ಕ್ಷಯರೋಗಮುಕ್ತ ಜಿಲ್ಲೆ ಆಗಿಸಲು ಪಣ

7
ಆಂದೋಲನಕ್ಕೆ ಚಾಲನೆ ನೀಡಿದ ಡಾ.ರಾಜೇಶ್ ಅಭಿಮತ

ಕ್ಷಯರೋಗಮುಕ್ತ ಜಿಲ್ಲೆ ಆಗಿಸಲು ಪಣ

Published:
Updated:

ಮಡಿಕೇರಿ: ಕೊಡಗನ್ನು ಕ್ಷಯ ರೋಗಮುಕ್ತ ಜಿಲ್ಲೆಯನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಕ್ಷಯರೋಗ ಪತ್ತೆ ಆಂದೋಲನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತವನ್ನು 2025ರ ವೇಳೆಗೆ ಕ್ಷಯ ರೋಗಮುಕ್ತ ದೇಶವನ್ನಾಗಿ ಮಾಡುವ ಉದ್ದೇಶದಿಂದ 2ನೇ ಸುತ್ತಿನ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಜ.2ರಿಂದ 12ರವರೆಗೆ ಈ ಆಂದೋಲನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪಲ್ಸ್ ಪೋಲಿಯೊ ಮಾದರಿಯಲ್ಲಿ ಮನೆಮನೆಗೆ ಭೇಟಿ ನೀಡಿ ಕ್ಷಯರೋಗ ಪತ್ತೆ ಹಚ್ಚಿ ಸಂಪೂರ್ಣ ಗುಣಮುಖ ಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಕ್ಷಯರೋಗ ಆಂದೋಲನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರ ತಂಡವು ಮನೆಗಳಿಗೆ ಭೇಟಿ ನೀಡಿ ಕ್ಷಯರೋಗದ ಲಕ್ಷಣ, ಚಿಕಿತ್ಸೆಯ ಕುರಿತು ಸಮಾಲೋಚನೆ ನಡೆಸಿ ರೋಗಿಗಳ ಕಫದ ಮಾದರಿಯನ್ನು ಸ್ಥಳದಲ್ಲಿಯೇ ಸಂಗ್ರಹಿಸಲಿದೆ. ಬಳಿಕ ಕಫ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶಿವಕುಮಾರ್‌ ಮಾತನಾಡಿ, ‘ದೃಢಪಟ್ಟ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಖರೀದಿಗಾಗಿ ತಿಂಗಳಿಗೆ ₹500 ಪ್ರೋತ್ಸಾಹ ಧನವನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 478 ಫಲಾನುಭವಿಗಳಿದ್ದು, ಒಟ್ಟು ₹9.44 ಲಕ್ಷ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆರ್‌ಸಿಎಚ್ ಅಧಿಕಾರಿ ಡಾ.ನೀಲೇಶ್, ಡಾ.ರಾಮಚಂದ್ರ ಕಾಮತ್, ಡಾ.ಮಹೇಶ್, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಎಂ.ಮಹಾದೇವಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !