ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ₹8 ಕೋಟಿ ನೆರವು ವಿತರಣೆಗೆ ಚಾಲನೆ

ಕೊಡಗು ನೆರೆ ಸಂತ್ರಸ್ತರೊಂದಿಗೆ ಸಮಾಲೋಚನಾ ಸಭೆ
Last Updated 10 ಜನವರಿ 2019, 14:23 IST
ಅಕ್ಷರ ಗಾತ್ರ

ಮಡಿಕೇರಿ: ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯು ಕೊಡಗು ನೆರೆ ಸಂತ್ರಸ್ತರಿಗೆ ಘೋಷಿಸಿದ್ದ ₹ 8 ಕೋಟಿ ನೆರವು ವಿತರಣೆಗೆ ಗುರುವಾರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.

ನಗರದಲ್ಲಿ ನಡೆದ ಸಂತ್ರಸ್ತರ ಕುಟುಂಬಗಳ ಸಮಾಲೋಚನಾ ಸಭೆಯಲ್ಲಿ ಕೆಲವು ಸಂತ್ರಸ್ತರಿಗೆ ಸಾಂಕೇತಿಕವಾಗಿ ಚೆಕ್‌ ವಿತರಿಸಿದರು.

‘ಸಂತ್ರಸ್ತರ ಬಗ್ಗೆ ಅನುಕಂಪ ವ್ಯಕ್ತಪಡಿಸುವ ಬದಲಿಗೆ ನೆರವು ಕಲ್ಪಿಸಲು ಆದ್ಯತೆ ನೀಡಬೇಕು. ಸರ್ಕಾರ ಶೀಘ್ರವೇ ಸಂತ್ರಸ್ತರಿಗೆ ಮನೆ, ರಸ್ತೆ ನಿರ್ಮಿಸಿಕೊಡುವ ಮೂಲಕ ಹೊಸ ಬದುಕಿಗೆ ನೆರವಾಗಬೇಕು’ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.

‘ಕೊಡಗಿಗೆ ಐಡಿಬಿಐ ಬ್ಯಾಂಕ್‌ ಮೂಲಕ ₹ 450 ಕೋಟಿ ಸಾಲ ವಿತರಿಸಲಾಗಿದೆ. ಜನರು ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಒಳಗಾದ ಬಳಿಕ ಎರಡು ತಿಂಗಳ ಬಡ್ಡಿಯನ್ನು ನಾವೇ ಪಾವತಿಸಿದ್ದೇವೆ. ಸಂಕಷ್ಟದ ವೇಳೆ ಬಡ್ಡಿ ಸಂಪೂರ್ಣ ಮನ್ನಾ ಮಾಡುವ ಅನಿವಾರ್ಯತೆ ಇದೆ. ಬ್ಯಾಂಕ್‌ ಅಧಿಕಾರಿಗಳು ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸಂತ್ರಸ್ತ ಮಹಿಳೆಯರಿಗೆ ಕರಕುಶಲ ವಸ್ತು, ಆಹಾರ ಉತ್ಪನ್ನಗಳ ತಯಾರಿಕೆ, ಬಟ್ಟೆ ಹೊಲಿಗೆಯ ಮೂಲಕ ಸ್ವಾವಲಂಬಿ ಬದುಕಿಗೆ ನೆರವು ಕಲ್ಪಿಸಲಾಗುವುದು. ಮನೆ, ಗೃಹೋಪಯೋಗಿ ವಸ್ತುಗಳಿಗೆ ವಿಮೆ ಮಾಡಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್‌.ಮಂಜುನಾಥ್‌, ಮನೆ, ಭೂಮಿ ಕಳೆದುಕೊಂಡ ಪ್ರತಿ ಕುಟುಂಬಕ್ಕೆ ಗರಿಷ್ಠ ₹ 65 ಸಾವಿರ ನೀಡಲಾಗುವುದು. ಒಂದು ವಾರದಲ್ಲಿ 2,106 ಕುಟುಂಬಗಳ ಬ್ಯಾಂಕ್‌ ಖಾತೆಗೆ ಈ ಹಣ ಸಂದಾಯ ಆಗಲಿದೆ. ಅದಕ್ಕೆ ₹ 8 ಕೋಟಿ ಅಗತ್ಯವಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 2 ಕೋಟಿ ಪಾವತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಅದಕ್ಕೂ ಮೊದಲು ಹೆಗ್ಗಡೆ ಅವರು ಭೂಕುಸಿತಕ್ಕೆ ಒಳಗಾದ 6 ಗ್ರಾಮಗಳಿಗೆ ಭೇಟಿನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT