ಪ್ರತಾಪ ಸಿಂಹ ವಿರುದ್ಧ ಕಾಂಗ್ರೆಸ್‌ ದೂರು

ಬುಧವಾರ, ಏಪ್ರಿಲ್ 24, 2019
31 °C

ಪ್ರತಾಪ ಸಿಂಹ ವಿರುದ್ಧ ಕಾಂಗ್ರೆಸ್‌ ದೂರು

Published:
Updated:

ಮಡಿಕೇರಿ: ಮೈಸೂರು- ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರು ಸುಳ್ಳು ಜಾಹೀರಾತು ನೀಡುವ ಮೂಲಕ ಜಿಲ್ಲೆಯ ಜನರನ್ನು ವಂಚಿಸುತ್ತಿದ್ದಾರೆ. ಅದರ ವಿರುದ್ಧ ದೂರು ನೀಡಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರಧಾನ ಮಂತ್ರಿ ಮೋದಿ ಮಾಡುವ ರೀತಿಯಲ್ಲಿಯೇ ಸುಳ್ಳು ಮಾಹಿತಿಗಳನ್ನೇ ನೀಡಿ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಈ ಕುರಿತು ಚುನಾವಣಾ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಪ್ರತಾಪ ಸಿಂಹ ಅವರ ಅವಧಿಯಲ್ಲಿ ಯಾವುದೇ ಅನುದಾನ ಹಾಗೂ ಕಾಮಗಾರಿಗಳು ಜಿಲ್ಲೆಯ ಜನತೆಯನ್ನು ತಲುಪಿಲ್ಲ. ಕೇಂದ್ರದಿಂದ ₹ 500 ಕೋಟಿ ಅನುದಾನ ತರಲಾಗಿದೆ ಎನ್ನುವ ಪ್ರತಾಪಸಿಂಹ, ಜಿಲ್ಲೆಗೆ ₹ 500 ತರುವಲ್ಲಿಯೂ ವಿಫಲರಾಗಿದ್ದಾರೆ’ ಎಂದು ದೂರಿದರು.

ಮತ ಪಡೆಯಲು ಅಭಿವೃದ್ಧಿ ಕಾರ್ಯದ ಕುರಿತು ಜನರಿಗೆ ಸುಳ್ಳು ಮಾಹಿತಿ ರವಾನಿಸುತ್ತಿದ್ದಾರೆ. ಜಾಹೀರಾತಿನಲ್ಲಿ ಬಂದ ಎಲ್ಲ ಕಾಮಗಾರಿಯನ್ನು ಅವರು ಮಾಡಿಲ್ಲ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಸಿ.ಮಹದೇವಪ್ಪ ಅವರ ಪರಿಶ್ರಮದಿಂದಲೇ ಅನುದಾನ ಬಂದಿತ್ತು ಎಂದು ತಿಳಿಸಿದರು.

ಪ್ರತಾಪ ಸಿಂಹ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಬಗ್ಗೆ ಲೆಕ್ಕಪತ್ರಗಳನ್ನು ಹಿಡಿದು ಚುನಾವಣೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಪಂಕಜಾ ಮಾತನಾಡಿ, ‘ಪ್ರತಾಪ ಸಿಂಹ ಸೋಲಿನ ಭೀತಿಯಿಂದ ಸುಳ್ಳು ಮಾಹಿತಿ ನೀಡುತ್ತ ಜನರ ಹಾದಿ ತಪ್ಪಿಸುತ್ತಿದ್ದಾರೆ. ಮತ್ತೊಂದೆಡೆ ಮೋದಿ ಹೆಸರು ಹೇಳಿಕೊಂಡು ತಮಗೆ ಮತ ಹಾಕಿ ಎಂದು ಕೇಳುತ್ತಿದ್ದಾರೆ. ಈ ರೀತಿ ಕೇಳಲು ನಾಚಿಕೆ ಆಗುವುದಿಲ್ಲವೇ? ಧೈರ್ಯವಿದ್ದರೆ ತಾನು ಮಾಡಿದ ಕೆಲವನ್ನು ವಿವರಿಸುತ್ತ ಜನರ ಬೆಂಬಲ ಪಡೆದು ಗೆಲುವು ಸಾಧಿಸಿ ತೋರಿಸಲಿ’ ಎಂದು ಸವಾಲು ಹಾಕಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕುಮುದಾ ಧರ್ಮಪ್ಪ, ಸುನಿತಾ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !