‘ಕೊಡವ ಸಮುದಾಯಕ್ಕೆ ಬುಡಕಟ್ಟು ಮಾನ್ಯತೆ ಸಿಗಲಿ’

ಗುರುವಾರ , ಏಪ್ರಿಲ್ 25, 2019
29 °C
ಮಡಿಕೇರಿಯಲ್ಲಿ ‘ಬುಡಕಟ್ಟು ಕುಲಶಾಸ್ತ್ರ ಅಧ್ಯಯನ’ ವಿಚಾರಗೋಷ್ಠಿ

‘ಕೊಡವ ಸಮುದಾಯಕ್ಕೆ ಬುಡಕಟ್ಟು ಮಾನ್ಯತೆ ಸಿಗಲಿ’

Published:
Updated:
Prajavani

ಮಡಿಕೇರಿ: ‘ಕೊಡವರ ಸಂಸ್ಕೃತಿ ಆಚಾರ– ವಿಚಾರವನ್ನು ಅರಿತು ಕೊಡವ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ನೀಡಬೇಕು’ ಎಂದು ರಾಜಕೀಯ ವಿಜ್ಞಾನಿ ಪ್ರೊ.ಬಲವೀರ್‌ ಹರೋರ ಆಗ್ರಹಿಸಿದರು.

ನಗರದ ಕ್ಯಾಪಿಟಲ್ ವಿಲೇಜ್‌ ಸಭಾಂಗಣದಲ್ಲಿ ಗುರುವಾರ ಅಂತರರಾಷ್ಟ್ರೀಯ ಜನಾಂಗೀಯ ತಾರತಮ್ಯ ದಿನಾಚರಣೆಯ ಅಂಗವಾಗಿ ‘ಕೊಡವ ಬುಡಕಟ್ಟು ಕುಲಶಾಸ್ತ್ರ ಅಧ್ಯಯನ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೊಡವ ಸಮುದಾಯದ ಬೇಡಿಕೆ ಅನುಸಾರ ಕೊಡವ ಕುಲಶಾಸ್ತ್ರ ಅಧ್ಯಯನವನ್ನು ಸರ್ಕಾರವು ಕೈಗೆತ್ತಿಕೊಂಡಿರುವುದು ಸಂತೋಷದ ವಿಚಾರ. ಕೊಡವ ಜನಾಂಗದ ಉಳಿವು ಮತ್ತು ಪರಂಪರೆ ಬೆಳವಣಿಗೆಗೆ ಕುಲಶಾಸ್ತ್ರ ಅಧ್ಯಯನ ಪೂರಕ ಎಂದು ಹೇಳಿದರು.

ಕೊಡವರ ಸಾಂಪ್ರದಾಯ ಮತ್ತು ಸಂಸ್ಕೃತಿ ಬುಡಕಟ್ಟು ಜನರಂತೆ ಹೋಲುತ್ತದೆ. ಮೊದಲ ಹಂತವಾಗಿ ಬುಡಕಟ್ಟು ಜನರನ್ನು ಗುರುತಿಸುವ ಕೆಲಸ ಸರ್ಕಾರ ಮಾಡಬೇಕು. ಸಾಕಷ್ಟು ವರ್ಷಗಳಿಂದ ಸರ್ಕಾರಕ್ಕೆ ಸಲ್ಲಿಸಿರುವ ಬೇಡಿಕೆಗೆ ಮನ್ನಣೆ ಸಿಗಬೇಕಿದೆ ಎಂದು ಆಗ್ರಹಿಸಿದರು.

ಸಂವಿಧಾನ ಕಾಯ್ದೆ ಅಡಿ ಜನಾಂಗೀಯ ಸಮೀಕ್ಷೆ ಮಾಡುವ ಮೂಲಕ ಆರ್ಥಿಕತೆ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಹಲವಾರು ವರ್ಷಗಳಿಂದ ಕ್ಷೀಣಿಸುತ್ತಿರುವ ಕೊಡವ ಸಮುದಾಯವನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಭವಿಷ್ಯದ ದೃಷ್ಟಿಯಿಂದ ಯುವ ಜನಾಂಗಕ್ಕೆ ಆಚಾರ– ವಿಚಾರದ ಬಗೆಗಿನ ಅರಿವು ಮೂಡಿಸುವುದಕ್ಕಾಗಿ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದಷ್ಟು ಶೀಘ್ರದಲ್ಲಿ ಕೊಡವ ಕುಲಶಾಸ್ತ್ರ ಅಧ್ಯಯನ ಪೂರ್ಣಗೊಳಿಸಿ, ಕೊಡವ ಜನಾಂಗದ ಸಾಮಾಜಿಕ ಭದ್ರತೆಗೆ ಸಹಕರಿಸಬೇಕು ಎಂದು ಕೋರಿದರು.

ಕೊಡವ ನ್ಯಾಷನಲ್‌ ಕೌನ್ಸಿಲ್‌ (ಸಿಎನ್‌ಸಿ) ಅಧ್ಯಕ್ಷ ಎನ್.ಯು. ನಾಚಪ್ಪ ಮಾತನಾಡಿ, ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆಯ ಅಧ್ಯಯನ ನಡೆಸುತ್ತಿದ್ದು, ಈಗಾಗಲೇ 72 ದಿನಗಳು ಆಗಿವೆ. ಜನಾಂಗ ಬಾಂಧವರು ಸರ್ವೆ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ರಾಜಕೀಯ ಕಾರಣದಿಂದ ಅಧ್ಯಯನವನ್ನು ತಡೆ ಹಿಡಿಯಲಾಯಿತು. ಸಮಾಜ ಕಲ್ಯಾಣ ಸಚಿವಾಲಯವು ಈ ಸರ್ವೆ ಕಾರ್ಯದ ಕೆಲಸವನ್ನು ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ವಹಿಸಿದ್ದು, ಈ ಸಂಬಂಧ ಅನುದಾನ ಕೂಡ ಬಿಡುಗಡೆ ಮಾಡಿದೆ ಎಂದು ನಾಚಪ್ಪ ತಿಳಿಸಿದರು.

ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ. ನಾಣಯ್ಯ, ಸರ್ವೆ ಕಾರ್ಯಕ್ಕೆ ಕೊಡವ ಸಮಾಜದ ವತಿಯಿಂದ ನೆರವು ನೀಡಲಾಗುವುದು. ಈ ಬಗ್ಗೆ ಸಿಎನ್‌ಸಿ ವತಿಯಿಂದ ಅರಿವು ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಕೊಡವ ಸಮುದಾಯದವರು ಸುಮಾರು ಜಿಲ್ಲೆಯಲ್ಲಿ 1 ಲಕ್ಷ ಮಂದಿ ನೆಲೆಸಿದ್ದಾರೆ. ಕೊಡವ ಸಮುದಾಯದವರೆಲ್ಲ ಶ್ರೀಮಂತರು, ಕೃಷಿಕರು ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ, ಕೊಡವ ಸಮುದಾಯದಲ್ಲಿ ಬಹುತೇಕ ಮಂದಿ ಬಡವರಿದ್ದಾರೆ. ಇಂತವರಿಗೆ ಸರ್ಕಾರದ ಸೌಲಭ್ಯ ಸಿಗಬೇಕಿದೆ ಎಂದು ಕೋರಿದರು.

ಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಕೂಪದಿರ ಉತ್ತಪ್ಪ ಮಾತನಾಡಿ, ಸಮಾನತೆಯ ಸಮಾಜ ಬೇಕಿದೆ. ಕೊಡವ ಜನಾಂಗಕ್ಕೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಈ ನಡುವೆ ಪ್ರಕೃತಿ ವಿಕೋಪ, ಮಹಾಮಳೆಯಿಂದ ಆಗಿರುವ ದುರಂತಗಳಿಂದ ಆರ್ಥಿಕ ತೊಂದರೆ ಎದುರಾಗಿದೆ ಎಂದು ನೋವು ತೋಡಿಕೊಂಡರು.

ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆಯ ಡಾ.ಮಧುಸೂದನ್‌, ಡಾ.ನವೀನ್‌, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ, ಪುಲ್ಲೇರ ಸ್ವಾತಿ ಕಾರ್ಯಪ್ಪ, ಮೀನಾ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !