನಿವಾರ, ಆಗಸ್ಟ್ 24, 2019
28 °C
ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಗೆ ಭತ್ತದ ನಾಟಿ ಮಾಹಿತಿ

ಗದ್ದೆಯಲ್ಲಿ ಆಡಿ ಸಂಭ್ರಮಿಸಿದ ಚಿಣ್ಣರು

Published:
Updated:
Prajavani

ಮಡಿಕೇರಿ: ಅಲ್ಲಿ ಮಕ್ಕಳದ್ದೇ ಸಂಭ್ರಮ, ಅದಕ್ಕೆ ಹಿರಿಯರ ಸಾಥ್‌, ಕೆಲವು ಮಕ್ಕಳಿಗೆ ಮೊದಲ ಬಾರಿಗೆ ಗದ್ದೆ ನೋಡಿದ ಸಂಭ್ರಮ, ಇನ್ನೂ ಕೆಲವು ಮಕ್ಕಳಿಗೆ ನಾಟಿ ನೆಟ್ಟ ಸಡಗರ, ಗದ್ದೆಗೆ ಇಳಿದ ಮಕ್ಕಳು ನಾಟಿ ನೆಟ್ಟರು, ಕೆಸರಲ್ಲಿ ಮಿಂದು ಸಂಭ್ರಮಿಸಿದರು, ಥಂಡಿ ನೀರಲ್ಲಿ ಮಿಂದೆದ್ದರು... 

ಇಬ್ನಿ ಸ್ಪ್ರಿಂಗ್ಸ್ ಕಾಟೇಜ್ ಹಾಗೂ ಗ್ರೀನ್ ಸಿಟಿ ಫೋರಂ ವತಿಯಿಂದ ಸಮೀಪದ ಇಬ್ನಿವಾಡಿಯ ಚೈಯ್ಯಂಡ ಸತ್ಯ ಗಣಪತಿ ಅವರ ಗದ್ದೆಯಲ್ಲಿ ಶುಕ್ರವಾರ ನಡೆದ ಭತ್ತದ ನಾಟಿ ಸಂಭ್ರಮದ ಝಲಕ್‌.

ಕೊಡಗು ವಿದ್ಯಾಲಯದ ಸುಮಾರು 40 ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ಭತ್ತದ ನಾಟಿ ಮಾಡಿದ ಅನುಭವ ಪಡೆದರು.

ಒಮ್ಮೆಲೆ ಕೆಸರಿಗಿಳಿದ ಮಕ್ಕಳು ಮೈ, ಬಟ್ಟೆಗೆಲ್ಲ ಕೆಸರು ಮಾಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ನಾಟಿ ನೆಡುವ ಬಗ್ಗೆ ಪ್ರಾಯೋಗಿಕ ಜ್ಞಾನ ನೀಡಲಾಯಿತು. ಹಲವು ವಿದ್ಯಾರ್ಥಿಗಳು ಆತಂಕದಲ್ಲಿ ಗದ್ದೆಗೆ ಇಳಿದರು. ಫುಟ್ಬಾಲ್, ಥ್ರೋಬಾಲ್, ಹಗ್ಗಜಗ್ಗಾಟದಲ್ಲಿ ಎಳೆದಾಡುವುದರ ಮೂಲಕ ಸಂತಸ ಪಟ್ಟರು.

ತಮ್ಮ ಇಚ್ಛೆಯಂತೆ ಭತ್ತದ ನಾಟಿ ಮಾಡಿದರು. ಯಾವ ವಿದ್ಯಾರ್ಥಿಗೂ ನಾಟಿ ಮಾಡುವ ಅನುಭವ ಇರಲಿಲ್ಲ. ತಮ್ಮ ಇಚ್ಛೆಯಂತೆ ನಾಟಿ ಮಾಡಿ ಗಮನ ಸೆಳೆದರು.

ಇದೇ ಸಂದರ್ಭ ಸಾಂಪ್ರದಾಯಿಕ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಹ್ಯಾಂಡ್ ಬಾಲ್‌, ಹಗ್ಗಜಗ್ಗಾಟ ಆಟೋಟಗಳನ್ನು ಆಡಿದ ಕ್ರೀಡಾಪಟುಗಳು ಕೆಸರಿನಲ್ಲೇ ಎದ್ದು ಬಿದ್ದು ಓಡಾಡುವ ದೃಶ್ಯಗಳು ಎಲ್ಲರ ಗಮನ ಸೆಳೆಯಿತು. 

ಇದೇ ಸಂದರ್ಭ ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿನ್ನಪ್ಪ ಮಾತನಾಡಿ, ಕೊಡಗಿನಲ್ಲಿ ಪರಿಸರ ಉಳಿಸುವ ಪ್ರಯತ್ನದಲ್ಲಿ ಪೋರಂ ಸಾಕಷ್ಟು ಕೆಲಸ ಮಾಡುತ್ತಿದೆ. ಜತೆಗೆ, ಕಸ ಮುಕ್ತ ಗ್ರಾಮ ಹಾಗೂ ನಗರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ವಚ್ಛತೆ ಸಂದೇಶಗಳನ್ನು ನೀಡುತ್ತದೆ ಎಂದು ತಿಳಿಸಿದರು.

ಫಲಿತಾಂಶ:

ಕೆಸರುಗದ್ದೆ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಕಿಶೋರ್ ರೈ ನಾಯಕತ್ವದ ಟೀಂ ‘ನಾಟಿ ಬಾಯ್ಸ್’ ತಂಡ ಪ್ರಥಮ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯಿತು. ತಂಡದಲ್ಲಿ ಉದಯ್ ಮೊಣ್ಣಪ್ಪ, ನವೀನ್ ಡಿಸೋಜ, ಮಣಿಕಂಠ, ಇಸ್ಮಾಯಿಲ್ ಕಂಡಕೆರೆ, ಸುರೇಶ್, ಲೋಹಿತ್ ಇದ್ದರು.

ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಮನೋಜ್ ನಾಯಕತ್ವದ ತಂಡದ ದ್ವಿತೀಯ ಸ್ಥಾನ ಪಡೆಯಿತು. ತಂಡದಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸುವರ್ಣ ಮಂಜು, ವಿನಯ್, ಜಾಕಿ ದಿವಾಕರ್, ಲೋಕೇಶ್ ಕಾಟಕೇರಿ ಇದ್ದರು.

ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ‘ಪವರ್ ಬಾಯ್ಸ್’ ಪ್ರಥಮ ಸ್ಥಾನ ಪಡೆಯಿತು. ತಂಡದಲ್ಲಿ ವಿಕಾಸ್‌, ರಾಕೇಶ್, ವಿನೋದ್, ಅಜ್ಜಮಕ್ಕಡ ವಿನು, ಎಂ.ಎನ್.ನಾಸೀರ್, ವಿಘ್ನೇಶ್ ಭೂತನಕಾಡು, ಕುಡೆಕಲ್ ಸಂತೋಷ್ ಹಾಜರಿದ್ದರು.

ಅನು ಕಾರ್ಯಪ್ಪ ನಾಯಕತ್ವದ ತಂಡ ‘ಹ್ಯಾಂಡ್ ಬಾಲ್’ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ತಂಡದಲ್ಲಿ ಪ್ರೇಮ್, ನವೀನ್ ಸುವರ್ಣ, ಗೋಪಾಲ್ ಸೋಮಯ್ಯ, ಸುರ್ಜಿತ್, ರೋಷನ್, ಮಲ್ಲಿಕಾರ್ಜನ್ ಇದ್ದರು.

ಬಹುಮಾನ ವಿತರಣೆ:

ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷೆ ಸವಿತಾ ರೈ, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಪೂಳಕಂಡ ರಾಕೇಶ್, ನಿರ್ದೇಶಕರಾದ ಪಿ.ಕೃಷ್ಣಮೂರ್ತಿ ಹಾಜರಿದ್ದರು. 

Post Comments (+)