ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿ: ಆರಂಭವಾಗದ ಕಾಮಗಾರಿ

ಕೊಡಗು–ದಕ್ಷಿಣಕನ್ನಡ ಜಿಲ್ಲೆಯ ಸಂಪರ್ಕ ಕೊಂಡಿ ಕುಸಿಯುವ ಭೀತಿ
Last Updated 23 ಜನವರಿ 2019, 10:11 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು– ದಕ್ಷಿಣಕನ್ನಡ ಜಿಲ್ಲೆಯ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭೂಕುಸಿತ ಸಂಭವಿಸಿ 5 ತಿಂಗಳಾದರೂ ಶಾಶ್ವತ ಕಾಮಗಾರಿಗಳು ಆರಂಭಗೊಂಡಿಲ್ಲ. ಮತ್ತೆ ಮಳೆ ಬಂದರೆ ರಸ್ತೆ ಕುಸಿಯುವ ಭೀತಿ ಎದುರಾಗಿದೆ.

ಮಡಿಕೇರಿ, ಸಂಪಾಜೆ, ಸುಳ್ಯ, ಪುತ್ತೂರು ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದು. ಶಿರಾಡಿಘಾಟ್‌ನಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದ ವೇಳೆ ಬೆಂಗಳೂರು ಜನರಿಗೆ ಸಂಪರ್ಕ ಕೊಂಡಿಯಾಗಿತ್ತು. ವಿವಿಧೆಡೆಯ ಸರಕು ಸಾಗಿಸಲು ಇದೂ ಸಹ ಪ್ರಮುಖ ಮಾರ್ಗವಾಗಿತ್ತು.

ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯಿಂದ ಮಡಿಕೇರಿ– ಸಂಪಾಜೆ ನಡುವೆ 30 ಸ್ಥಳಗಳಲ್ಲಿ ಭೂಕುಸಿತವಾಗಿ 25 ಕಿ.ಮೀ ರಸ್ತೆ ಸಂಪೂರ್ಣ ಹಾನಿಗೊಳಗಾಗಿತ್ತು. 45 ದಿನಗಳ ಕಾಲ ವಾಹನ ಸಂಚಾರವೂ ಬಂದ್‌ ಆಗಿತ್ತು. ‘ಎಂ–ಸ್ಯಾಂಡ್‌’ ಚೀಲ, ಜಿಯೋ ಸಿಂಥೆಟಿಕ್‌ ಅಳವಡಿಸಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿತ್ತು. ಆದರೆ, ಈಗ ಶಾಶ್ವತ ಕಾಮಗಾರಿಗಳು ಆರಂಭವಾಗದೇ ಅಲ್ಲಲ್ಲಿ ‘ಎಂ–ಸ್ಯಾಂಡ್’ ಚೀಲಗಳು ಹರಿದು ಹೋಗುತ್ತಿವೆ.

ಮಡಿಕೇರಿಯಿಂದ 2 ಕಿ.ಮೀ ದೂರದಲ್ಲೇ ದೊಡ್ಡ ಪ್ರಮಾಣದ ಭೂಕುಸಿತವಾಗಿತ್ತು. ಮದೆನಾಡು, ಜೋಡುಪಾಲದ ಬಳಿ ರಸ್ತೆಯೇ ಕಣ್ಮರೆಯಾಗಿತ್ತು. ರಸ್ತೆಯಂಚಿನ ಬೆಟ್ಟಗಳು ರಸ್ತೆಗೆ ಕುಸಿದಿದ್ದವು. ಮದೆನಾಡು ಬಳಿ ಪಯಸ್ವಿನಿ ನದಿ ಉಕ್ಕಿ ಹರಿದು ರಸ್ತೆ ಕೊಚ್ಚಿಕೊಂಡು ಹೋಗಿತ್ತು.

‘ಮಳೆಗಾಲಕ್ಕೂ ಮುನ್ನ ತಡೆಗೋಡೆ ನಿರ್ಮಿಸಿ ರಸ್ತೆ ಅಭಿವೃದ್ಧಿ ಪಡಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಮತ್ತೆ ಬಂದ್‌ ಆಗುವ ಎಲ್ಲ ಲಕ್ಷಣಗಳಿವೆ’ ಎಂದು ವಾಹನ ಸವಾರರು ಎಚ್ಚರಿಸುತ್ತಾರೆ. ತಾಳತ್ತಮನೆ, ಕಾಟಕೇರಿ, ಮದೆನಾಡು, ಜೋಡುಪಾಲ, 2ನೇ ಮೊಣ್ಣಂಗೇರಿ, ಕೊಯಿನಾಡು ಗ್ರಾಮಗಳು ಈ ಹೆದ್ದಾರಿಯ ಆಸುಪಾಸಿನಲ್ಲಿವೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹೆದ್ದಾರಿ ಬಂದ್‌ ಆಗಿ ನೂರಾರು ಜನರು ತೊಂದರೆಗೆ ಸಿಲುಕಿದ್ದರು.

‘ರಾಜ್ಯ ಹೆದ್ದಾರಿಗಳ ಕಾಮಗಾರಿ ಆರಂಭವಾಗಿದ್ದರೂ ನಿಧಾನವಾಗಿದೆ. ‍ಮರು ನಿರ್ಮಾಣದ ಕೆಲಸಗಳೂ ಅಷ್ಟೇ ವೇಗವಾಗಿ ನಡೆಯಬೇಕಿತ್ತು’ ಎಂದು ಜನರು ಆಗ್ರಹಿಸುತ್ತಿದ್ದಾರೆ.

ವಾರದಲ್ಲಿ ವರದಿ: ತಜ್ಞರ ತಂಡಕ್ಕೆ ರಸ್ತೆ ನಿರ್ಮಾಣ, ಸೇತುವೆ ವಿನ್ಯಾಸದ ವರದಿ ನೀಡಲು ಕೋರಲಾಗಿದೆ. ತಜ್ಞರು 5 ಬಾರಿ ಭೇಟಿ ನೀಡಿ ರಸ್ತೆಯ ಸ್ಥಿತಿಗತಿ ಪರಿಶೀಲಿಸಿದ್ದಾರೆ. ವಾರದಲ್ಲಿ ಪ್ರಾಥಮಿಕ ವರದಿ ಬರಲಿದೆ. ಕೊಡಗಿನಲ್ಲಿ ಕಳೆದ 50 ವರ್ಷಗಳಲ್ಲಿ ಸುರಿದ ಮಳೆ ಪ್ರಮಾಣದ ಮಾಹಿತಿಯನ್ನು ತಜ್ಞರು ಕೇಳಿದ್ದರು. ಮಾಹಿತಿಯನ್ನೂ ನೀಡಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

₹ 200 ಕೋಟಿ ಅಗತ್ಯ: ಕುಶಾಲನಗರದಿಂದ ಮಡಿಕೇರಿ ತನಕ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವ ಇದೆ. ಮಡಿಕೇರಿಯಿಂದ ಸಂಪಾಜೆ ವರೆಗೆ ಹೆದ್ದಾರಿ ಅಭಿವೃದ್ಧಿಗೆ ₹ 200 ಕೋಟಿ ಅನುದಾನ ಬೇಕು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ 50 ವರ್ಷ ಏನೂ ಆಗದಂತೆ ಹೆದ್ದಾರಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT