ಮಂಗಳವಾರ, ಸೆಪ್ಟೆಂಬರ್ 28, 2021
24 °C

ದೇಶಸೇವೆಗೂ ಸೈ, ಕ್ರೀಡೆಗೂ ಜೈ ನಿವೃತ ಕ್ಯಾಪ್ಟನ್ ಹೊಸೋಕ್ಲು ಚಿಣ್ಣಪ್ಪ

ರೆಜಿತ್ ಕುಮಾರ್ ಗುಹ್ಯ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ಆತ ಗ್ರಾಮೀಣ ಭಾಗದಿಂದ ಬೆಳೆದು ಬಂದಿದ್ದಾದರೂ ಭಾರತೀಯ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿದ್ದಾರೆ. ಸಾಲದೇ ಕ್ರೀಡೆಯಲ್ಲಿಯೂ ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ ನಿವೃತ ಕ್ಯಾಪ್ಟನ್ ಹೊಸೋಕ್ಲು ಚಿಣ್ಣಪ್ಪ.

ಇವರು ಮೂಲತಃ ಸಿದ್ದಾಪುರದ ಗುಹ್ಯ ಗ್ರಾಮದವರು. ಚಿಕ್ಕ ವಯಸ್ಸಿನಲ್ಲಿ ಮನೆಯಿಂದ ಶಾಲೆಗೆ ಪ್ರತಿದಿನ 8 ಕಿ.ಮೀ ನಡೆದುಕೊಂಡು ಹೋಗುತ್ತಿದ್ದರು. ಶಾಲಾ ದಿನಗಳಲ್ಲೇ ಓಟದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಚಿಣ್ಣಪ್ಪ ಅವರು, ಓದಿನೊಂದಿಗೆ ಕ್ರೀಡೆಯನ್ನೂ ಮೈಗೂಡಿಸಿಕೊಮಡಿದ್ದರು. ಹಲವು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದರು. 

ಕ್ರೀಡಾ ಸಾಧನೆಯೆ 1984ರಲ್ಲಿ ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಸಲ್ಲಿಸಲು ಸಹಾಯಕವಾಯಿತು.  ಸೇನೆಯಲ್ಲಿ ಸೇರಿದ ಬಳಿಕವೂ ಕ್ರೀಡೆಯನ್ನು ಬಿಡದೇ, ಆರ್ಮಿ ಕ್ರಾಸ್‍ಕಂಟ್ರಿ ಚಾಂಪಿಯನ್‍ಶಿಪ್, ಆರ್ಮಿ ಮ್ಯಾರಥಾನ್ ಚಾಂಪಿಯನ್‍ಶಿಪ್, ಸರ್ವಿಸಸ್ ಕ್ರಾಸ್ ಕಂಟ್ರಿ ಚಾಂಪಿಯನ್‍ಶಿಪ್ ಸೇರಿದಂತೆ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಗಿಟ್ಟಿಸಿಕೊಂಡರು. ಉತ್ತಮ ಅಥ್ಲಿಟ್ ಆಗಿದ್ದ ಚಿಣ್ಣಪ್ಪ ಸೇನೆಯಲ್ಲಿದ್ದುಕೊಂಡೇ  ಸಿಂಗಪೂರ್‌, ಮಲೇಷ್ಯಾ, ಪೋರ್ಚುಗಲ್, ಹಂಕಾಂಗ್, ರಷ್ಯಾ, ಫ್ರಾನ್ಸ್, ಗ್ರೀಸ್, ಥೈಲಾಂಡ್ ರಾಷ್ಟ್ರಗಳಲ್ಲಿ ನಡೆದ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಿದ್ದರು.

ಇವರು ಸೇನೆಯಲ್ಲಿದ್ದ ಸಂದರ್ಭ ಕಾರ್ಗಿಲ್, ಪೂಂಚ್ ಸೆಕ್ಟರ್ ಪಾಕೀಸ್ತಾನ ಗಡಿ, ಸಿಕ್ಕಿಂ ಚೀನಾ ಗಡಿ ಹಾಗೂ ರಾಷ್ಟಪತಿ ಅವರ ಅಂಗರಕ್ಷನಾಗಿ, ಎರಡು ವರ್ಷ ಕ್ರೀಡಾ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದರು. 2016 ರಲ್ಲಿ ನಿವೃತ್ತರಾದರು. ಇದೀಗ ಮರಗೋಡುವಿನಲ್ಲಿ ವಾಸವಾಗಿದ್ದು, ಪ್ರತಿ ನಿತ್ಯ ಓಡುವ ಹವ್ಯಾಸ ಮೈಗೂಡಿಸಿಕೊಂಡಿದ್ದಾರೆ. ನಿವೃತ್ತಿಯ ನಂತರವೂ ಬೆಂಗಳೂರು, ಮಂಗಳೂರು, ಹೈದರಾಬಾದಿನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲಟಿಕ್ಸ್ ನಲ್ಲಿ ಭಾಗವಹಿಸಿ ಹಲವು ಪದಕವನ್ನು ಪಡೆದುಕೊಂಡಿದ್ದಾರೆ. ಕಳೆದ ವರ್ಷ ಶ್ರೀಲಂಕಾದಲ್ಲಿ ನಡೆದ ಅಂತರರಾಷ್ಟ್ರೀಯ ಮಾಸ್ಟರ್ಸ್ ಅಥ್ಲಟಿಕ್ಸ್‌ ಚಿಣ್ಣಪ್ಪರವರು ಆಯ್ಕೆಯಾಗಿದ್ದರು. ಈ ವೇಳೆ ಬೈಕ್ ಅಪಘಾತದಲ್ಲಿ ಕಾಲಿಗೆ ಪೆಟ್ಟಾದ್ದರಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಚಿಣ್ಣಪ್ಪ ಅವರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಉಚಿತ ತರಬೇತಿ ನೀಡುವ ಹಂಬಲ

ಮೂರು ದಶಕಗಳ ಕಾಲ ದೇಶಸೇವೆ ಸಲ್ಲಿಸಿರುವ ಕ್ಯಾಪ್ಟನ್ ಚಿಣ್ಣಪ್ಪ, ಯುವ ಜನಾಂಗಕ್ಕೆ ಉಚಿತವಾಗಿ ಕ್ರೀಡಾ ತರಬೇತಿ ಹಾಗೂ ದೇಶಸೇವೆ ಸಲ್ಲಿಸಲು ಇಚ್ಚಿಸುವ ಯುವ ಸಮೂಹಕ್ಕೆ ಸೇನೆ ತರಬೇತಿ ನೀಡಬೇಕೆಂಬ ಹಂಬಲ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು