‘ಬೆಳಕು’ ಕಾಣದ 5 ಸಾವಿರ ಮನೆಗಳು

7
‘ಸೌಭಾಗ್ಯ’ ಯೋಜನೆಯಡಿ ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸಿದ್ಧತೆ

‘ಬೆಳಕು’ ಕಾಣದ 5 ಸಾವಿರ ಮನೆಗಳು

Published:
Updated:

ಮಡಿಕೇರಿ: ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಕೊಡಗು ಜಿಲ್ಲೆಯಲ್ಲಿ ಸುಮಾರು 5 ಸಾವಿರ ಮನೆಗಳಿಗೆ ಇನ್ನೂ ವಿದ್ಯುತ್‌ ಸಂಪರ್ಕವೇ ಲಭ್ಯವಾಗಿಲ್ಲ!

ಗ್ರಾಮೀಣ ಪ್ರದೇಶದ ನೂರಾರು ಜನರು ಇಂದಿಗೂ ಕತ್ತಲೆಯ ಕೂಪದಲ್ಲೇ ಕಾಲ ಕಳೆಯುತ್ತಿದ್ದಾರೆ. ರಾತ್ರಿ ವೇಳೆ ಸೀಮೆಎಣ್ಣೆ ದೀಪವೇ ಆಸರೆ. ಸೆಸ್ಕ್ ಸಿಬ್ಬಂದಿ ನಡೆಸಿದ ಸಮೀಕ್ಷೆಯಿಂದ ‘ಬೆಳಕು’ ಕಾಣದ ಮನೆಗಳ ಸಂಖ್ಯೆ ಗೊತ್ತಾಗಿದೆ. 

ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ತಾಲ್ಲೂಕಿನಲ್ಲಿ ಸೆಸ್ಕ್‌ ಸಿಬ್ಬಂದಿ ಸಮೀಕ್ಷೆ ನಡೆಸಿದ್ದಾರೆ. 13 ಸಾವಿರ ಮನೆಗಳಲ್ಲಿ 5 ಸಾವಿರದಷ್ಟು ಮನೆಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲದಿರುವುದು ಗೊತ್ತಾಗಿದೆ. ಅದರಲ್ಲೂ ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಗಿರಿಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅವರೆಲ್ಲ ಇಂದಿಗೂ ಕತ್ತಲೆಯಲ್ಲಿ ದಿನದೂಡುತ್ತಿದ್ದಾರೆ.

ಗುಡ್ಡಗಳ ಮೇಲೆ ಮನೆ ಇರುವುದು, ಚದುರಿದಂತಿರುವ ಗ್ರಾಮಗಳು, ಒಂಟಿ ಮನೆ, ವಿದ್ಯುತ್‌ ಮಾರ್ಗ ಎಳೆಯಲು ಅರಣ್ಯ ಇಲಾಖೆ ಅಡ್ಡಿ... ಹೀಗೆ ವಿವಿಧ ಕಾರಣಗಳಿಂದಾಗಿ ಕೊಡಗಿನ ಹಲವು ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ. ಇದೀಗ ಕೇಂದ್ರ ಸರ್ಕಾರದ ‘ಸೌಭಾಗ್ಯ’ ಯೋಜನೆಯಡಿ ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸಿದ್ಧತೆ ನಡೆದಿದೆ.

ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯು ವಿಶೇಷವಾಗಿ ಈ ಯೋಜನೆಗೆ ಆಯ್ಕೆಯಾಗಿದ್ದು, ಸೌಲಭ್ಯ ಪಡೆಯಲು ಜನರು ಮುಂದಾಗಿದ್ದಾರೆ. ‘ಬೆಳಕು’ ಪಡೆಯುವ ನಿರೀಕ್ಷೆಯಲ್ಲಿ ಇದುವರೆಗೂ 4,200 ಕುಟುಂಬಗಳು ಅರ್ಜಿ ಸಲ್ಲಿಸಿವೆ.

‘ಅರ್ಜಿಗಳ ಪರಿಶೀಲನೆ ಪ್ರಗತಿಯಲ್ಲಿದೆ. ಏಜೆನ್ಸಿ ನಿಗದಿಯಾದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ಮಳೆಗಾಲಕ್ಕೂ ಮೊದಲು ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು. ಈ ಹಿಂದೆ ಒಂಟಿ ಮನೆಗಳಿಗೆ ಸಂಪರ್ಕ ಕಲ್ಪಿಸಲು ವಿದ್ಯುತ್‌ ಮಾರ್ಗ ಎಳೆಯುವ ಖರ್ಚನ್ನು ಫಲಾನುಭವಿಗಳೇ ಭರಿಸಬೇಕಿತ್ತು. ಹೀಗಾಗಿ, ಯಾರೂ ಮುಂದೆ ಬರುತ್ತಿರಲಿಲ್ಲ. ಈಗ ಹೊಸದಾಗಿ ಎಳೆಯುವ ವಿದ್ಯುತ್ ಮಾರ್ಗಕ್ಕೂ ಸೌಭಾಗ್ಯ ಯೋಜನೆಯಡಿ ಅನುದಾನ ಲಭಿಸಲಿದೆ’ ಎಂದು ಸೆಸ್ಕ್‌ ಕಾರ್ಯನಿರ್ವಾಹಕ ಎಂಜಿನಿಯರ್‌ ಸೋಮಶೇಖರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !