ಪೊಲೀಸರ ಕಿರುಕುಳ: ಅಮಾನತಿಗೆ ಆಗ್ರಹ

7
ಮಡಿಕೇರಿ: ಬಹುಜನ ಸಮಾಜ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ

ಪೊಲೀಸರ ಕಿರುಕುಳ: ಅಮಾನತಿಗೆ ಆಗ್ರಹ

Published:
Updated:
Prajavani

ಮಡಿಕೇರಿ: ಇಲ್ಲಿನ ಮಂಗಳಾದೇವಿ ನಗರದ ಯುವಕ ಜಯಕುಮಾರ್‌ (24) ಆತ್ಮಹತ್ಯೆ ಮಾಡಿಕೊಳ್ಳಲು ಮೈಸೂರು ಜಿಲ್ಲೆ ಬೈಲುಕೊಪ್ಪ ಹಾಗೂ ಬೆಟ್ಟದಪುರ ಪೊಲೀಸರ ಕಿರುಕುಳವೇ ಕಾರಣವಾಗಿದ್ದು ಸಂಬಂಧಪಟ್ಟವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.  

ಬಹುಜನ ಸಮಾಜ ಪಕ್ಷ, ದಲಿತ ಸಂಘಟನೆಗಳ ಒಕ್ಕೂಟ, ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಹಾಗೂ ಎಸ್‌ಡಿಪಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.  

ನಗರದ ಇಂದಿರಾ ಗಾಂಧಿ (ಚೌಕಿ) ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಯುವಕನ ಸಾವಿಗೆ ಕಾರಣರಾದ ಬೈಲುಕುಪ್ಪೆ ಠಾಣೆಯ ಪಿಎಸ್‌ಐ, ಎಎಸ್‌ಐ, ಬೆಟ್ಟದಪುರ ಠಾಣೆಯ ಪಿಎಸ್‌ಐ, ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಬೇಕು ಎಂದು ಪಟ್ಟು ಹೀಡಿದರು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ಕುಶಾಲನಗರದಲ್ಲಿ ಖಾಸಗಿ ಕ್ಲಿನಿಕ್‌ ನಡೆಸುತ್ತಿದ್ದ ಡಾ.ದಿಲೀಪ್‌ ಅವರ ಕೊಲೆ ನಡೆದಿತ್ತು. ಈ ಕೊಲೆ ಸಂಬಂಧ ನನ್ನನ್ನು ವಿಚಾರಣೆಗೆ ಕರೆದೊಯ್ದು ಆರೋಪ ಒಪ್ಪಿಕೊಳ್ಳುವಂತೆ ಪೊಲೀಸರು ಒತ್ತಾಯಿಸಿ, ಕಿರುಕುಳ ನೀಡಿದ್ದರು’ ಎಂದು ಮೃತ ಜಯಕುಮಾರ್ ತಂದೆ ಕೃಷ್ಣ ದೂರಿದರು. 

‘ನಾನು ಪೊಲೀಸರ ಮಾತು ಕೇಳದಿದ್ದಕ್ಕೆ ನನ್ನ ಪುತ್ರರಾದ ಜಯಕುಮಾರ್ ಹಾಗೂ ಚಂದ್ರಕಾಂತ್‌ನನ್ನು ಬೈಲುಕೊಪ್ಪದ ರೆಸಾರ್ಟ್‌ವೊಂದಕ್ಕೆ ಕರೆದೊಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಆರೋಪ ಹೊರಿಸುವ ಪ್ರಯತ್ನ ಮಾಡಿದ್ದರು. ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದರು. ಜೊತೆಗೆ, ಮೂವರಿಗೂ ಥಳಿಸಿದ್ದರು. ಸುಳ್ಳು ಆರೋಪ ಹೊರಿಸುವ ಪ್ರಯತ್ನದಿಂದ ನೊಂದು ಜಯಕುಮಾರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬಕ್ಕೆ ನ್ಯಾಯ ಕೊಡಿಸಿ’ ಎಂದು ಕೋರಿದರು.

ಪ್ರಕರಣ ಸಂಬಂಧ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪೆನ್ನೇಕರ್ ಅವರಿಗೂ ಮನವಿ ಸಲ್ಲಿಸಲಾಗಿದೆ. ಜಾತಿ ನಿಂದನೆ ಹಾಗೂ ದೈಹಿಕ ಹಲ್ಲೆ ನಡೆಸಿದ್ದೇ ಕಾರಣಕ್ಕೆ ಜಯಕುಮಾರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರ ಕಿರುಕುಳದ ಬಗ್ಗೆ ಡೆತ್‌ನೋಟ್‌ ಸಹ ಬರೆದಿಟ್ಟಿದ್ದು ಸೂಕ್ತ ತನಿಖೆ ನಡೆಸಬೇಕು ಎಂದು ಬಹುಜನ ಸಮಾಜ ಪಕ್ಷದ ಮುಖಂಡ ಮೋಹನ್ ಮೌರ್ಯ ಆಗ್ರಹಿಸಿದರು. ಬಳಿಕ ನ್ಯಾಯ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ವಿವಿಧ ಸಂಘಟನೆ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !