ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜಿನ ನಗರಿಯಲ್ಲಿ ‘ಸ್ವಚ್ಛತಾ ಕ್ರಾಂತಿ’

ಹಸಿ ಕಸ, ಒಣ ಕಸ ಬೇರ್ಪಡಿಸುವಿಕೆ: ಇಂದಿನಿಂದಲೇ ಜಾರಿ
Last Updated 3 ಜೂನ್ 2019, 19:45 IST
ಅಕ್ಷರ ಗಾತ್ರ

ಮಡಿಕೇರಿ: ‘ಮಂಜಿನ ನಗರಿ’ ಮಡಿಕೇರಿಯಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ಈಗ ಸ್ವಚ್ಛತಾ ಕ್ರಾಂತಿಗೆ ಯೋಜನೆ ರೂಪಿಸಿದ್ದು ಹಸಿ ಕಸ, ಒಣ ಕಸ ಮತ್ತು ನೈರ್ಮಲ್ಯ ಕಸ(ಟಾಕ್ಸಿಕ್)ವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವ ವೈಜ್ಞಾನಿಕ ಕ್ರಮವನ್ನು ತಕ್ಷಣದಿಂದಲೇ ಜಾರಿಗೆ ತರಲು ಮುಂದಾಗಿವೆ.

ಸಾರ್ವಜನಿಕರು ತ್ಯಾಜ್ಯ ವಿಲೇವಾರಿಯ ಪ್ರಯತ್ನಗಳಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದರು.

ಮೊದಲ ಹಂತದಲ್ಲಿ ಮಡಿಕೇರಿ ನಗರದಲ್ಲಿ ಸ್ವಚ್ಛತೆ ಮತ್ತು ಘನ ತ್ಯಾಜ್ಯ ನಿರ್ವಹಣೆ ಮಾಡಲು ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರದಾದ್ಯಂತ ಸಂಗ್ರಹವಾಗುವ ಹಸಿ ಕಸ, ಒಣ ಕಸವನ್ನೆಲ್ಲಾ ಒಟ್ಟಾಗಿ ಬೆಟ್ಟ ಪ್ರದೇಶದಲ್ಲಿ ವಿಲೇವಾರಿ ಮಾಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಆದ್ಯತೆಯ ಮೇರೆಗೆ ಘನ ತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ತ್ಯಾಜ್ಯ ವಿಲೇವಾರಿ ಸಂಕಷ್ಟ. ಕೇವಲ ವಾರ, ತಿಂಗಳಲ್ಲಿ ಬಗೆಹರಿಯುವುದಿಲ್ಲ ಎಂದು ಹೇಳಿದದರು.

ಕಸ ವಿಲೇವಾರಿಯ ಸಮಸ್ಯೆ ಬಗೆಹರಿಸಲು ಶಾಶ್ವತ ಯೋಜನೆ ರೂಪಿಸಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ನಗರಸಭೆಯ ಮೂಲಕ ಹೆಚ್ಚುವರಿ 20 ಕಾರ್ಮಿಕರನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಜೂನ್ 4ರಿಂದಲೇ ನಗರ ವ್ಯಾಪ್ತಿಯಲ್ಲಿ ಪ್ರತಿದಿನ ಹಸಿ ಕಸವನ್ನು ಸಂಗ್ರಹಿಸುವ ಕಾರ್ಯ ನಡೆಯಲಿದೆ. ನೂತನ ತಾಂತ್ರಿಕತೆಯನ್ನು ಬಳಸಿ ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ. ಒಣ ಕಸವನ್ನು ಬೇರ್ಪಡಿಸಲಾಗುತ್ತದೆ. ಹೀಗೆ ಬೇರ್ಪಟ್ಟ ಪ್ಲಾಸ್ಟಿಕ್ ಹಾಗೂ ಬಟ್ಟೆಗಳನ್ನು ಸಿಮೆಂಟ್ ಸಂಸ್ಥೆಗಳಿಗೆ ಖರೀದಿ ಮಾಡಲು ಕಾನೂನಿನ ಅಡಿ ಅವಕಾಶ ನೀಡಲಾಗುವುದು ಎಂದು ಹೇಳಿದರು.

ನಗರದಲ್ಲಿ ತ್ಯಾಜ್ಯದಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಕೃಷಿಕರಿಗೆ ಮಾರಾಟ ಮಾಡುವ ಜವಾಬ್ದಾರಿಯನ್ನು ಮಳೆ ಹಾನಿ ಸಂತ್ರಸ್ತರು ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಕಾಲೂರಿನ ಪ್ರಾಜೆಕ್ಟ್ ಕೂರ್ಗ್‌ಗೆ ವಹಿಸಲಾಗುವುದು ಎಂದು ಅನೀಸ್‌ ಕಣ್ಮಣಿ ಹೇಳಿದರು.

ಯಾವ ವಾರ– ಯಾವ ಕಸ: ಮನೆಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಮೊದಲಾದ ಘನ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು. ಇದನ್ನು ವಾರದ ಬುಧವಾರ ಮತ್ತು ಶನಿವಾರಗಳಂದು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ರೀತಿ ಸ್ಯಾನಿಟರಿ ನ್ಯಾಫ್‌ಕಿನ್ಸ್ ಮೊದಲಾದ ನೈರ್ಮಲ್ಯ ಕಸವನ್ನು ವಾರಕ್ಕೆ ಎರಡು ಬಾರಿ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಈ ನೈರ್ಮಲ್ಯ ಕಸ ವಿಲೇವಾರಿಗೆ ಯಾರೂ ಮುಂದೆ ಬಂದಿಲ್ಲ. ಜಿಲ್ಲಾ ಆಸ್ಪತ್ರೆಯ ತ್ಯಾಜ್ಯ ವಿಲೇವಾರಿ ಜವಾಬ್ದಾರಿ ನಿರ್ವಹಿಸುತ್ತಿರುವವರನ್ನು ಸಂಪರ್ಕಿಸಲಾಗಿದೆ ಎಂದು ಹೇಳಿದರು.

ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡಲು ಜಿಲ್ಲಾಡಳಿತ ಹಾಗೂ ನಗರಸಭೆ ಗೊತ್ತು ಮಾಡಿರುವ ಸೂಚನೆಯಂತೆ ಸಾರ್ವಜನಿಕರು ನಡೆದುಕೊಳ್ಳಬೇಕು. ಇದನ್ನು ಪಾಲಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗುತ್ತದೆ. ನಿಯಮ ಮೀರಿದರೆ ಅಂತಹ ಮನೆಗಳಿಂದ ಕಸ ಸಂಗ್ರಹಿಸುವುದನ್ನು ಸ್ಥಗಿತಗೊಳಿಸಲಾಗುವುದು. ರಸ್ತೆಬದಿ ಕಸ ಹಾಕುವುದನ್ನು ತಪ್ಪಿಸಲು ಅಗತ್ಯ ಪ್ರದೇಶದಲ್ಲಿ ಸಿಸಿ ಟಿ.ವಿ. ಕ್ಯಾಮೆರಾ ಅಳವಡಿಸಲಾಗುವುದು. ಕೋಳಿ ಮಾಂಸದ ಅಂಗಡಿಗಳ ತ್ಯಾಜ್ಯದಿಂದ ಉಂಟಾಗುತ್ತಿರುವ ಅಶುಚಿತ್ವದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆಸ್ಪತ್ರೆಗಳ ತ್ಯಾಜ್ಯ ಸಂಗ್ರಹವಿಲ್ಲ:ನಗರ ವ್ಯಾಪ್ತಿಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳ ತ್ಯಾಜ್ಯವನ್ನು ಸಾರ್ವಜನಿಕ ಕಸ ಸಂಗ್ರಹದೊಂದಿಗೆ ಸಂಬಂಧಪಟ್ಟವರು ಹಾಕುವಂತಿಲ್ಲ. ಆಸ್ಪತ್ರೆಗಳ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ತನ್ನದೇ ಆದ ನಿಯಮಗಳಿದ್ದು, ಅದರಂತೆಯೇ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಸ್ವಚ್ಛತಾ ಕಾರ್ಯಗಳಿಗೆ ಗ್ರೀನ್ ಸಿಟಿ ಫೋರಂ ಕೈಜೋಡಿಸಲಿದ್ದು ತ್ಯಾಜ್ಯ ವಿಲೇವಾರಿ ಬಗ್ಗೆ ಜನ ಸಮುದಾಯದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಒಳಗೊಂಡ ಸುಮಾರು 200 ಮಂದಿಯ ‘ಹಸಿರು ಪಡೆ’ ರಚಿಸಲಾಗಿದೆ. ಈ ತಂಡ ಪ್ರತಿ ಎರಡನೇ ಶನಿವಾರ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದೆ ಎಂದುಗ್ರೀನ್ ಸಿಟಿ ಫೋರಂ ಸ್ಥಾಪಕ ಅಧ್ಯಕ್ಷ ಚೆಯ್ಯಂಡ ಸತ್ಯ ತಿಳಿಸಿದರು.

ಫೋರಂ ಅಧ್ಯಕ್ಷ ಕುಕ್ಕೆರ ಬಿ. ಜಯಾ ಚಿಣ್ಣಪ್ಪ, ಪ್ರತಿ ಮನೆಗಳಲ್ಲಿ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಮಹತ್ವ ಮತ್ತು ಹಸಿ ಕಸವನ್ನು ಮನೆಯಲ್ಲೇ ಗೊಬ್ಬರವನ್ನಾಗಿ ಪರಿವರ್ತಿಸಿಕೊಳ್ಳುವ ಸುಲಭ ವಿಧಾನದ ಬಗ್ಗೆ ಮಾಹಿತಿ ನೀಡಿದರು.

ಸ್ವಚ್ಛತಾ ಅಭಿಯಾನ ಹಾಗೂ ಯೋಜನೆ ಕುರಿತು ಜಾಗೃತಿ ಮೂಡಿಸುವ ಸಾಕ್ಷ್ಯಚಿತ್ರವನ್ನು ಇದೇ ಸಂದರ್ಭ ಪ್ರದರ್ಶಿಸಲಾಯಿತು. ಸ್ವಚ್ಛತಾ ಜಾಗೃತಿ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಕೊಡಗು ಫಾರ್ ಟುಮಾರೋ ಸಂಘಟನೆ ಪದಾಧಿಕಾರಿ ಪಿ.ಸಿ. ಕಾವೇರಪ್ಪ, ಧನ್ಯಾ, ನಗರಸಭಾ ಆಯುಕ್ತ ರಮೇಶ್, ಸ್ವಚ್ಛತಾ ಆಂದೋಲನದ ರಾಯಭಾರಿ ಮೋಂತಿ ಗಣೇಶ, ಗ್ರೀನ್ ಸಿಟಿ ಫೋರಂ ಮತ್ತು ಕೊಡಗು ಫಾರ್ ಟುಮಾರೋ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT